ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ: ಸಂಸದರ ನಡವಳಿಕೆಗೆ ಸಭಾಧ್ಯಕ್ಷರ ಕಳವಳ, ಕ್ರಮಕೈಗೊಳ್ಳುವ ಎಚ್ಚರಿಕೆ

Last Updated 30 ಜುಲೈ 2021, 10:09 IST
ಅಕ್ಷರ ಗಾತ್ರ

ನವದೆಹಲಿ: ಪೆಗಾಸಸ್ ಗೂಢಚರ್ಯೆ ಪ್ರಕರಣ ಸೇರಿದಂತೆ ವಿವಿಧ ವಿಷಯಗಳನ್ನು ಇಟ್ಟುಕೊಂಡು ಸದನದಲ್ಲಿ ಪ್ರತಿಭಟನೆ ನಡೆಸುವಾಗ ಕೆಲವು ಸಂಸದರು ನಡೆದುಕೊಂಡ ರೀತಿಯ ಬಗ್ಗೆ ರಾಜ್ಯಸಭೆಯ ಸಭಾಪತಿ ವೆಂಕಯ್ಯನಾಯ್ಡು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ‘ಇದೇ ರೀತಿ ಸಂಸದರು ವರ್ತಿಸಿದರೆ, ಸೂಕ್ತ ಕ್ರಮ ಕೈಗೊಳ್ಳುವುದಾಗಿ‘ ಎಚ್ಚರಿಕೆ ನೀಡಿದ್ದಾರೆ.

ಸದನದ ಕಲಾಪದ ವೇಳೆ ಕೆಲವು ಸಂಸದರು ಶಿಳ್ಳೆ ಹೊಡೆಯುತ್ತಿದ್ದರೆ, ಕೆಲವರು ಸಚಿವರ ವಿಚಾರ ಮಂಡನೆಗೆ ಅಡ್ಡಿಯುಂಟು ಮಾಡಲು ಫಲಕಗಳನ್ನು ಹಿಡಿದು ಪ್ರದರ್ಶಿಸುತ್ತಿದ್ದರು. ಕಾಂಗ್ರೆಸ್ ಮತ್ತು ಟಿಎಂಸಿಯಂತಹ ವಿರೋಧ ಪಕ್ಷಗಳ ಸಂಸದರು ವಿವಿಧ ಸಮಸ್ಯೆಗಳ ಕುರಿತು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸುತ್ತಿದ್ದಾಗ, ಕೆಲವು ಸಂಸದರು ಮಾರ್ಷಲ್‌ಗಳ ಹೆಗಲ ಮೇಲೆ ಕೈ ಹಾಕಿದ್ದರು.‌

‘ಸಂಸತ್‌ ಸದಸ್ಯರ ಇಂಥ ನಡವಳಿಕೆಯಿಂದ ಸದನದ ಘನತೆ ಮತ್ತು ಪ್ರತಿಷ್ಠೆಗೆ ಕುಂದುಂಟಾಗುತ್ತದೆ‘ ಎಂದು ಕಳವಳ ವ್ಯಕ್ತಪಡಿಸಿದ ಸಭಾಧ್ಯಕ್ಷ ವೆಂಕಯ್ಯ ನಾಯ್ಡು, ‘ಎಲ್ಲ ಸಂಸದರು ಸದನದಲ್ಲಿ ಶಿಷ್ಠಾಚಾರ ಮತ್ತು ಸಭ್ಯತೆಯನ್ನು ಕಾಯ್ದುಕೊಳ್ಳಬೇಕು ಎಂದು ಮನವಿ ಮಾಡುತ್ತಿದ್ದೇನೆ‘ ಎಂದರು.

‌‘ತಾಳ್ಮೆಗೂ ಒಂದು ಮಿತಿ ಇರುತ್ತದೆ. ದಯವಿಟ್ಟು ಸದನದ ಗೌರವ ಮತ್ತು ಘನತೆಯನ್ನು ಕಾಪಾಡಬೇಕು‘ ಎಂದು ನಾಯ್ಡು ಅವರು ಮನವಿ ಮಾಡಿದರು.

ಸದನದಲ್ಲಿನ ಸದಸ್ಯರ ನಡವಳಿಕೆ ಕಂಡು ಬೇಸರ ವ್ಯಕ್ತಪಡಿಸಿದ ಸಭಾಧ್ಯಕ್ಷರು, ‘ಸದನದಲ್ಲಿ ಹೀಗೆ ಗದ್ದಲ ಮುಂದುವರಿದರೆ, ಇದನ್ನು ನಿಲ್ಲಿಸಲು ನನ್ನ ಬಳಿ ಎರಡು ಆಯ್ಕೆಗಳಿವೆ. ಒಂದು, ಸದನವನ್ನೇ ‘ಮಾರುಕಟ್ಟೆ‘ ಎಂದು ಘೋಷಿಸುವುದು ಅಥವಾ ಸೂಕ್ತ ಕ್ರಮ ಕೈಗೊಳ್ಳುವುದು‘ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

‘ಸಂಸತ್ತಿಗೆ ತನ್ನದೇ ಆದ ಘನತೆ, ಗೌರವವಿದೆ. ಸದನದೊಳಗೆ ಅದನ್ನು ಕಾಯ್ದುಕೊಳ್ಳಬೇಕಿದೆ. ಸಮಸ್ಯೆಗಳ ಬಗ್ಗೆ ಪ್ರತಿಭಟನೆ ಮಾಡುವುದು ಉತ್ತಮ ಕೆಲಸ. ಆದರೆ, ಅದರಿಂದ ಸದನದ ಘನತೆ ಮತ್ತು ಪ್ರತಿಷ್ಠೆಗೆ ಧಕ್ಕೆಯುಂಟಾಗಬಾರದು‘ ಎಂದು ನಾಯ್ಡು ಹೇಳಿದರು.

ಈ ಬಾರಿಯ ಮುಂಗಾರು ಅಧಿವೇಶನ ಆರಂಭವಾದಾಗಿನಿಂದ ರಾಜ್ಯಸಭೆಯಲ್ಲಿ ವಿವಿಧ ವಿರೋಧ ಪಕ್ಷಗಳ ನಾಯಕರು ಪೆಗಾಸಸ್ ಗೂಢಚರ್ಯೆ ಪ್ರಕರಣ, ಕೃಷಿ ಕಾಯ್ದೆಗಳು ಮತ್ತು ಬೆಲೆ ಏರಿಕೆ ಕುರಿತು ಸರ್ಕಾರದ ವಿರುದ್ಧ ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಸದನದ ಕಲಾಪಕ್ಕೆ ಅಡ್ಡಿಯುಂಟಾಗುತ್ತಿದ್ದು, ಹಲವು ಬಾರಿ ಕಲಾಪವನ್ನು ಮುಂದೂಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT