ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಜೆಟ್‌ ಅಧಿವೇಶನ: ಮೊದಲ ಹಂತ ಮುಕ್ತಾಯ

ಎರಡು ಬಾರಿ ಮಾತ್ರ ವಿಪಕ್ಷಗಳ ಸದಸ್ಯರಿಂದ ಸಭಾತ್ಯಾಗ
Last Updated 11 ಫೆಬ್ರುವರಿ 2022, 13:56 IST
ಅಕ್ಷರ ಗಾತ್ರ

ನವದೆಹಲಿ: ಬಜೆಟ್‌ಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಉತ್ತರ ನೀಡುವುದರೊಂದಿಗೆ, ಬಜೆಟ್‌ ಅಧಿವೇಶನದ ರಾಜ್ಯಸಭೆ ಕಲಾಪದ ಮೊದಲ ಹಂತವು ಯಾವುದೇ ಗದ್ದಲ, ಪ್ರತಿಭಟನೆ ಇಲ್ಲದೇ ಶುಕ್ರವಾರ ಮುಕ್ತಾಯವಾಯಿತು.

ಎರಡು ತಿಂಗಳ ಹಿಂದೆ ನಡೆದಿದ್ದ ಚಳಿಗಾಲದ ಅಧಿವೇಶನ ಗದ್ದಲ, ಪ್ರತಿಭಟನೆಗೆ ಸಾಕ್ಷಿಯಾಗಿತ್ತು. ಸದನದಲ್ಲಿ ಅಶಿಸ್ತಿನ ನಡವಳಿಕೆ ತೋರಿದ ಆರೋಪದ ಮೇಲೆ ವಿರೋಧ ಪಕ್ಷಗಳ 12 ಜನ ಸಂಸದರ ಅಮಾನತು ಮಾಡಲಾಗಿತ್ತು. ವಿಪಕ್ಷಗಳು ಪ್ರಸ್ತಾಪಿಸಿದ್ದ ವಿಷಯಗಳ ಬಗ್ಗೆ ಚರ್ಚಿಸಲು ಸರ್ಕಾರ ಆಸಕ್ತಿ ತೋರಿರಲಿಲ್ಲ. ಬಜೆಟ್‌ ಅಧಿವೇಶನದ ಮೊದಲ ಹಂತ ಇದಕ್ಕೆ ಇದಕ್ಕೆ ವ್ಯತಿರಿಕ್ತವೆಂಬಂತೆ ಇತ್ತು.

ಎರಡು ಬಾರಿ ಮಾತ್ರ ವಿರೋಧ ಪಕ್ಷಗಳು ಸಭಾತ್ಯಾಗ ಮಾಡಿದ್ದನ್ನು ಬಿಟ್ಟರೆ, ಈ ಬಾರಿಯ ಕಲಾಪಕ್ಕೆ ಅಡ್ಡಿಯುಂಟಾಗಲಿಲ್ಲ. ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯಕ್ಕೆ ಪ್ರಧಾನಿ ನರೇಂದ್ರ ಮೋದಿ ಉತ್ತರಿಸುವಾಗ ಕಾಂಗ್ರೆಸ್‌ ಸದಸ್ಯರು, ನೀಟ್‌ ವಿಷಯವಾಗಿ ಕೆಲ ವಿರೋಧ ಪಕ್ಷಗಳ ಸದಸ್ಯರು ಸಭಾತ್ಯಾಗ ಮಾಡಿದ್ದರು. ಆಂಧ್ರಪ್ರದೇಶದ ವಿಭಜನೆಯನ್ನು ಪ್ರಸ್ತಾಪಿಸಿದ ಪ್ರಧಾನಿ ವಿರುದ್ಧ ಟಿಆರ್‌ಎಸ್‌ ಸಂಸದರು ಹಕ್ಕುಚ್ಯುತಿ ಮಂಡನೆಗೆ ಮುಂದಾಗಿದ್ದರು. ಇದಕ್ಕೆ ಅವಕಾಶ ಸಿಗದಿದ್ದಾಗ, ಸಭಾಪತಿ ಪೀಠದ ಮುಂದೆ ಪ್ರತಿಭಟಿಸಿ, ನಂತರ ಸಭಾತ್ಯಾಗ ಮಾಡಿದ್ದರು.

ರಾಜ್ಯಸಭೆಯಲ್ಲಿ ನಡೆದ ಬಜೆಟ್ ಮೇಲಿನ ಚರ್ಚೆಯಲ್ಲಿ 45 ಸಂಸದರು ಪಾಲ್ಗೊಂಡಿದ್ದರು. ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ 40 ಸಂಸದರು, ಲೋಕಸಭೆಯಲ್ಲಿ 54 ಸಂಸದರು ಮಾತನಾಡಿದರು.

ಉಪಸಭಾಪತಿ ಹರಿವಂಶ್‌ ಸಿಂಗ್‌ ಮಾತನಾಡಿ, ‘ಬಜೆಟ್‌ ಅಧಿವೇಶನದ ಮೊದಲ ಹಂತದಲ್ಲಿ ನಿಗದಿತ ಸಮಯಕ್ಕಿಂತ ಅರ್ಧಗಂಟೆಗೂ ಹೆಚ್ಚು ಅವಧಿಗೆ ರಾಜ್ಯಸಭಾ ಕಲಾಪಗಳು ನಡೆದಿವೆ. ಪ್ರತಿಯೊಬ್ಬ ಸದಸ್ಯಗೂ ಇದರ ಕೀರ್ತಿ ಸಲ್ಲುತ್ತದೆ’ ಎಂದು ಹೇಳಿದರು. ನಂತರ, ಅವರು ಬಜೆಟ್‌ ಅಧಿವೇಶನವನ್ನು ಮಾರ್ಚ್‌ 14ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT