ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಯೋಧ್ಯೆ ರಾಮ ಮಂದಿರ | ಭಕ್ತಿ–ಸಂಭ್ರಮಗಳ ಪರಾಕಾಷ್ಠೆ

Last Updated 5 ಆಗಸ್ಟ್ 2020, 19:06 IST
ಅಕ್ಷರ ಗಾತ್ರ
ADVERTISEMENT
""
""

ಹಿಂದೂಗಳ ಶತಮಾನಗಳ ಕನಸು ಮತ್ತು ಹಲವು ದಶಕಗಳ ಹೋರಾಟ ಸಾಕಾರವಾದ ಕ್ಷಣಕ್ಕೆ ದೇಶದಾದ್ಯಂತ ಸಂಭ್ರಮದ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಕ್ತರು ರಾಮನಾಮ ಜಪಿಸಿದ್ದಾರೆ. ಸಾಮಾಜಿಕ ಜಾಲತಾಣವೂ ಇದಕ್ಕೆ ಹೊರತಾಗಿರಲಿಲ್ಲ. ಆದರೆ, ಅಲ್ಲಿ ಪರ– ವಿರೋಧಗಳು ಸಮಾನವಾಗಿ ಕಾಣಿಸಿವೆ. ಮೀಮ್‌ಗಳು, ಹಳೆಯ ಚಿತ್ರಗಳು ಮತ್ತು ಪತ್ರಿಕೆಗಳ ಪುಟಗಳನ್ನು ಹಲವರು ಪುನಃ ಪೋಸ್ಟ್‌ ಮಾಡಿದ್ದಾರೆ.

ಅಯೋಧ್ಯೆ: ಅಯೋಧ್ಯೆಯಲ್ಲಿ ರಾಮಂದಿರಕ್ಕೆ ಶಿಲಾನ್ಯಾಸ ನೆರವೇರುತ್ತಿದ್ದಂತೆ ದೇಶದಲ್ಲಿ ಕೋಟ್ಯಂತರ ರಾಮಭಕ್ತರ ಭಕ್ತಿ– ಶ್ರದ್ಧೆಯ ಪರಾಕಾಷ್ಠೆ ಕಂಡುಬಂದಿದೆ. ಜನರು ಬೀದಿಗಳಲ್ಲಿ ಪಟಾಕಿ ಸಿಡಿಸಿ ಕುಣಿದಾಡಿದರು. ಮನೆಗಳಲ್ಲಿ ಕೇಸರಿ ಧ್ವಜ ಹಾರಿಸಿ ಸಂಭ್ರಮಪಟ್ಟರು. ರಸ್ತೆಗಳಲ್ಲಿ ಧ್ವಜ ಹಿಡಿದು ಮೆರವಣಿಗೆ ಮಾಡಿದರು. ಜೈ ಶ್ರೀರಾಮ್ ಎಂಬ ಘೋಷಣೆಗಳು ಮೊಳಗಿದವು.

ಅಯೋಧ್ಯೆ ನಗರವಂತೂ ಮಂಗಳವಾರ ರಾತ್ರಿಯಿಂದಲೇ ನವವಧುವಿನಂತೆ ಸಿಂಗಾರಗೊಂಡು ಸಿದ್ಧವಾಗಿತ್ತು. ಇಲ್ಲಿನ ಎಲ್ಲ ಮನೆಗಳೂ ಬಣ್ಣ ಹಾಗೂ ದೀಪಗಳಿಂದ ಕಂಗೊಳಿಸುತ್ತಿದ್ದವು. ಬುಧವಾರ ಬೆಳಿಗ್ಗೆ ಅಯೋಧ್ಯೆಗೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಅಲ್ಲಿ ತಾತ್ಕಾಲಿಕ ಮಂದಿರದಲ್ಲಿರುವ ರಾಮನ ಮೂರ್ತಿಯ ದರ್ಶನ ಪಡೆದರು. ಗರ್ಭಗುಡಿಯಲ್ಲಿ ರಾಮ ವಿಗ್ರಹದ ಎದುರು ಪ್ರಾರ್ಥನೆ ಸಲ್ಲಿಸಿದರು. 1949ರ ಬಳಿಕ ರಾಮನ ದರ್ಶನ ಪಡೆದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾದರು. ಪ್ರಧಾನಿಯಾದ ಬಳಿಕ ಅವರು ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ್ದರೂ, ಅಯೋಧ್ಯೆಗೆ ಹೋಗಿರಲಿಲ್ಲ.

ರಾಮಮಂದಿರ ನಿರ್ಮಾಣ ಆಗುವವರೆಗೆ ಅಯೋಧ್ಯೆಗೆ ಭೇಟಿ ನೀಡುವುದಿಲ್ಲ ಎಂದು 1992ರಲ್ಲಿ ಅವರು ಶಪಥ ಮಾಡಿದ್ದರು. ತಿರಂಗ ಯಾತ್ರೆಯ ಭಾಗವಾಗಿ ಅವರು ಕೊನೆಯದಾಗಿ ಅಯೋಧ್ಯೆಗೆ ಭೇಟಿ ನೀಡಿದ್ದರು. ರಾಮಜನ್ಮಭೂಮಿಗೆ ಭೇಟಿ ನೀಡಿದ ಮೊದಲ ಪ್ರಧಾನಿ ಮೋದಿ ಎಂದು ಉತ್ತರ ಪ್ರದೇಶ ಸರ್ಕಾರ ಹೇಳಿದೆ.

ರಂಗೋಲಿ ಬಿಡಿಸಿದ ಸಚಿವೆ ನಿರ್ಮಲಾ

ರಾಮಮಂದಿರ ಭೂಮಿಪೂಜೆಯ ಪುಣ್ಯ ದಿನದಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮನೆಯಲ್ಲಿ ಸಾಂಪ್ರದಾಯಿಕ ರಂಗೋಲಿ ಬಿಡಿಸಿ ಸಂಭ್ರಮಿಸಿದರು. ರಂಗೋಲಿಯಲ್ಲಿ ಶ್ರೀರಾಮ ಜಯಂ ಎಂದು ಬರೆದು ಧನ್ಯತೆ ಮೆರೆದರು. ಈ ಚಿತ್ರವನ್ನು ಅವರು ಟ್ವಟರ್‌ನಲ್ಲಿ ಹಂಚಿಕೊಂಡಿದ್ದಾರೆ. ದೇಶದ ಬಹುತೇಕ ರಾಜ್ಯಗಳಲ್ಲಿ ಜನರು ರಾಮಮಂದಿರ ನಿರ್ಮಾಣದ ಅಂಗವಾಗಿ ಮನೆಗಳಲ್ಲಿ ರಾಮಪೂಜೆಯಲ್ಲಿ ತೊಡಗಿದ್ದರು. ಮನೆಗಳಲ್ಲಿ ಚೆಂದದ ರಂಗೋಲಿ ಬಿಡಿಸಿ ಧನ್ಯತೆ ಮೆರೆದರು. ಮಕ್ಕಳಿಗೆ ರಾಮನ ವೇಷ ತೊಡಿಸಿ ಸಂಭ್ರಮಿಸಿದರು. ರಾಮಧ್ಯಾನ ಮಾಡಿದರು.

ರಾಮಯಣ ಓದಿ ಹೇಳಿದ ಉಪರಾಷ್ಟ್ರಪತಿ

ಭೂಮಿಪೂಜೆಯ ಮಂಗಳಕರ ದಿನದಂದು ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು ಅವರ ಮನೆಯಲ್ಲಿ ಸಂಭ್ರಮ ನೆಲೆಯೂರಿತ್ತು. ಉಪರಾಷ್ಟ್ರಪತಿ ಭವನದ ಸಿಬ್ಬಂದಿಗೆ ರಾಮಾಯಣ ಕತೆಯನ್ನು ಸ್ವತಃ ನಾಯ್ಡು ಅವರೇ ಓದಿ ಹೇಳಿದರು. ರಾಮಾಯಣದಲ್ಲಿ ಬರುವ ಸ್ವಾರಸ್ಯಕರ ಅಂಶಗಳನ್ನು ಅವರು ವಿವರಿಸಿ ಹೇಳಿದರು. ಪತ್ನಿ ಉಷಾ ನಾಯ್ಡು ಅವರು ರಾಮನ ವಿಗ್ರಹಕ್ಕೆ ಚಂದದ ಅಲಂಕಾರ ನೆರವೇರಿಸಿ ಪೂಜೆಗೈದರು.

28 ವರ್ಷಗಳ ಉಪವಾಸ ತ್ಯಜಸಿದ ವೃದ್ಧೆ

ಮಧ್ಯಪ್ರದೇಶದ ಜಬಲ್ಪುರದ 88 ವರ್ಷದ ಮಹಿಳೆ ಊರ್ಮಿಳಾ ಚತುರ್ವೇದಿ ಅವರಿಗೆ ಆಗಸ್ಟ್ 5 ಸಂಭ್ರಮದ ದಿನವಾಗಿತ್ತು. 16ನೇ ಶತಮಾನದ ಬಾಬರಿ ಮಸೀದಿಯನ್ನು 1992ರ ಡಿಸೆಂಬರ್ 6ರಂದು ಒಡೆದು ಹಾಕಿದ ದಿನದಿಂದ ಅವರು ಅದೇ ಸ್ಥಳದಲ್ಲಿ ಮಂದಿರ ನಿರ್ಮಾಣವಾಗಬೇಕು ಎಂದು ಆಗ್ರಹಿಸಿ ಉಪವಾಸ ಇದ್ದರು. ಅಂದಿನಿಂದ ಊಟ ತ್ಯಜಿಸಿದ್ದ ಅವರು, ಕೇವಲ ಹಣ್ಣುಗಳನ್ನು ಸೇವಿಸುತ್ತ ಇಷ್ಟುವರ್ಷ ಕಾದಿದ್ದರು. ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸುವದರೊಂದಿಗೆ ಊರ್ಮಿಳಾ ಅವರ ಶಪಥ ಕೊನೆಗೊಂಡಿತು. ಅವರು 29 ವರ್ಷಗಳ ಉಪವಾಸ ಕೊನೆಗೊಳಿಸಿದರು.

ಹಾರಿತು ಕೇಸರಿ ಧ್ವಜ

ರಾಮಮಂದಿರ ನಿರ್ಮಾಣಕ್ಕೆ ಮೋದಿ ಅವರು ಭೂಮಿಪೂಜೆ ನೆರವೇರಿಸುತ್ತಿದ್ದಂತೆಯೇ ದೇಶದಾದ್ಯಂತ ಸಂಭ್ರಮ ಎಲ್ಲೆಮೀರಿತು. ಇಡೀ ದೇಶ ರಾಮಭಜನೆಯಲ್ಲಿ ತೊಡಗಿತ್ತು. ಜನರು ಬೀದಿಗಳಲ್ಲಿ ಪಟಾಕಿ ಸಿಡಿಸಿ ಕುಣಿದಾಡಿದರು. ಮನೆಗಳಲ್ಲಿ ಕೇಸರಿ ಧ್ವಜ ಹಾರಿಸಿ ಸಂಭ್ರಮಪಟ್ಟರು. ರಸ್ತೆಗಳಲ್ಲಿ ಧ್ವಜ ಹಿಡಿದು ಮೆರವಣಿಗೆ ಮಾಡಿದರು. ಜೈ ಶ್ರೀರಾಮ್ ಎಂಬ ಘೋಷಣೆಗಳು ಮೊಳಗಿದವರು. ಭೂಮಿಪೂಜೆ ನಡೆದ ಅಯೋಧ್ಯೆ ಮಂಗಳವಾರ ರಾತ್ರಿಯಿಂದಲೇ ನವವಧುವಿನಂತೆ ಸಿಂಗಾರಗೊಂಡು ಸಿದ್ಧವಾಗಿತ್ತು. ಎಲ್ಲ ಮನೆಗಳೂ ಬಣ್ಣ ಹಾಗೂ ದೀಪಗಳಿಂದ ಕಂಗೊಳಿಸುತ್ತಿದ್ದವು.

ಸಂವಿಧಾನದಲ್ಲಿ ‘ರಾಮ’

ಭಾರತೀಯ ಸಂವಿಧಾನದ ಮೂಲ ಪ್ರತಿಯಲ್ಲಿ ಶ್ರೀರಾಮನ ಚಿತ್ರವಿದೆ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಹೇಳಿದ್ದಾರೆ. ರಾಮ, ಲಕ್ಷ್ಮಣ ಹಾಗೂ ಸೀತಾಮಾತೆ ಇರುವ ಚಿತ್ರವನ್ನು ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ರಾವಣನ ಸಂಹಾರದ ಬಳಿಕ ಮೂವರು ಅಯೋಧ್ಯೆಗೆ ಮರಳುತ್ತಿರುವ ಚಿತ್ರವನ್ನು ‘ಮೂಲಭೂತ ಹಕ್ಕುಗಳು’ ಅಧ್ಯಾಯದ ಆರಂಭದಲ್ಲಿ ಚಿತ್ರಿಸಲಾಗಿದೆ ಎಂದು ಅವರು ಹೇಳಿದ್ದಾರೆ.

* ಅಯೋಧ್ಯೆಯಲ್ಲಿ ರಾಮಮಂದಿರಕ್ಕೆ ಅಡಿಪಾಯ ಹಾಕಿದ ಈ ಶುಭದಿನದಂದು ಎಲ್ಲರಿಗೂ ಶುಭಾಶಯಗಳು. ದೇಗುಲವು ಭಾರತದ ಸಾಮಾಜಿಕ, ಸಾಮರಸ್ಯ ಮತ್ತು ಜನರ ಉತ್ಸಾಹವನ್ನು ವ್ಯಾಖ್ಯಾನಿಸುತ್ತದೆ. ಇದು ರಾಮರಾಜ್ಯದ ಆದರ್ಶಗಳಿಗೆ ಸಾಕ್ಷಿಯಾಗಲಿದೆ ಮತ್ತು ಆಧುನಿಕ ಭಾರತದ ಸಂಕೇತವಾಗಿದೆ

–ರಾಮನಾಥ ಕೋವಿಂದ್, ರಾಷ್ಟ್ರಪತಿ

* ಇದು ಭಾರತ ಇತಿಹಾಸದ ಸುವರ್ಣ ಅಧ್ಯಾಯ. ಶತಮಾನಗಳ ಕಾಲದ ತ್ಯಾಗ, ಹೋರಾಟ ಮತ್ತು ಭಗವಾನ್ ರಾಮನ ಅಸಂಖ್ಯಾತ ಭಕ್ತರ ತಪಸ್ಸಿನ ಪರಿಣಾಮವಾಗಿ ದೇವಾಲಯ ನಿರ್ಮಾಣವಾಗುತ್ತಿದೆ. ಭವ್ಯ ದೇವಾಲಯ ನಿರ್ಮಾಣವು ಪ್ರಧಾನಿ ನರೇಂದ್ರ ಮೋದಿಯವರ ಪ್ರಬಲ ಮತ್ತು ನಿರ್ಣಾಯಕ ನಾಯಕತ್ವವನ್ನು ತೋರಿಸುತ್ತದೆ

-ಅಮಿತ್ ಶಾ, ಕೇಂದ್ರ ಗೃಹಸಚಿವ

* ಇದು ಬಹಳ ತೃಪ್ತಿ ನೀಡಿದ, ಸಂತೋಷದ ದಿನ. ಮಂದಿರ ನಿರ್ಮಾಣಕ್ಕಾಗಿ ತ್ಯಾಗ ಮಾಡಿದ ಎಷ್ಟೋ ಜನರನ್ನು ಕೋವಿಡ್ ಕಾರಣವಾಗಿ ಇಲ್ಲಿಗೆ ಆಹ್ವಾನಿಸಲು ಸಾಧ್ಯವಾಗಲಿಲ್ಲ. ಅವರೆಲ್ಲರೂ ಅನಂತ ಉತ್ಸಾಹದಲ್ಲಿದ್ದಾರೆ. 20–30 ವರ್ಷಗಳ ಕಾಲ ದುಡಿದರೆ ನಮ್ಮ ಸಂಕಲ್ಪ ಈಡೇರುತ್ತದೆ ಎಂಬುದಾಗಿ ಹಿಂದಿನ ಆರ್‌ಎಸ್‌ಎಸ್ ಮುಖ್ಯಸ್ಥರು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುತ್ತೇನೆ

–ಮೋಹನ್ ಭಾಗವತ್, ಆರ್‌ಎಸ್‌ಎಸ್ ಮುಖ್ಯಸ್ಥ

* ಮರ್ಯಾದಾ ಪುರುಷೋತ್ತಮ ಭಗವಾನ್ ರಾಮನು ಅತ್ಯುತ್ತಮ ಮಾನವ ಗುಣ ಸಂಪನ್ನಗಳ ಪ್ರತೀಕ. ಅವನು ನಮ್ಮ ಮನಸ್ಸಿನ ಆಳದಲ್ಲಿ ಇರುವ ಮಾನವೀಯತೆಯನ್ನು ಪ್ರತಿನಿಧಿಸುತ್ತಾನೆ. ರಾಮ ಅಂದರೆ ಪ್ರೀತಿ. ಅವನು ಎಂದಿಗೂ ದ್ವೇಷದಲ್ಲಿ ಅಭಿವ್ಯಕ್ತಿಸುವುದಿಲ್ಲ. ರಾಮ ಎಂದರೆ ಸಹಾನುಭೂತಿ. ಅವನು ಎಂದಿಗೂ ಕ್ರೌರ್ಯವನ್ನು ಅಭಿವ್ಯಕ್ತಿಸುವುದಿಲ್ಲ. ರಾಮ ಎಂದರೆ ನ್ಯಾಯ. ಅವನು ಎಂದಿಗೂ ಅನ್ಯಾಯದ ಮೂಲಕ ಪ್ರಕಟವಾಗುವುದಿಲ್ಲ

–ರಾಹುಲ್ ಗಾಂಧಿ, ಕಾಂಗ್ರೆಸ್ ನಾಯಕ

* ಭಗವಾನ್ ರಾಮನ ಆಶೀರ್ವಾದ ನಮಗೆ ಸದಾ ಇರಲಿ ಎಂದು ಆಶಿಸುತ್ತೇನೆ. ರಾಮನ ಆಶೀರ್ವಾದವು ದೇಶದ ಬಡತನ, ಹಸಿವು ತೊಡೆದುಹಾಕಲು ಸಹಾಯ ಮಾಡಲಿ. ಭಾರತವು ವಿಶ್ವದ ಅತ್ಯಂತ ಶಕ್ತಿಶಾಲಿ ದೇಶವಾಗಿ ಹೊರಹೊಮ್ಮುತ್ತದೆ. ಮುಂಬರುವ ಕಾಲದಲ್ಲಿ ಜಗತ್ತಿಗೆ ಮಾರ್ಗದರ್ಶನ ನೀಡುತ್ತದೆ. ಜೈ ಶ್ರೀ ರಾಮ್. ಜೈ ಭಜರಂಗಬಲಿ

–ಅರವಿಂದ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ

* ಗಂಗಾ-ಜಮುನಾ ಸಂಸ್ಕೃತಿ ಹೊಂದಿರುವ ಅಲಹಾಬಾದ್‌ನಲ್ಲಿ ನಾನು ಬೆಳೆದೆ. ಸಹಾನುಭೂತಿ, ಸಹಬಾಳ್ವೆ, ಗೌರವ ಮತ್ತು ಘನತೆ ಬಿಂಬಿಸುವ ರಾಮ್‌ಲೀಲಾ ಕತೆ ಎಂದರೆ ನನಗಿಷ್ಟ. ದೇವರು ರಾಮ ಎಲ್ಲರಲ್ಲೂ ಒಳ್ಳೆಯತನವನ್ನು ಕಂಡವನು. ನಮ್ಮ ನಡವಳಿಕೆಯು ಅವನ ಪರಂಪರೆಯನ್ನು ಪ್ರತಿಬಿಂಬಿಸಬೇಕು. ಪ್ರೀತಿ ಮತ್ತು ಏಕತೆಯ ಹಾದಿಯಲ್ಲಿ ದ್ವೇಷದ ಕಿಡಿಗಳು ಹೊತ್ತದಂತೆ ನೋಡಿಕೊಳ್ಳಬೇಕಿದೆ

–ಮಹಮ್ಮದ್ ಕೈಫ್, ಕ್ರಿಕೆಟಿಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT