ಮಂಗಳವಾರ, ಜೂನ್ 28, 2022
25 °C
ಪ್ರಾದೇಶಿಕ ಪಕ್ಷಗಳಿಗೆ ಸಿದ್ಧಾಂತವಿಲ್ಲ: ಕಾಂಗ್ರೆಸ್‌ ಚಿಂತನ ಶಿಬಿರದ ಸಮಾರೋಪದಲ್ಲಿ ರಾಹುಲ್‌

‘ಬಿಜೆಪಿ ಸೋಲಿಸಲು ಕಾಂಗ್ರೆಸ್‌ಗಷ್ಟೇ ಸಾಧ್ಯ’–ರಾಹುಲ್‌ ಗಾಂಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉದಯಪುರ (ರಾಜಸ್ಥಾನ): ಸಿದ್ಧಾಂತವಿಲ್ಲದ ಪ್ರಾದೇಶಿಕ ಪಕ್ಷಗಳು, ಬಿಜೆಪಿ ಮತ್ತು ಆರ್‌ಎಸ್‌ಎಸ್‌ ವಿರುದ್ಧ ಹೋರಾಡುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ಹೇಳಿದ್ದಾರೆ. ಕಾಂಗ್ರೆಸ್‌ ಚಿಂತನ ಶಿಬಿರದ ಸಮಾರೋಪದಲ್ಲಿ ಅವರು ಭಾನುವಾರ ಮಾತನಾಡಿದರು. ಚಿಂತನ ಶಿಬಿರದಲ್ಲಿ 430 ಮುಖಂಡರು ಭಾಗವಹಿಸಿದ್ದರು. 

‘ಪ್ರಾದೇಶಿಕ ಪಕ್ಷಗಳು ಹೋರಾಡುವುದಕ್ಕೇ ಸಾಧ್ಯವಿಲ್ಲ. ಇದು ಸಿದ್ಧಾಂತಕ್ಕಾಗಿ ಇರುವ ಹೋರಾಟ. ಪ್ರಾದೇಶಿಕ ಪಕ್ಷಗಳಿಗೆ ಸ್ಥಾನ ಇದ್ದೇ ಇದೆ. ಆದರೆ, ಈ ಪಕ್ಷಗಳು ಬಿಜೆಪಿಯನ್ನು ಸೋಲಿಸಲು ಸಾಧ್ಯವಿಲ್ಲ. ಏಕೆಂದರೆ ಈ ಪಕ್ಷಗಳಿಗೆ ಸಿದ್ಧಾಂತವೇ ಇಲ್ಲ. ಅವರ ಧೋರಣೆಯೇ ಭಿನ್ನ. ಆದರೆ, ನಮ್ಮದು ಕೇಂದ್ರೀಕೃತ ಧೋರಣೆ’ ಎಂದು ರಾಹುಲ್ ಹೇಳಿದ್ದಾರೆ. 

ಬಿಜೆಪಿ ವಿರುದ್ಧದ ಹೋರಾಟದಲ್ಲಿ ಸಮಾನಮನಸ್ಕ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳಲು ಕಾಂಗ್ರೆಸ್‌ ಮುಕ್ತವಾಗಿದೆ ಎಂದು ಚಿಂತನ ಶಿಬಿರದಲ್ಲಿ ಹೇಳಲಾಗಿದೆ. ಆದರೆ, ಪ‍್ರಾದೇಶಿಕ ಪಕ್ಷಗಳ ಬಗ್ಗೆ ವಿಶ್ವಾಸವಿಲ್ಲ ಎಂಬ ಅರ್ಥದ ಮಾತನ್ನು ಅದೇ ಶಿಬಿರದಲ್ಲಿ ರಾಹುಲ್‌ ಹೇಳಿದ್ದಾರೆ. 

‘ಜನರ ಜೊತೆ ಕಾಂಗ್ರೆಸ್‌ ಸಂಪರ್ಕವು ಮುರಿದುಬಿದ್ದಿದೆ’ ಎಂದೂ ರಾಹುಲ್‌ ಅವರು ಹೇಳಿದರು.

‘ನಮ್ಮ ಹೋರಾಟ ಸಿದ್ಧಾಂತಕ್ಕಾಗಿ. ನಾವು ಜನರ ಬಳಿ ಹೋಗಿ ಅವರ ಜೊತೆ ಕುಳಿತುಕೊಳ್ಳಬೇಕು. ಜನರ ಜೊತೆ ಪಕ್ಷಕ್ಕಿದ್ದ ಸಂಪರ್ಕವನ್ನು ಪುನಃಸ್ಥಾಪಿಸಬೇಕು. ಅದಕ್ಕಾಗಿ ಅಕ್ಟೋಬರ್‌ನಲ್ಲಿ ಯಾತ್ರೆ ಕೈಗೊಳ್ಳಬೇಕು. ಜನರ ಬಳಿ ಹೋಗಿಯೇ ಅವರ ಜೊತೆ ಸಂಪರ್ಕ ಸಾಧಿಸಬೇಕು. ಜನರ ಜೊತೆ ಸಂಪರ್ಕ ಸಾಧಿಸುವ ಕೆಲಸ ಅಡ್ಡದಾರಿಯ ಮೂಲಕ ಸಾಧ್ಯವಿಲ್ಲ’ ಎಂದು ರಾಹುಲ್‌ ಗಾಂಧಿ ಈ ವೇಳೆ ಹೇಳಿದರು.

ಶಿಬಿರದಲ್ಲಿ ತೆಗೆದುಕೊಳ್ಳಲಾದ ಸ್ಪಷ್ಟ ನಿರ್ಧಾರಗಳ ಕುರಿತು ಸಂತಸ ವ್ಯಕ್ತಪಡಿಸಿದ ರಾಹುಲ್‌, ಕಾಂಗ್ರೆಸ್‌ ಪಕ್ಷದ ಭಾವನೆ ಏನು ಎಂಬುದನ್ನು ಪಕ್ಷದ ನಾಯಕತ್ವದ ಎದುರು ನೇರವಾಗಿ ಹೇಳಲು ಅವಕಾಶ ನೀಡಲಾಗಿದೆ. ಈ ರೀತಿಯ ಅವಕಾಶವನ್ನು ಬೇರೆ ಯಾವ ಪಕ್ಷವೂ ನೀಡುವುದಿಲ್ಲ. ಬಿಜೆಪಿ ಮತ್ತು ಆರ್‌ಎಸ್‌ಎಸ್‌ನಲ್ಲಿ ಈ ರೀತಿಯ ಸಭೆಗಳು ನಿಶ್ಚಿತವಾಗಿ ನಡೆಯುವುದಿಲ್ಲ. ಜನರು ತಮ್ಮ ಅನಿಸಿಕೆಯನ್ನು ಮುಕ್ತವಾಗಿ ಹಂಚಿಕೊಳ್ಳಲು ಕಾಂಗ್ರೆಸ್‌ ಸದಾ ವೇದಿಕೆ ಒದಗಿಸುತ್ತದೆ ಎಂದರು. 

‘ದೇಶದ ಜನರನ್ನು ಜನಾಂಗದ ಆಧಾರದ ಮೇಲೆ ವಿಭಜಿಸಿದರೆ ಅದು ಒಂದು ದಿನ ಜನಾಂಗೀಯ ವಿಪತ್ತಾಗಿ ಬದಲಾಗುತ್ತದೆ. ಈ ವಿಪತ್ತಿಗೆ ಬಿಜೆಪಿಯೇ ಹೊಣೆ ಆಗಬೇಕಾಗುತ್ತದೆ’ ಎಂದು ಹೇಳಿದರು. 

ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳಿಗೆ ಪಕ್ಷವನ್ನು ಸಜ್ಜುಗೊಳಿಸುವ ಸಲುವಾಗಿ ಪಕ್ಷದ ಸಂಘಟನೆಯಲ್ಲಿ ಆಮೂಲಾಗ್ರ ಸುಧಾರಣೆ ತರುವ ದಿಸೆಯಲ್ಲಿ ‘ನವ ಸಂಕಲ್ಪ’ ನಕ್ಷೆಯನ್ನು ಕಾಂಗ್ರೆಸ್‌ ಇದೇ ವೇಳೆ ಸ್ವೀಕರಿಸಿತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು