ಸೋಮವಾರ, ಸೆಪ್ಟೆಂಬರ್ 26, 2022
22 °C
ಹೈದರಾಬಾದ್ ವಿಮೋಚನಾ ದಿನ: ರಾಜ್ಯ ಸರ್ಕಾರದ ವಿರುದ್ಧ ಶಾ ಟೀಕೆ

ವೋಟ್ ಬ್ಯಾಂಕ್‌ನಿಂದಾಗಿ ಆಚರಣೆಗೆ ನಿರಾಸಕ್ತಿ: ಅಮಿತ್ ಶಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಹೈದರಾಬಾದ್: ‘ರಾಜ್ಯ ಸರ್ಕಾರದ ವೋಟ್‌ ಬ್ಯಾಂಕ್ ರಾಜಕಾರಣದಿಂದಾಗಿ ಇಷ್ಟು ವರ್ಷ ತೆಲಂಗಾಣದಲ್ಲಿ ‘ಹೈದರಾಬಾದ್ ವಿಮೋಚನಾ ದಿನ‘ ಕಾರ್ಯಕ್ರಮವನ್ನು ಅಧಿಕೃತವಾಗಿ ಆಚರಿಸಿರಲಿಲ್ಲ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಟೀಕಿಸಿದರು.

ಈಗ ಕಾರ್ಯಕ್ರಮವನ್ನು ಕೇಂದ್ರ ಸರ್ಕಾರದಿಂದಲೇ ಆಚರಿಸುವ ನಿರ್ಧಾರಕ್ಕಾಗಿ ನಾನು ಪ್ರಧಾನಿ ಅವರನ್ನು ಅಭಿನಂದಿಸುತ್ತೇನೆ ಎಂದು ಶಾ ಇಲ್ಲಿ ಹೇಳಿದರು. ಕೇಂದ್ರ ಸರ್ಕಾರವು ಸಿಕಂದರಾಬಾದ್‌ನಲ್ಲಿ ಆಯೋಜಿಸಿದ್ದ ವಿಮೋಚನಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಮೋಚನಾ ದಿನ ಹಿನ್ನೆಲೆಯಲ್ಲಿ ಕಲ್ಯಾಣ ಕರ್ನಾಟಕ, ತೆಲಂಗಾಣ ಮತ್ತು ಮರಾಠವಾಡ ಭಾಗದ ಜನರಿಗೆ ಶಾ ಶುಭ ಕೋರಿದರು. ಈ ಭಾಗದ ಜನರು ‘ಭಾರತದ ಒಕ್ಕೂಟಕ್ಕೆ ಸೇರ್ಪಡೆ ವೇಳೆ ರಜಾಕಾರ್‌ರ ದಬ್ಬಾಳಿಕೆಯನ್ನು ಧೈರ್ಯದಿಂದ ಎದುರಿಸಿದರು’ ಎಂದರು.

ರಾಜ್ಯ ಸರ್ಕಾರದಿಂದಲೇ ಈ ದಿನವನ್ನು ಆಚರಿಸಬೇಕು ಎಂಬ ಬೇಡಿಕೆಗಳಿದ್ದರೂ ಸ್ವಾತಂತ್ರ್ಯ ಬಂದು 75 ವರ್ಷವಾದರೂ ಇದು ಆಗಿರಲಿಲ್ಲ. ಸ್ಥಳೀಯವಾಗಿ ಅಧಿಕಾರದಲ್ಲಿದ್ದವರ ವೋಟ್‌ಬ್ಯಾಂಕ್‌ ರಾಜಕಾರಣವೇ ಇದಕ್ಕೆ ಕಾರಣ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಕೆ.ಚಂದ್ರಶೇಖರ ರಾವ್ ಅವರನ್ನೂ ಪರೋಕ್ಷವಾಗಿ ಉಲ್ಲೇಖಿಸಿದ ಗೃಹ ಸಚಿವರು, ‘ಚುನಾವಣೆಯ ಸಂದರ್ಭದಲ್ಲಿ ಅನೇಕರು ಈ ಬಗ್ಗೆ ಭರವಸೆಯನ್ನು ನೀಡಿದ್ದರು. ಆದರೆ, ಅಧಿಕಾರಕ್ಕೆ ಬಂದಾಗ ಮರೆತರು’ ಎಂದರು.

ಈ ವರ್ಷ ರಾಜ್ಯ ಸರ್ಕಾರವು ಈ ದಿನವನ್ನು ಆಚರಿಸುತ್ತಿದೆ. ಆದರೆ, ವಿಮೋಚನಾ ದಿನ ಎಂದು ಹೇಳುತ್ತಿಲ್ಲ. ಇದಕ್ಕೆ ಅವರಿಗಿನ್ನೂ ರಜಾಕಾರ್‌ ಕುರಿತು ಇರುವ ಭೀತಿಯೇ ಕಾರಣ ಎಂದು ವ್ಯಂಗ್ಯವಾಡಿದರು.

ಇದೇ ಸಂದರ್ಭದಲ್ಲಿ ಶಾ ಅವರು, ಹೈದರಾಬಾದ್ ವಿಮೋಚನೆ ಹೋರಾಟದಲ್ಲಿ ಭಾಗವಹಿಸಿದ್ದ ಕೊಮ್ರಂ ಭೀಮ್‌, ರಾಮ್‌ಜೀ ಗೊಂಡ್, ಸ್ವಾಮಿ ರಮಾನಂಧ ತೀರ್ಥ, ಮಾಜಿ ಪ್ರಧಾನಿ ಪಿ.ವಿ.ನರಸಿಂಹರಾವ್, ಎಂ.ಚೆನ್ನಾರೆಡ್ಡಿ ಸೇರಿದಂತೆ ಹಲವು ಮುಖಂಡರಿಗೆ ನಮನ ಸಲ್ಲಿಸಿದರು.

ಕಾರ್ಯಕ್ರಮದಲ್ಲಿ ಕೇಂದ್ರ ಪ್ರವಾಸೋದ್ಯಮ ಸಚಿವ ಜಿ.ಕಿಶನ್ ರೆಡ್ಡಿ, ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂಧೆ ಮತ್ತು ಕರ್ನಾಟಕದ ಸಾರಿಗೆ ಸಚಿವ ಬಿ.ಶ್ರೀರಾಮುಲು ಅವರು ಭಾಗವಹಿಸಿದ್ದರು.

 

ಧಾರ್ಮಿಕ ಮತಾಂಧರ ಬಲವರ್ಧನೆ 
ದೇಶಕ್ಕೆ ಅಪಾಯಕಾರಿ: ಕೆಸಿಆರ್

ಹೈದರಾಬಾದ್‌ (ಪಿಟಿಐ): ಕೋಮುಶಕ್ತಿಗಳು ಧಾರ್ಮಿಕ ಮತಾಂಧರು ತೆಲಂಗಾಣ ಸೇರಿ ದೇಶದಲ್ಲಿ ಹೆಚ್ಚುತ್ತಿದ್ದು, ದೇಶಕ್ಕೆ ಅಪಾಯಕಾರಿಯಾದುದಾಗಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರರಾವ್ ಇಲ್ಲಿ ಹೇಳಿದರು.

ತೆಲಂಗಾಣ ರಾಷ್ಟ್ರೀಯ ಏಕತಾ ದಿನ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಧಾರ್ಮಿಕ ಮತಾಂಧತೆ ಹೆಚ್ಚಿದಷ್ಟೂ ಮನುಷ್ಯ ಸಂಬಂಧಗಳು ಹಾಳಾಗುತ್ತವೆ’ ಎಂದು ಎಚ್ಚರಿಸಿದರು.

ತಮ್ಮ ಹಿತಾಸಕ್ತಿ ಸಾಧನೆಗಾಗಿ ಧಾರ್ಮಿಕ ಮತಾಂಧರು ಸಾಮಾಜಿಕ ಬಾಂಧವ್ಯಕ್ಕೆ ಧಕ್ಕೆ ತರುತ್ತಾರೆ. ಜನರ ನಡುವೆ ದ್ವೇಷ ಬೆಳೆಸುತ್ತಾರೆ. ಹೀಗೆ ಜನರನ್ನು ಇಬ್ಭಾಗವಾಗಿಸುವುದು ಎಂದಿಗೂ ಸಮರ್ಥನೀಯವಲ್ಲ ಎಂದು ಹೇಳಿದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ‘ಹೈದರಾಬಾದ್‌ ವಿಮೋಚನಾ ದಿನ’ದ ಕಾರ್ಯಕ್ರಮದಲ್ಲಿ  ಪರೇಡ್‌ ಮೈದಾನದಲ್ಲಿ  ರಾಷ್ಟ್ರ ಧ್ವಜಾರೋಹಣ ಮಾಡಿ ಮಾತನಾಡಿದ ಬೆನ್ನಲ್ಲೇ ಮುಖ್ಯಮಂತ್ರಿ ಈ ಮಾತು ಹೇಳಿದರು.

 

ಏನಿದು ವಿಮೋಚನಾ ದಿನ

ನವದೆಹಲಿ(ಪಿಟಿಐ): ಆಗಿನ ಹೈದರಾಬಾದ್‌ ರಾಜ್ಯ ನಿಜಾಮರ ಆಡಳಿತದಿಂದ ಸೆ. 17, 1948ರಂದು ವಿಮೋಚನೆಗೊಂಡು ಭಾರತ ಒಕ್ಕೂಟದ ಭಾಗವಾಯಿತು. 

ದೇಶ ಸ್ವಾತಂತ್ರ್ಯಗೊಂಡ ಸಂದರ್ಭದಲ್ಲಿ ಹೈದರಾಬಾದ್ ರಾಜ್ಯ ಪಾಕಿಸ್ತಾನದ ಭಾಗವಾಗಬೇಕು ಅಥವಾ ಪ್ರತ್ಯೇಕ ಮುಸ್ಲಿಂ ಪ್ರಾಂತ್ಯವಾಗಿ ಉಳಿಸಬೇಕು ಎಂದು ನಿಜಾಮರ ಆಡಳಿತವನ್ನು ಸಮರ್ಥಿಸಿದ್ದ ರಜಾಕಾರ್‌ರು ಪ್ರತಿಪಾದಿಸಿದ್ದರು. 

ಆಗ ಕೇಂದ್ರ ಗೃಹ ಸಚಿವರಾಗಿದ್ದ ಸರ್ಧಾರ್‌ ವಲ್ಲಭಬಾಯಿ ಪಟೇಲ್ ನೇತೃತ್ವದಲ್ಲಿ ನಡೆದ ಸೇನಾ ಕಾರ್ಯಾಚರಣೆಯಿಂದಾಗಿ ನಿಜಾಮರ ಆಡಳಿತದಿಂದ ವಿಮೋಚನೆಗೊಂಡಿದ್ದ ಹೈದರಾಬಾದ್‌ ರಾಜ್ಯವು ಭಾರತ ಒಕ್ಕೂಟದ ಭಾಗವಾಯಿತು.

ಈ ನಿಮಿತ್ತವಾಗಿ ಸೆ. 17ರಂದು ಹೈದರಾಬಾದ್‌ ವಿಮೋಚನಾ ದಿನವಾಗಿ ಆಚರಿಸಲಾಗುತ್ತದೆ.

 

 

 

 

 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು