ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಆರೋಪಿ ಮದುವೆ ಪ್ರಕರಣ ‘ತಪ್ಪು ವರದಿ’: ಸುಪ್ರೀಂ ಕೋರ್ಟ್‌

ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ಅಸಮಾಧಾನ
Last Updated 8 ಮಾರ್ಚ್ 2021, 10:34 IST
ಅಕ್ಷರ ಗಾತ್ರ

ನವದೆಹಲಿ: ಮಹಿಳೆಯರ ಬಗ್ಗೆ ತನಗೆ ಅತ್ಯಂತ ಹೆಚ್ಚಿನ ಗೌರವವಿದೆ ಎಂದು ಸೋಮವಾರ ಹೇಳಿರುವ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್‌.ಎ.ಬೊಬಡೆ ಅವರನ್ನು ಒಳಗೊಂಡ ಪೀಠ, ಅತ್ಯಾಚಾರ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಕಳೆದ ವಾರದ ವಿಚಾರಣೆಯೊಂದನ್ನು ‘ಸಂಪೂರ್ಣವಾಗಿ ತಪ್ಪಾಗಿ ವರದಿ ಮಾಡಲಾಗಿದೆ’ ಎಂದು ಹೇಳಿದೆ.

‘ಅತ್ಯಾಚಾರ ಸಂತ್ರಸ್ತೆಯನ್ನು ನೀವು ಮದುವೆಯಾಗುತ್ತೀರಾ ಎಂದು ನಾವು ಆರೋಪಿಯನ್ನು ಕೇಳಿದ್ದೇವೆ ಅಷ್ಟೇ, ಮದುವೆಯಾಗುವಂತೆ ನಾವು ಆದೇಶ ನೀಡಿಲ್ಲ. ನ್ಯಾಯಾಂಗದ ಗೌರವವು ಇರುವುದು ವಕೀಲರ ಕೈಯಲ್ಲಿ’ ಎಂದು ಪೀಠ ಅಭಿಪ್ರಾಯಪಟ್ಟಿತು.

ಅತ್ಯಾಚಾರಕ್ಕೊಳಗಾಗಿ ಗರ್ಭಿಣಿಯಾಗಿರುವ 14 ವರ್ಷದ ಬಾಲಕಿ, ತನ್ನ ಉದರದೊಳಗಿರುವ 26 ವಾರಗಳ ಭ್ರೂಣವನ್ನು ತೆಗೆಸಲು ಅನುಮತಿ ಕೋರಿ ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಇತರ ಇಬ್ಬರು ನ್ಯಾಯಮೂರ್ತಿಗಳಾದ ಎ.ಎಸ್‌.ಬೋಪಣ್ಣ ಮತ್ತು ವಿ.ರಾಮಸುಬ್ರಮಣಿಯನ್‌ ಅವರಿದ್ದ ಪೀಠ ಈ ವಿಷಯ ತಿಳಿಸಿತು.

‘ಮಾರ್ಚ್‌ 1ರಂದುಸಾಕ್ಷ್ಯ ಕಾಯ್ದೆಯಲ್ಲಿನ ಅಂಶಗಳ ಆಧಾರದಲ್ಲಿ, ಆರೋಪಿ ನೀಡಿದ ಮುಚ್ಚಳಿಕೆಯನ್ನು ಉಲ್ಲೇಖಿಸಿ ನ್ಯಾಯಪೀಠ ಅತ್ಯಾಚಾರ ಸಂತ್ರಸ್ತೆಯನ್ನು ನೀವು ಮದುವೆಯಾಗುತ್ತೀರಾ ಎಂಬ ಪ್ರಶ್ನೆ ಕೇಳಿತ್ತಷ್ಟೇ. ಆದರೆ ಈ ವಿಷಯವನ್ನು ಸಂಪೂರ್ಣವಾಗಿ ತಪ್ಪಾಗಿ ವರದಿ ಮಾಡಲಾಯಿತು’ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.‌

ಮುಖ್ಯ ನ್ಯಾಯಮೂರ್ತಿ ಅವರಿಂದಲೇ ಇಂತಹ ಹೇಳಿಕೆ ಬಂದುದಕ್ಕೆ ದೇಶವ್ಯಾಪಿಯಾಗಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಸಿಪಿಎಂ ಪ್ಯಾಲಿಟ್‌ ಬ್ಯೂರೊ ಸದಸ್ಯೆ ಬೃಂದಾ ಕಾರಟ್‌ ಅವರು ಮುಖ್ಯ ನ್ಯಾಯಮೂರ್ತಿ ಅವರು ತಮ್ಮ ಹೇಳಿಕೆ ಹಿಂಪಡೆಯಲು ಆಗ್ರಹಿಸಿ ಪತ್ರವನ್ನೂ ಬರೆದಿದ್ದರು. ವಿವಿಧ ಸಂಘಟನೆಗಳು, ವ್ಯಕ್ತಿಗಳು ಮುಖ್ಯ ನ್ಯಾಯಮೂರ್ತಿಗಳ ಕ್ಷಮೆಗೆ ಆಗ್ರಹಿಸಿದ್ದರು.

ಆದರೆ ವಕೀಲರ ಸಂಘ ಮುಖ್ಯ ನ್ಯಾಯಮೂರ್ತಿ ಅವರಿಂದ ಯಾವುದೇ ತಪ್ಪು ಆಗಿಲ್ಲ ಎಂದು ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT