ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Republic Day Parade 2021: ಈ ಬಾರಿ ಬೈಕ್ ಕಸರತ್ತಿಗೆ ಬಿತ್ತು ಬ್ರೇಕ್..!

Last Updated 23 ಜನವರಿ 2021, 2:41 IST
ಅಕ್ಷರ ಗಾತ್ರ

ನವದೆಹಲಿ: ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಮೋಟಾರ್‌ಸೈಕಲ್ ಕಸರತ್ತು ಪ್ರಮುಖ ಆಕರ್ಷಣೆಯಾಗಿರುತ್ತದೆ. ಆದರೆ ಈ ಬಾರಿ ಕೋವಿಡ್-19 ಸುರಕ್ಷತಾ ನಿಯಮಗಳು ಕಟ್ಟುನಿಟ್ಟಿನಿಂದ ಪಾಲನೆಯಾಗಲಿರುವುದರಿಂದ ದೇಶಪ್ರೇಮಿಗಳಿಗೆ ಬೈಕ್ ಅಭ್ಯಾಸ ನೋಡುವ ಸೌಭಾಗ್ಯ ಇರುವುದಿಲ್ಲ.

ಅಲ್ಲದೆ ಪ್ರೇಕ್ಷಕರ ಸಂಖ್ಯೆಯನ್ನು 25,000ಕ್ಕೆ ಇಳಿಕೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದಲ್ಲದೆ, 72ನೇ ಗಣರಾಜ್ಯೋತ್ಸದಲ್ಲಿ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವೀರ ಶೌರ್ಯ ಪ್ರಶಸ್ತಿ ಪುರಸ್ಕೃತರ ಹಾಗೂ ಮಕ್ಕಳ ಮೆರವಣಿಗೆ ಕೂಡಾ ಇರುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ಮೊದಲೇ ತಿಳಿಸಿರುವಂತೆಯೇ ಗಣರಾಜೋತ್ಸವ ದಿನದಂದು ಯಾವುದೇ ಮುಖ್ಯ ಆತಿಥಿಗಳು ಭಾಗವಹಿಸುವುದಿಲ್ಲ. ಅಲ್ಲದೆ ಸೀಮಿತ ಸಂಖ್ಯೆಯ ಮಾಧ್ಯಮ ಮಿತ್ರರು ಭಾಗವಹಿಸಲಿದ್ದಾರೆ.

ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಕಾಲಘಟ್ಟದಲ್ಲಿ ನಡೆಯುತ್ತಿರುವುದರಿಂದ ಈ ಬಾರಿಯ ಗಣರಾಜ್ಯೋತ್ಸವ ತುಂಬಾ ವಿಭಿನ್ನವಾಗಿರಲಿದೆ. ಸ್ವಾತಂತ್ರ್ಯ ದಿನಾಚರಣೆಯಂತೆ ಸಾಮಾಜಿಕ ಅಂತರದೊಂದಿಗೆ ಕುರ್ಚಿಗಳ ವ್ಯವಸ್ಥೆ ಮಾಡಲಾಗಿದೆ. ಹಾಗಾಗಿ ಪ್ರೇಕ್ಷಕರ ಸಂಖ್ಯೆಯು 1.25 ಲಕ್ಷದಿಂದ 25,000ಕ್ಕೆ ಇಳಿಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋವಿಡ್-19 ಸುರಕ್ಷತಾ ಮಾನದಂಡಗಳು ಜಾರಿಯಲ್ಲಿರುವುದರಿಂದ ಸೈನಿಕ ಪಡೆ ಹಾಗೂ ಅರೆಸೈನಿಕ ಪಡೆಯಿಂದ ನಡೆಯಲಿರುವ ಜನಪ್ರಿಯ ಮೋಟಾರ್‌ಸೈಕಲ್ ಕಸರತ್ತು ಕೂಡಾ ನಡೆಯುದಿಲ್ಲ. ಬೈಕ್ ಕಸರತ್ತು ಮಾಡುವಾಗ ಸಾಮಾಜಿಕ ಅಂತರ ಪಾಲಿಸಲು ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಒಟ್ಟು 32 ಸ್ತಬ್ಧ ಚಿತ್ರಗಳ ಮೆರವಣಿಗೆ ನಡೆಯಲಿದೆ. ಇದರಲ್ಲಿ 17 ರಾಜ್ಯ/ಕೇಂದ್ರಾಡಳಿತ ಪ್ರದೇಶ, 9 ಸಚಿವಾಲಯಗಳು ಮತ್ತು 6 ರಕ್ಷಣಾ ವಿಭಾಗದಿಂದ ಆಯೋಜನೆಯಾಗಲಿದೆ. ವಾಡಿಕೆಯಂತೆ ಕೆಂಪುಕೋಟೆಗೆ ಹೋಗುವ ಬದಲು ಈ ಬಾರಿ ಪಥಸಂಚಲನ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಕೊನೆಗೊಳ್ಳಲಿದೆ.

ಸಾಮಾಜಿಕ ಅಂತರ ಕಾಪಾಡುವ ನಿಟ್ಟಿನಲ್ಲಿ ಸೈನಿಕ ತುಕಡಿಯಲ್ಲಿ ಯೋಧರ ಸಂಖ್ಯೆಯನ್ನು 144ರಿಂದ 96ಕ್ಕೆ ಇಳಿಸಲಾಗಿದೆ.

ರಾಜಪಥದಲ್ಲಿ ಗಣರಾಜೋತ್ಸವ ಪರೇಡ್‌ನಲ್ಲಿ ಕೋವಿಡ್-19 ಸುರಕ್ಷತಾ ಮಾನದಂಡಗಳನ್ನು ಪಾಲಿಸಲಾಗುತ್ತಿದ್ದು, ಎಲ್ಲರೂ ಕೋವಿಡ್-19 ಪರೀಕ್ಷೆ ಒಳಪಟ್ಟಿದ್ದಾರೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

ಇದೇ ವರ್ಷ 50ನೇ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಿಸುತ್ತಿರುವ ನೆರೆಯ ಬಾಂಗ್ಲಾದೇಶದ ಮಿಲಿಟರಿ ಬ್ಯಾಂಡ್ ಕೂಡಾ ಗಣರಾಜ್ಯೋತ್ಸವ ಪರೇಡ್‌ನ ಭಾಗವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT