ಗುರುವಾರ , ಆಗಸ್ಟ್ 18, 2022
26 °C
ಲೋಕಸಭೆಯ 3, ವಿಧಾನಸಭೆಯ 7 ಕ್ಷೇತ್ರಗಳ ಚುನಾವಣಾ ಫಲಿತಾಂಶ

ಇಂದು ತ್ರಿಪುರಾ ಸಿಎಂ ಸಾಹಾ ಭವಿಷ್ಯ ನಿರ್ಧಾರ; ಉಪ ಚುನಾವಣೆ ಮತ ಎಣಿಕೆ ಆರಂಭ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮೂರು ಲೋಕಸಭಾ ಕ್ಷೇತ್ರಗಳು ಹಾಗೂ ಏಳು ವಿಧಾನಸಭಾ ಕ್ಷೇತ್ರಗಳಿಗೆ ನಡೆದಿರುವ ಉಪ ಚುನಾವಣೆಯ ಫಲಿತಾಂಶ ಇಂದು ಹೊರ ಬೀಳಲಿದೆ. ತ್ರಿಪುರಾ ಮುಖ್ಯಮಂತ್ರಿ ಮಾಣಿಕ್‌ ಸಾಹಾ ಅವರ ಭವಿಷ್ಯವೂ ಇಂದು ನಿರ್ಧಾರವಾಗಲಿದೆ.

ಬೆಳಿಗ್ಗೆ 8ರಿಂದ ಮತ ಎಣಿಕೆ ಕಾರ್ಯ ಆರಂಭವಾಗಿದ್ದು, ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆದಿದೆ. ತ್ರಿಪುರಾದ ಅಗರ್ತಲಾ, ಜುಬಾರಾಜ್‌ನಗರ್‌, ಸುರ್ಮಾ ಹಾಗೂ ಬರ್ದೊವಾಲಿ ನಗರದಲ್ಲಿ ಚುನಾವಣೆ ನಡೆದಿದೆ. ಸಾಹಾ ಅವರು ಬರ್ದೊವಾಲಿ ಕ್ಷೇತ್ರದಿಂದ ಸ್ಪರ್ಧಿಸಿದ್ದು, ಮುಖ್ಯಮಂತ್ರಿಯಾಗಿ ಮುಂದುವರಿಯಲು ಗೆಲುವು ಅನಿವಾರ್ಯವಾಗಿದೆ.

ವಿಪ್ಲವ್‌ ದೇವ್‌ ಅವರು ತ್ರಿಪುರಾ ಮುಖ್ಯಮಂತ್ರಿ ಸ್ಥಾನಕ್ಕೆ ದಿಢೀರ್‌ ರಾಜೀನಾಮೆ ನೀಡಿದ ಬೆನ್ನಲ್ಲೇ ಕಳೆದ ತಿಂಗಳು, ರಾಜ್ಯಸಭಾ ಸದಸ್ಯ ಮಾಣಿಕ್‌ ಸಾಹಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಗುರುವಾರ ನಡೆದ ಚುನಾವಣೆಯಲ್ಲಿ ತ್ರಿಪುರಾದಲ್ಲಿ ಅತಿ ಹೆಚ್ಚು, ಶೇಕಡ 76.62ರಷ್ಟು ಮತದಾನ ದಾಖಲಾಗಿತ್ತು.

ತ್ರಿಪುರಾದ ಕ್ಷೇತ್ರಗಳ ಜೊತೆಗೆ ದೆಹಲಿಯ ರಾಜಿಂದರ್‌ ನಗರ್‌, ಜಾರ್ಖಂಡ್‌ನ ರಾಂಚಿ ಜಿಲ್ಲೆಯ ಮಂದಾರ್‌ ಹಾಗೂ ಆಂಧ್ರ ಪ್ರದೇಶದ ಆತ್ಮಕುರ್ ವಿಧಾನಸಭಾ ಕ್ಷೇತ್ರಗಳ ಫಲಿತಾಂಶ ಪ್ರಕಟವಾಗಲಿದೆ.

ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಹಾಗೂ ಪಕ್ಷದ ಮುಖಂಡ ಆಜಾಮ್‌ ಖಾನ್‌ ವಿಧಾನಸಭಾ ಚುನಾಣೆಯಲ್ಲಿ ಸ್ಪರ್ಧಿಸಲು ಲೋಕಸಭಾ ಸ್ಥಾನಗಳಿಗೆ ರಾಜೀನಾಮೆ ಸಲ್ಲಿಸಿದ ಕಾರಣ ತೆರವಾಗಿದ್ದ ಉತ್ತರ ಪ್ರದೇಶದ ಆಜಮ್‌ಗಢ ಮತ್ತು ರಾಮ್‌ಪುರ ಕ್ಷೇತ್ರಗಳಿಗೆ ಚುನಾವಣೆ ನಡೆದಿತ್ತು.

ಶಾಸಕರಾಗಿ ಆಯ್ಕೆಯಾಗಿರುವ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ಸಂಗರೂರ್‌ ಲೋಕಸಭಾ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದರು. ತೆರವಾಗಿದ್ದ ಕ್ಷೇತ್ರಕ್ಕೆ ಉಪಚುನಾವಣೆ ನಡೆದಿತ್ತು. ಭಗವಂತ್‌ ಮಾನ್‌ ಅವರು 2014 ಮತ್ತು 2019ರಲ್ಲಿ ಸಂಗರೂರ್‌ನಿಂದ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ–

ರಾಮ್‌ಪುರದಲ್ಲಿ ಬಿಜೆಪಿಯಿಂದ ಘನಶ್ಯಾಮ್‌ ಸಿಂಗ್‌ ಲೋಧಿ ಮತ್ತು ಸಮಾಜವಾದಿ ಪಕ್ಷದಿಂದ ಆಸಿಮ್ ರಾಜಾ ಕಣದಲ್ಲಿದ್ದಾರೆ. ಮಾಯಾವತಿ ನೇತೃತ್ವದ ಬಿಎಸ್‌ಪಿ ರಾಮ್‌ಪುರದಿಂದ ಸ್ಪರ್ಧಿಸಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು