ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಎಪಿ ಮಾನ್ಯತೆ ರದ್ದು ಕೋರಿ 56 ನಿವೃತ್ತ ಅಧಿಕಾರಿಗಳಿಂದ ಚುನಾವಣಾ ಆಯೋಗಕ್ಕೆ ಪತ್ರ

Last Updated 16 ಸೆಪ್ಟೆಂಬರ್ 2022, 5:38 IST
ಅಕ್ಷರ ಗಾತ್ರ

ನವದೆಹಲಿ: ಆಮ್‌ ಆದ್ಮಿ ಪಕ್ಷದ ಮಾನ್ಯತೆಯನ್ನು ರದ್ದು ಮಾಡಲು ಕೋರಿ 56 ಮಂದಿ ನಿವೃತ್ತ ಐಎಎಸ್‌, ಐಎಫ್‌ಎಸ್‌, ಐಪಿಎಸ್‌ ಮತ್ತು ಐಆರ್‌ಎಸ್‌ ಅಧಿಕಾರಿಗಳು ಕೇಂದ್ರ ಚುನಾವಣಾ ಆಯೋಗದ ಆಯುಕ್ತರಿಗೆ ಗುರುವಾರ ಪತ್ರ ಬರೆದಿದ್ದಾರೆ.

ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಅಧಿಕಾರಿಗಳನ್ನು ಗುಜರಾತ್‌ ಚುನಾವಣೆಯಲ್ಲಿ ತನ್ನ ಪರವಾಗಿ ಕೆಲಸ ಮಾಡಿಸಿಕೊಳ್ಳಲು ಆಮ್‌ ಆದ್ಮಿ ಪಕ್ಷ (ಎಎಪಿ) ಪ್ರಚೋದಿಸುತ್ತಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಪತ್ರಕ್ಕೆ ಕರ್ನಾಟಕದ ನಿವೃತ್ತ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂ. ಮದನ್ ಗೋಪಾಲ್, ಕೇರಳದ ನಿವೃತ್ತ ಮುಖ್ಯ ಕಾರ್ಯದರ್ಶಿ ಆನಂದ್ ಬೋಸ್, ನಿವೃತ್ತ ರಾಯಭಾರಿ ನಿರಂಜನ್ ದೇಸಾಯಿ ಮತ್ತು ಆಂಧ್ರಪ್ರದೇಶದ ನಿವೃತ್ತ ಡಿಜಿಪಿ ಉಮೇಶ್ ಕುಮಾರ್ ಸೇರಿದಂತೆ ಹಲವರು ಸಹಿ ಮಾಡಿದ್ದಾರೆ.

ಸೆಪ್ಟೆಂಬರ್ 3 ರಂದು ರಾಜ್‌ಕೋಟ್‌ನಲ್ಲಿ ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಅವರು ನಡೆಸಿದ ಪತ್ರಿಕಾಗೋಷ್ಠಿ, ಅದರಲ್ಲಿ ಅವರು ಆಡಿದ್ದ ಮಾತುಗಳನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

’ವಿಧಾನಸಭಾ ಚುನಾವಣೆ ಗೆಲುವಿಗಾಗಿ ಗುಜರಾತ್ ಸರ್ಕಾರದ ಅಧಿಕಾರಿಗಳು ಎಎಪಿಯೊಂದಿಗೆ ಒಟ್ಟಾಗಿ ಕೆಲಸ ಮಾಡುವಂತೆ ಕೇಜ್ರಿವಾಲ್‌ ಪದೇ ಪದೇ ಮನವಿ ಮಾಡಿದ್ದಾರೆ’ ಎಂದು ಆರೋಪಿಸಲಾಗಿದೆ.

‘ಸಾರ್ವಜನಿಕರ ಶ್ರೇಯೋಭಿವೃದ್ಧಿಗೆ, ಜನರ ಭದ್ರತೆಗೆ ಶ್ರಮಿಸುವುದು ಸಾರ್ವಜನಿಕ ಸೇವೆಯಲ್ಲಿ ತೊಡಗಿರುವವರ ಜವಾಬ್ದಾರಿಯಾಗಿದೆ’ ಎಂದು ನಿವೃತ್ತ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

‘ಸಾರ್ವಜನಿಕ ಸೇವೆಯಲ್ಲಿರುವವರು ರಾಜಕೀಯ ಪಕ್ಷಗಳಿಗೆ ಯಾವುದೇ ನಿಷ್ಠೆಯನ್ನು ಹೊಂದಿಲ್ಲ ಎಂಬುದನ್ನು ಎಎಪಿ ಮರೆತಂತಿದೆ’ ಎಂದು ಪತ್ರದಲ್ಲಿ ಬರೆಯಲಾಗಿದೆ.

‘ಇದು ಆಕಸ್ಮಿಕ ತಪ್ಪಲ್ಲ. ರಾಜಕೀಯ ಲಾಭಕ್ಕಾಗಿ ಸರ್ಕಾರಿ ಯಂತ್ರವನ್ನು ಬಳಸಿಕೊಳ್ಳುವ ಉದ್ದೇಶದಿಂದ ಎಎಪಿ ಮಾಡಿದ ಉದ್ದೇಶಪೂರ್ವಕ ಮತ್ತು ಲೆಕ್ಕಾಚಾರ’ ಎಂದು ನಿವೃತ್ತ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಮಾದರಿ ನೀತಿ ಸಂಹಿತೆಯನ್ನು ಎಎಪಿ ಉಲ್ಲಂಘಿಸಿದೆ. ಪ್ರಜಾಪ್ರತಿನಿಧಿ ಕಾಯಿದೆ– 1951 ರ ನಿಬಂಧನೆಗಳ ಉಲ್ಲಂಘನೆಯಾಗಿರುವುದರಿಂದ ಆ ಪಕ್ಷದ ಮಾನ್ಯತೆಯನ್ನು ರದ್ದು ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT