ಮಂಗಳವಾರ, ಮೇ 24, 2022
24 °C
ಸಂಘಟನೆಗಳ ಒತ್ತಡಕ್ಕೆ ಮಣಿದ ಕೇರಳ ಸರ್ಕಾರ

ಕೇರಳದ ಪದ್ಮನಾಭಸ್ವಾಮಿ ಉತ್ಸವ: ಹಿಂದೂಯೇತರ ತಹಶೀಲ್ದಾರ್‌ ವರ್ಗಾವಣೆ ಮಾಡಿದ ಸರ್ಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ತಿರುವನಂತಪುರಂ: ಇಲ್ಲಿನ ಐತಿಹಾಸಿಕ ಶ್ರೀಪದ್ಮನಾಭಸ್ವಾಮಿ ದೇವಾಲಯದ ವಾರ್ಷಿಕ ಉತ್ಸವದಲ್ಲಿ ಪಾಲ್ಗೊಳ್ಳಬೇಕಿದ್ದ ಕಂದಾಯ ಇಲಾಖೆ ಅಧಿಕಾರಿ ಹಿಂದೂ ಧರ್ಮದವರಲ್ಲ ಎಂಬ ಕಾರಣಕ್ಕಾಗಿ, ಅವರನ್ನು ವರ್ಗಾವಣೆ ಮಾಡಿ, ಆ ಜಾಗಕ್ಕೆ ಹಿಂದೂ ಅಧಿಕಾರಿಯನ್ನು ಕೇರಳ ಸರ್ಕಾರ ನೇಮಿಸಿದೆ!

ಶ್ರೀಪದ್ಮನಾಭ ದೇವಸ್ಥಾನದ ವ್ಯಾಪ್ತಿಯಲ್ಲಿರುವ ತಾಲ್ಲೂಕು ಕಚೇರಿಗೆ ಹಿಂದೂಯೇತರ ಅಧಿಕಾರಿಯನ್ನು ನೇಮಿಸುವುದರ ವಿರುದ್ಧ ಕೆಲವು ಹಿಂದೂ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಸರ್ಕಾರ ಈ ಬದಲಾವಣೆಗಳನ್ನು ಮಾಡಿದೆ. ಇದರಿಂದಾಗಿ ಸಿಪಿಎಂ ನೇತೃತ್ವದ ಪಿಣರಾಯಿ ವಿಜಯನ್ ಸರ್ಕಾರಕ್ಕೆ ಮುಜುಗರ ಉಂಟಾಗುವ ಸಾಧ್ಯತೆ ಇದೆ.

ಕೆಲವು ದಿನಗಳ ಹಿಂದೆ ತಿರುವನಂತಪುರಂನ ತಹಶೀಲ್ದಾರ್ ಹುದ್ದೆಗೆ ಕೆ.ಅನ್ಸಾರ್ ಎಂಬುವವರನ್ನು ವರ್ಗಾಯಿಸಲಾ ಗಿತ್ತು. ಹಿಂದೂ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಅವರನ್ನು ಎತ್ತಂಗಡಿ ಮಾಡಿ, ಅವರ ಜಾಗಕ್ಕೆ ಕೆ.ಸುರೇಶ್ ಅವರನ್ನು ನೇಮಿಸಲಾಗಿದೆ. ಸುರೇಶ್ ಅವರು ಈ ಮೊದಲು ತಿರುವನಂತಪುರ ಉಪನಗರ ನಯತಿಂಕರನಲ್ಲಿ ತಹಶೀಲ್ದಾರ್ ಆಗಿ ಕೆಲಸ ಮಾಡುತ್ತಿದ್ದರು.

ತಹಶೀಲ್ದಾರ್ ಬದಲಾವಣೆ ಕುರಿತು ‘ಪ್ರಜಾವಾಣಿ‘ ಜತೆ ಮಾತನಾಡಿದ ಭೂ ದಾಖಲೆಗಳ ಇಲಾಖೆ ಆಯುಕ್ತರು, ‘ಈ ವರ್ಗಾವಣೆ ಒಂದು ಸಾಮಾನ್ಯ ಪ್ರಕ್ರಿಯೆ. ಹಿಂದೂ ಸಂಘಟನೆಗಳ ಒತ್ತಾಯದಿಂದಲೇ ತಹಶೀಲ್ದಾರರನ್ನು ಬದಲಿಸಲಾಗಿದೆ ಎಂಬುದಕ್ಕೆ ಯಾವುದೇ ಆಧಾರವಿಲ್ಲ‘ ಎಂದರು.

ಕಂದಾಯ ಇಲಾಖೆ ಮೂಲಗಳು ಮತ್ತು ದೇವಾಲಯಕ್ಕೆ ಸಂಬಂಧಿಸಿದವರು ನೀಡಿದ ಮಾಹಿತಿ ಪ್ರಕಾರ, ದೇವಾಲಯದ ‘ಆರತ್‘ ವಾರ್ಷಿಕೋತ್ಸವದಲ್ಲಿ ತಹಶೀಲ್ದಾರರು ಮತ್ತು ಸಮೀಪದ ಗ್ರಾಮ ಪಂಚಾಯ್ತಿಯ ಅಧಿಕಾರಿಗಳು ಪಾಲ್ಗೊಳ್ಳಬೇಕಾಗಿದ್ದು, ಅವರು ಹಿಂದೂಗಳೇ ಆಗಿರಬೇಕು ಎಂಬುದು ಅಲಿಖಿತ ನಿಯಮವಾಗಿದೆ. ಹೀಗಾಗಿ ತಿರುವನಂತಪುರ ತಹಶೀಲ್ದಾರರು ಹಾಗೂ ವಂಚಿಯೂರ್ ಗ್ರಾಮದ ಪಂಚಾಯ್ತಿ ಅಧಿಕಾರಿ ಹುದ್ದೆಗೆ ಹಿಂದೂಗಳನ್ನು, ಅದರಲ್ಲೂ ಮೇಲ್ಜಾತಿಯ ಹಿಂದೂಗಳನ್ನೇ ನಿಯೋಜಿಸಲಾಗುತ್ತದೆ. ಇದು ತಿರುವಾಂಕೂರು ರಾಜರ ಆಳ್ವಿಕೆಯ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.

ಒಂದು ವೇಳೆ ತಿರುವನಂತಪುರಂ ತಹಶೀಲ್ದಾರ್ ಹಿಂದೂ ಆಗಿಲ್ಲದಿದ್ದರೆ, ತಿರುವನಂತಪುರಂನಲ್ಲಿ ಭೂ ದಾಖಲೆಗಳ ಉಪ ತಹಶೀಲ್ದಾರರು ದೇವಾಲಯದ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಆದರೆ, ಈಗ ಎರಡೂ ಹುದ್ದೆಗಳಲ್ಲಿರುವವರು ಹಿಂದೂಯೇತರ ಧರ್ಮದವರಾಗಿರುವ ಕಾರಣ, ಈ ರೀತಿ ಮಾಡಲಾಗಿದೆ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ತಿರುವನಂತಪುರಂಗೆ ಹಿಂದೂಯೇತರ ತಹಶೀಲ್ದಾರರನ್ನು ವರ್ಗಾಯಿಸುವುದರ ವಿರುದ್ಧ ಹಿಂದೂ ಐಕ್ಯ ವೇದಿಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಸರ್ಕಾರ ತಮ್ಮ ನಿರ್ಧಾರವನ್ನು ಬದಲಿಸದಿದ್ದರೆ, ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಕೇರಳ ಸರ್ಕಾರ, ತಹಶೀಲ್ದಾರ್ ಅನ್ಸಾರ್ ಅವರನ್ನು ಬದಲಿಸಿ, ಕೆ. ಸುರೇಶ್ ಅವರನ್ನು ನೇಮಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು