ಚಂಡೀಗಡ: ‘ರಸ್ತೆಯಲ್ಲಿ ರೋಷಾವೇಶ ತೋರಿದ ಪ್ರಕರಣದಲ್ಲಿ ಕಳೆದ 10 ತಿಂಗಳಿಂದ ಪಟಿಯಾಲ ಜೈಲಿನಲ್ಲಿ ಸೆರೆವಾಸ ಅನುಭವಿಸುತ್ತಿದ್ದ ಕಾಂಗ್ರೆಸ್ ನಾಯಕ ನವಜೋತ್ ಸಿಂಗ್ ಸಿಧು ಸನ್ನಡತೆಯ ಆಧಾರದಲ್ಲಿ ಶನಿವಾರ (ಏ.1) ಬಿಡುಗಡೆಯಾದರು.
ಜೈಲಿನಿಂದ ಹೊರ ಬಂದ ಬಳಿಕ ಮಾತನಾಡಿದ ಸಿಧು, ‘ನನ್ನನ್ನು ಮಧ್ಯಾಹ್ನದ ಸುಮಾರಿಗೆ ಬಿಡುಗಡೆ ಮಾಡಬೇಕಿತ್ತು. ಆದರೆ ಜೈಲು ಅಧಿಕಾರಿಗಳು ತಡಮಾಡಿದ್ದಾರೆ. ಮಾಧ್ಯಮಗಳು ಹೊರಹೋಗಲೆಂದು ಅವರು ಕಾಯುತ್ತಿದ್ದರು’ ಎಂದು ಆರೋಪಿಸಿದರು.
ಶನಿವಾರ ಮಧ್ಯಾಹ್ನದ ಹೊತ್ತಿಗೆ ಬಿಡುಗಡೆಯಾಗಲಿದ್ದು, ಜೈಲಿನ ಹೊರಗೆ ಮಾಧ್ಯಮಗೋಷ್ಠಿ ನಡೆಸುವುದಾಗಿ ಸಿಧು ಶುಕ್ರವಾರ ಟ್ವೀಟ್ ಮಾಡಿ ಹೇಳಿದ್ದರು.
‘ಈ ದೇಶದಲ್ಲಿ ಸರ್ವಾಧಿಕಾರ ಬಂದಾಗಲೆಲ್ಲಾ ಒಂದು ಕ್ರಾಂತಿಯೂ ಬಂದಿದೆ. ಈ ಬಾರಿ ರಾಹುಲ್ ಗಾಂಧಿ ಅವರ ರೂಪದಲ್ಲಿ ಕ್ರಾಂತಿ ಬಂದಿದೆ. ಅವರು ಸರ್ಕಾರವನ್ನು ಸಮರ್ಥವಾಗಿ ಎದುರಿಸಲಿದ್ದಾರೆ’ ಎಂದು ಹೇಳಿದರು.
ಸಿಧು 1988ರಲ್ಲಿ ನಡೆಸಿದ್ದ ಹಲ್ಲೆಯಲ್ಲಿ 65 ವರ್ಷದ ಗುರ್ನಾಮ್ ಸಿಂಗ್ ಎಂಬುವವರು ಮೃತಪಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೊರ್ಟ್, ಸಿಧು ಅವರಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ನೀಡಿತ್ತು. ಇದರ ಅನುಸಾರ ಸಿಧು ಅವರು ಕಳೆದ ವರ್ಷ ಮೇ 20ರಂದು ಪಟಿಯಾಲ ನ್ಯಾಯಾಲಯಕ್ಕೆ ಶರಣಾಗಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.