ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ–ಸಿಪಿಎಂ ಪರಸ್ಪರ ನೆರವು: ಆರ್‌ಎಸ್‌ಎಸ್‌ ಮುಖಂಡ ಬಾಲಶಂಕರ್‌

ವಿವಾದ ಸೃಷ್ಟಿಸಿದ ಆರ್‌ಎಸ್‌ಎಸ್‌ ಮುಖಂಡ ಬಾಲಶಂಕರ್‌ ಹೇಳಿಕೆ
Last Updated 17 ಮಾರ್ಚ್ 2021, 19:56 IST
ಅಕ್ಷರ ಗಾತ್ರ

ತಿರುವನಂತಪುರ: ಕೇರಳದ ಹಲವು ಕ್ಷೇತ್ರಗಳ ಚುನಾವಣೆಯಲ್ಲಿ ಬಿಜೆಪಿ ಮತ್ತು ಸಿಪಿಎಂ‍ಪರಸ್ಪರರಿಗೆ ನೆರವಾಗುವಂತೆ ನಡೆದುಕೊಂಡಿದ್ದವು ಎಂದು ಆರ್‌ಎಸ್ಎಸ್‌–ಬಿಜೆಪಿ ಸಿದ್ಧಾಂತ ಪ್ರತಿಪಾದಕ ಆರ್‌. ಬಾಲಶಂಕರ್‌ ಹೇಳಿರುವುದು, ಎರಡೂ ಪಕ್ಷಗಳಿಗೆ ಮುಜುಗರ ಉಂಟು ಮಾಡಿದೆ.

ಬಿಜೆಪಿ ಗೆಲ್ಲುವ ಸಾಧ್ಯತೆ ಹೆಚ್ಚು ಇದ್ದ ಕೆಲವು ಕ್ಷೇತ್ರಗಳಲ್ಲಿ ಸಿಪಿಎಂ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸದೆ ನೆರವಾಗಿದೆ ಎಂದು ಆರ್‌ಎಸ್‌ಎಸ್‌ನ ಮುಖವಾಣಿ ‘ಆರ್ಗನೈಸರ್‌’ನ ಮಾಜಿ ಸಂಪಾದಕರೂ ಆಗಿರುವ ಬಾಲಶಂಕರ್‌ ಹೇಳಿದ್ದಾರೆ.

ಶಬರಿಮಲೆ ಇರುವ ಪತ್ತನಂತಿಟ್ಟ ಜಿಲ್ಲೆಯ ಕೊಣ್ಣಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ. ಸುರೇಂದ್ರನ್‌ ಗೆಲುವಿಗೆ ನೆರವಾಗುವುದಕ್ಕಾಗಿ ಸಿಪಿಎಂ ದುರ್ಬಲ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿತ್ತು. ಹಾಗೆಯೇ ಪತ್ತನಂತಿಟ್ಟ ಜಿಲ್ಲೆಯ ಅರನ್ಮುಲ ಮತ್ತು ಅಲೆಪ್ಪಿ ಜಿಲ್ಲೆಯ ಚೆಂಗನ್ನೂರು ಕ್ಷೇತ್ರಗಳಲ್ಲಿ ಬಿಜೆಪಿ ದುರ್ಬಲ ಅಭ್ಯರ್ಥಿಗಳಿಗೆ ಟಿಕೆಟ್‌ ನೀಡಿ ಸಿಪಿಎಂಗೆ ನೆರವಾಗಿತ್ತು ಎಂದು ಬಾಲಶಂಕರ್‌ ಉದಾಹರಣೆ ನೀಡಿದ್ದಾರೆ.

ಸಿಪಿಎಂ ಅಥವಾ ಸಿಪಿಐನಿಂದ ಬಂದವರಿಗೆ ಹಲವು ಕ್ಷೇತ್ರಗಳಲ್ಲಿ ಬಿಜೆಪಿ ಟಿಕೆಟ್‌ ನೀಡಿದೆ ಎಂದು ಕಾಂಗ್ರೆಸ್‌ ಹೇಳುತ್ತಿದೆ. ಬಾಲಶಂಕರ್‌ ಅವರ ಹೇಳಿಕೆಯು ಕಾಂಗ್ರೆಸ್‌ನ ಆರೋಪಕ್ಕೆ ಪುಷ್ಟಿ ಒದಗಿಸಿದೆ. ಬಾಲಶಂಕರ್‌ ಅವರ ಹೇಳಿಕೆಯ ಬಗ್ಗೆ ಸಿಪಿಎಂ ಮತ್ತು ಬಿಜೆಪಿ ಜನರಿಗೆ ಸ್ಪಷ್ಟನೆ ಕೊಡಬೇಕು ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷ ನಾಯಕ ರಮೇಶ್ ಚೆನ್ನಿತ್ತಲ ಆಗ್ರಹಿಸಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಸಿಪಿಎಂ ಗೆಲುವಿನ ಖಾತರಿಗೆ ಬಿಜೆಪಿ ಭಾರಿ ಕೆಲಸ ಮಾಡುತ್ತಿದೆ. ಸಿಪಿಎಂ ಮಾಡುತ್ತಿರುವ ರಾಜಕಾರಣ ರಾಜ್ಯಕ್ಕೆ ಅಪಾಯಕಾರಿ, ಇದನ್ನು ಜನರು ಮನಗಾಣುತ್ತಾರೆ ಎಂದು ಚೆನ್ನಿತ್ತಲ ಹೇಳಿದ್ದಾರೆ.

ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್‌ ಸಿಕ್ಕಿಲ್ಲ ಎಂಬ ಕಾರಣಕ್ಕೆ ಬಾಲಶಂಕರ್‌ ಅವರಿಗೆ ಮುನಿಸು ಇದೆ. ಆ ಕಾರಣದಿಂದಲೇ ಅವರು ಅಧಾರರಹಿತ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಬಿಜೆಪಿ ಮುಖಂಡರು ಹೇಳಿದ್ದಾರೆ.

ಕೇಂದ್ರ ಸಚಿವ ವಿ. ಮುರಳೀಧರನ್‌ ಅವರೂ ಬಾಲಶಂಕರ್‌ ಅವರ ಆರೋಪವನ್ನು ಅಲ್ಲಗಳೆದಿದ್ದಾರೆ. ಟಿಕೆಟ್‌ ನಿರಾಕರಣೆಯಿಂದಾದ ಬೇಸರವನ್ನು ಅವರು ಈ ರೀತಿ ಹೊರಹಾಕಿದ್ದಾರೆ ಎಂದು ಹೇಳಿದ್ದಾರೆ. ಆರೋಪವು ಆಧಾರರಹಿತ ಎಂದು ಕೇರಳ ಬಿಜೆಪಿ ಘಟಕದ ಅಧ್ಯಕ್ಷ ಕೆ.ಸುರೇಂದ್ರನ್‌ ಹೇಳಿದ್ದಾರೆ. ಸಿಪಿಎಂ ಮತ್ತು ಬಿಜೆಪಿ ನಡುವೆ ಯಾವುದೇ ಒಳ ಒಪ್ಪಂದ ಇಲ್ಲ ಎಂದು ಬಿಜೆಪಿಯ ಏಕೈಕ ಶಾಸಕ ಒ. ರಾಜಗೋಪಾಲ್‌ ಹೇಳಿದ್ದಾರೆ.

ಈಗ ಆಗಿರುವ ಮುಜುಗರ ತಪ್ಪಿಸುವುದಕ್ಕಾಗಿ ಸಿಪಿಎಂ ಕೂಡ ಬಿಜೆಪಿ ಮುಖಂಡರ ನಿಲುವನ್ನೇ ತಳೆದಿದೆ.

ಬಾಲಶಂಕರ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹತ್ತಿರ ಇರುವವರು ಎನ್ನಲಾಗುತ್ತಿದೆ. ‘ನರೇಂದ್ರ ಮೋದಿ: ಕ್ರಿಯೇಟಿವ್‌ ಡಿಸ್‌ರಪ್ಟರ್‌’ ಎಂಬ ಪುಸ್ತಕವನ್ನು ಬಾಲಶಂಕರ್‌ ಬರೆದಿದ್ದಾರೆ. ಬಾಲಶಂಕರ್‌ ಅವರ ಹೆಸರನ್ನು ಚೆಂಗನ್ನೂರು ಕ್ಷೇತ್ರದಿಂದ ಪರಿಗಣಿಸಲಾಗಿತ್ತು.

ಎನ್‌ಡಿಎ ತೊರೆದ ಥಾಮಸ್‌ ಬಣ

ಕೇಂದ್ರದ ಮಾಜಿ ಸಚಿವ ಪಿ.ಸಿ.ಥಾಮಸ್‌ ನೇತೃತ್ವದ ಕೇರಳ ಕಾಂಗ್ರೆಸ್‌ (ಥಾಮಸ್‌) ಬಣವು ಎನ್‌ಡಿಎ ತೊರೆದು ಕೇರಳ ಕಾಂಗ್ರೆಸ್‌ (ಜೋಸೆಫ್‌) ಬಣದ ಜತೆಗೆ ವಿಲೀನವಾಗಲು ನಿರ್ಧರಿಸಿದೆ. ಥಾಮಸ್‌ ಅವರು ಆರು ಬಾರಿ ಸಂಸದರಾಗಿದ್ದವರು. 2004ರಲ್ಲಿ ಕೇರಳದ ಮೊದಲ ಎನ್‌ಡಿಎ ಸಂಸದ ಅವರು. ಈ ಬಾರಿ ಅವರ ಪಕ್ಷಕ್ಕೆ ಒಂದೂ ಕ್ಷೇತ್ರದಲ್ಲಿ ಟಿಕೆಟ್‌ ನೀಡದಿರುವುದು ಅವರು ಎನ್‌ಡಿಎ ತೊರೆಯಲು ಕಾರಣ. ಕೇರಳ ಕಾಂಗ್ರೆಸ್‌ (ಜೋಸೆಫ್‌) ಬಣವು ಯುಡಿಎಫ್‌ ಜತೆಗಿದೆ. ಹಾಗಾಗಿ, ಯುಡಿಎಫ್‌ ಪರವಾಗಿ ಪ್ರಚಾರ ಮಾಡುವುದಾಗಿ ಥಾಮಸ್‌ ಹೇಳಿದ್ದಾರೆ.

ಶೋಭಾಗೆ ಟಿಕೆಟ್‌

ಕೇರಳದ ಬಿಜೆಪಿಯ ಹಿರಿಯ ಮಹಿಳಾ ನಾಯಕಿ ಶೋಭಾ ಸುರೇಂದ್ರನ್‌ ಅವರನ್ನು ತಿರುವನಂತಪುರದ ಕಳಕ್ಕೂಟಂ ‌ಕ್ಷೇತ್ರದಿಂದ ಕಣಕ್ಕೆ ಇಳಿಸಲು ನಿರ್ಧರಿಸಲಾಗಿದೆ. ಶೋಭಾ ಅವರು ಪಕ್ಷದ ರಾಜ್ಯ ಘಟಕದ ನಾಯಕರ ಜತೆ ಉತ್ತಮ ಸಂಬಂಧ ಹೊಂದಿಲ್ಲ. ಹಾಗಾಗಿ, ರಾಜ್ಯದಿಂದ ಶಿಫಾರಸು ಮಾಡಲಾದ ಪಟ್ಟಿಯಲ್ಲಿ ಶೋಭಾ ಹೆಸರು ಇರಲಿಲ್ಲ. ಹಾಗಿದ್ದರೂ ಪಕ್ಷದ ವರಿಷ್ಠರ ಮಧ್ಯಪ್ರವೇಶದಿಂದಾಗಿ ಶೋಭಾ ಅವರಿಗೆ ಟಿಕೆಟ್‌ ನೀಡಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಾಲಕ್ಕಾಡ್‌ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 40,076 ಮತಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದರು.

ಕೇರಳ ಸಿ.ಎಂ ಆಸ್ತಿ ಮೌಲ್ಯ ₹54 ಲಕ್ಷ

ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರು ನಾಮಪತ್ರದ ಜತೆಗೆ ನೀಡಿರುವ ಪ್ರಮಾಣಪತ್ರದ ಪ್ರಕಾರ ಅವರ ಒಟ್ಟು ಆಸ್ತಿ ಮೌಲ್ಯ ₹54 ಲಕ್ಷ. ಎರಡು ನಿವೇಶನಗಳು ಮತ್ತು ಅದರಲ್ಲಿರುವ ಮನೆಯ ಮೌಲ್ಯ ₹51.95 ಲಕ್ಷ. ಅವರ ಚರಾಸ್ತಿಯ ಮೌಲ್ಯ ₹2.04 ಲಕ್ಷ. ಅದರಲ್ಲಿ ಬ್ಯಾಂಕ್‌ ಖಾತೆಯಲ್ಲಿರುವ ₹78,048 ಮತ್ತು ಮಲಯಾಳಂ ಕಮ್ಯುನಿಕೇಷನ್‌ ಲಿ.ನ ₹10 ಸಾವಿರ ಮೌಲ್ಯದ ಷೇರುಗಳು ಸೇರಿವೆ. ವಿಜಯನ್‌ ಅವರ ಹೆಂಡತಿ ಕಮಲಾ ಅವರ ಹೆಸರಿನಲ್ಲಿರುವ ಆಸ್ತಿಯ ಮೌಲ್ಯ ₹35 ಲಕ್ಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT