ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್‌ಎಸ್‌ಎಸ್‌ ಸರ್ಕಾರದ ರಿಮೋಟ್‌ ಕಂಟ್ರೋಲ್‌ ಅಲ್ಲ: ಮೋಹನ್‌ ಭಾಗವತ್‌

Last Updated 18 ಡಿಸೆಂಬರ್ 2021, 16:08 IST
ಅಕ್ಷರ ಗಾತ್ರ

ಧರ್ಮಶಾಲಾ: ‘ಮಾಧ್ಯಮಗಳು ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್)ಅನ್ನು ಸರ್ಕಾರದ ರಿಮೋಟ್ ಕಂಟ್ರೋಲ್ ಎಂದು ಬಿಂಬಿಸುತ್ತವೆ. ಆದರೆ ಇದೆಲ್ಲ ಸತ್ಯವಲ್ಲ,’ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಶನಿವಾರ ಹೇಳಿದರು.

‘ಭಾರತವು ವಿಶ್ವದ ಮಹಾ ಶಕ್ತಿಯಲ್ಲದಿರಬಹುದು. ಆದರೆ, ಸಾಂಕ್ರಾಮಿಕ ನಂತರದ ಯುಗದಲ್ಲಿ ವಿಶ್ವ ಗುರು ಆಗುವ ಸಾಮರ್ಥ್ಯವನ್ನು ಭಾರತ ಹೊಂದಿದೆ,’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಧರ್ಮಶಾಲಾದಲ್ಲಿ ಮಾಜಿ ಸೈನಿಕರನ್ನು ಉದ್ದೇಶಿಸಿ ಮಾತನಾಡಿದ ಭಾಗವತ್, ‘ಮಾಧ್ಯಮಗಳು ನಮ್ಮನ್ನು ಸರ್ಕಾರದ ರಿಮೋಟ್ ಕಂಟ್ರೋಲ್ ಎಂದು ಕರೆಯುತ್ತವೆ. ಆದರೆ ಅದು ಸುಳ್ಳು. ನಮ್ಮ ಕೆಲವು ಕಾರ್ಯಕರ್ತರು ಸರ್ಕಾರದ ಭಾಗವಾಗಿರುವುದಂತೂ ಸತ್ಯ. ನಮ್ಮ ಸ್ವಯಂ ಸೇವಕರಿಗೆ ಸರ್ಕಾರ ಯಾವುದೇ ರೀತಿಯ ಭರವಸೆ ನೀಡುವುದಿಲ್ಲ. ಸರ್ಕಾರದಿಂದ ನಮಗೆ ಏನು ಸಿಗುತ್ತದೆ ಎಂದು ಜನ ಕೇಳುತ್ತಾರೆ. ನಾವು ಪಡೆದುಕೊಂಡಿರುವುದನ್ನೂ ಕಳೆದುಕೊಳ್ಳಬಹುದು ಎಂಬುದಷ್ಟೇ ನಮ್ಮ ಉತ್ತರ,’ ಎಂದು ಭಾಗವತ್‌ ಹೇಳಿದರು. ‌

ಭಾರತೀಯ ಪ್ರಾಚೀನ ವೈದ್ಯಕೀಯ ಪದ್ಧತಿಯ ಕುರಿತು ಮಾತನಾಡಿದ ಅವರು, ‘ಈಗ, ಜಗತ್ತು ಭಾರತದತ್ತ ನೋಡುತ್ತಿದೆ. ಭಾರತೀಯ ಮಾದರಿಯನ್ನು ಅನುಕರಿಸಲು ಬಯಸಿದೆ. ನಮ್ಮ ದೇಶವು ವಿಶ್ವ ಶಕ್ತಿಯಾಗದಿರಬಹುದು, ಆದರೆ ಅದು ಖಂಡಿತವಾಗಿಯೂ ವಿಶ್ವ ಗುರುವಾಗಬಹುದು,’ ಎಂದು ಅವರು ಅಭಿಪ್ರಾಯಪಟ್ಟರು.

ಇತ್ತೀಚೆಗೆ ತಮಿಳುನಾಡಿನ ಕೂನೂರ್ ಬಳಿ ಹೆಲಿಕಾಪ್ಟರ್ ಅಪಘಾತದಲ್ಲಿ ಮಡಿದ ರಕ್ಷಣಾ ಪಡೆಗಳ ಮುಖ್ಯಸ್ಥ ದಿವಂಗತ ಬಿಪಿನ್ ರಾವತ್ ಮತ್ತು ಇತರ 13 ಮಂದಿಯ ಸ್ಮರಣಾರ್ಥ ಆರ್‌ಎಸ್‌ಎಸ್ ಮುಖ್ಯಸ್ಥರು ಒಂದು ನಿಮಿಷ ಮೌನ ಆಚರಿಸಿದರು.

ಒಗ್ಗಟ್ಟು ಇಲ್ಲದ ಕಾರಣಕ್ಕೆ ಅವಿಭಜಿತ ಭಾರತವು ವಿದೇಶಿ ಆಕ್ರಮಣಕಾರರೊಂದಿಗಿನ ಹಲವಾರು ಯುದ್ಧಗಳಲ್ಲಿ ಸೋತಿದೆ ಎಂದು ಹೇಳಿದ ಅವರು, ಏಕತೆಗಾಗಿ ಕರೆ ನೀಡಿದರು.


ತಮ್ಮ ಭಾಷಣದಲ್ಲಿ ಬಿ.ಆರ್.ಅಂಬೇಡ್ಕರ್ ಅವರನ್ನು ಭಾಗವತ್‌ ಉಲ್ಲೇಖಿಸಿದರು. ‘ಯಾರದ್ದೋ ಬಲದ ಕಾರಣಕ್ಕೆ ನಾವು ಸೋಲಲಾರೆವು, ನಮ್ಮ ದೌರ್ಬಲ್ಯಗಳ ಕಾರಣಕ್ಕೆ ಸೋಲುತ್ತೇವೆ,’ ಎಂದು ಅವರು ಹೇಳಿದರು.

ಭಾಗವತ್ ಅವರು ಐದು ದಿನಗಳ ಕಾಲ ಹಿಮಾಚಲ ಪ್ರದೇಶಕ್ಕೆ ಪ್ರವಾಸ ಕೈಗೊಂಡಿದ್ದು, ಇದೇ ವೇಳೆಯಲ್ಲೇ ಟಿಬೆಟಿಯನ್ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರನ್ನು ಭೇಟಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT