ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆಯಲ್ಲಿ ಗದ್ದಲ: ಕೇರಳ ಸರ್ಕಾರದ ಅರ್ಜಿ ವಜಾಗೊಳಿಸಿದ ‘ಸುಪ್ರೀಂ’

ಎಲ್‌ಡಿಎಫ್‌ ಶಾಸಕರ ವಿರುದ್ಧದ ಪ್ರಕರಣ: ‘ವಿಶೇಷ ಹಕ್ಕುಗಳು ಕ್ರಿಮಿನಲ್‌ ಕಾನೂನು ವಿರುದ್ಧ ರಕ್ಷಣೆ ಒದಗಿಸುವುದಿಲ್ಲ’
Last Updated 28 ಜುಲೈ 2021, 8:30 IST
ಅಕ್ಷರ ಗಾತ್ರ

ನವದೆಹಲಿ: ಕೇರಳ ವಿಧಾನಸಭೆಯಲ್ಲಿ 2015ರ ಮಾರ್ಚ್‌ 13ರಂದು ನಡೆದ ಗದ್ದಲಕ್ಕೆ ಸಂಬಂಧಿಸಿದಂತೆ ಎಲ್‌ಡಿಎಫ್‌ ಶಾಸಕರ ವಿರುದ್ಧ ದಾಖಲಿಸಿರುವ ಕ್ರಿಮಿನಲ್‌ ಪ್ರಕರಣಗಳನ್ನು ವಾಪಸ್‌ ಪಡೆಯುವಂತೆ ಕೋರಿ ಕೇರಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ತಿರಸ್ಕರಿಸಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್‌ ವಜಾಗೊಳಿಸಿದ್ದನ್ನು ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು.

ನ್ಯಾಯಮೂರ್ತಿಗಳಾದ ಡಿ.ವೈ. ಚಂದ್ರಚೂಡ್‌ ಮತ್ತು ಎಂ.ಆರ್‌. ಶಾ ಅವರನ್ನೊಳಗೊಂಡ ಪೀಠವು ಕೇರಳ ಸರ್ಕಾರದ ಅರ್ಜಿಯನ್ನು ತಿರಸ್ಕರಿಸಿದೆ.

‘ಸಾರ್ವಜನಿಕ ಆಸ್ತಿಯನ್ನು ನಾಶಗೊಳಿಸುವುದನ್ನು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸರಿಸಮಾನವಾಗಿದೆ ಎಂದು ಹೋಲಿಸುವುದು ಅಥವಾ ವಿರೋಧ ಪಕ್ಷಗಳ ಸದಸ್ಯರಿಗೆ ಶಾಸನಬದ್ಧವಾಗಿ ದೊರೆತಿರುವ ಪ್ರತಿಭಟನೆಯ ರೂಪ ಎಂದು ಪರಿಗಣಿಸಲು ಸಾಧ್ಯವಿಲ್ಲ’ ಎಂದು ಪೀಠವು ಹೇಳಿದೆ.

‘ಶಾಸಕರಿಗೆ ಇರುವ ವಿಶೇಷ ಹಕ್ಕುಗಳ ಮೂಲಕ ಸಾಮಾನ್ಯ ಕಾನೂನುಗಳಿಂದ ವಿನಾಯಿತಿ ಪಡೆಯುವ ಮಾರ್ಗ ಅನುಸರಿಸಬಾರದು’ ಎಂದು ಪೀಠವು ಅಭಿಪ್ರಾಯಪಟ್ಟಿದೆ.

‘ಶಾಸಕರ ಅಭಿವ್ಯಕ್ತಿ ಸ್ವಾತಂತ್ರ್ಯವು ಮತ್ತು ವಿಶೇಷ ಹಕ್ಕುಗಳು ಕ್ರಿಮಿನಲ್‌ ಕಾನೂನಿನ ವಿರುದ್ಧ ರಕ್ಷಣೆ ಒದಗಿಸುವುದಿಲ್ಲ. ಸಾರ್ವಜನಿಕ ಆಸ್ತಿ ನಾಶಗೊಳಿಸುವುದನ್ನು ಸದನದ ಸದಸ್ಯರ ಅಗತ್ಯ ಕಾರ್ಯನಿರ್ವಹಣೆಗೆ ಸರಿಸಮಾನವಾಗಿದೆ ಎಂಬುದಾಗಿ ಪರಿಗಣಿಸಬಾರದು’ ಎಂದು ತಿಳಿಸಿದೆ.

2015ರ ಮಾರ್ಚ್‌ 13ರಂದು ವಿಧಾನಸಭೆಯಲ್ಲಿ ಭಾರೀ ಗದ್ದಲ ಉಂಟಾಗಿತ್ತು. ವಿರೋಧ ಪಕ್ಷದಲ್ಲಿದ್ದ ಎಲ್‌ಡಿಎಫ್‌ ಶಾಸಕರು ಅಂದಿನ ಹಣಕಾಸು ಸಚಿವ ಕೆ.ಎಂ. ಮಣಿ ಅವರು ರಾಜ್ಯ ಬಜೆಟ್‌ ಮಂಡಿಸುವುದನ್ನು ತಡೆಯಲು ಯತ್ನಿಸಿದ್ದರು. ಮಣಿ ಅವರ ವಿರುದ್ಧ ಭ್ರಷ್ಟಾಚಾರದ ಆರೋಪಗಳಿದ್ದವು.

ಸದನದಲ್ಲಿ ಅಧಿಕಾರಿಗಳ ಮೇಜಿನ ಮೇಲಿದ್ದ ಕಂಪ್ಯೂಟರ್‌, ಕೀಬೋರ್ಡ್‌ಗಳು ಮತ್ತು ಮೈಕ್‌ಗಳನ್ನು ಎಲ್‌ಡಿಎಫ್‌ ಸದಸ್ಯರು ಹಾನಿಗೊಳಿಸಿದ್ದರು.

ಈ ಪ್ರಕರಣದ ಬಗ್ಗೆ ಮಾರ್ಚ್‌ 12ರಂದು ಹೈಕೋರ್ಟ್‌ ನೀಡಿದ್ದ ಆದೇಶವನ್ನು ಪ್ರಶ್ನಿಸಿ ಕೇರಳ ಸರ್ಕಾರ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿತ್ತು. ಈ ಘಟನೆಯು ವಿಧಾನಸಭೆಯ ಅಧಿವೇಶನದಲ್ಲಿ ನಡೆದಿತ್ತು. ಹೀಗಾಗಿ, ಸ್ಪೀಕರ್‌ ಅವರ ಪೂರ್ವಾನುಮತಿ ಇಲ್ಲದೆಯೇ ಪ್ರಕರಣವನ್ನು ದಾಖಲಿಸಲು ಅವಕಾಶ ಇಲ್ಲ ಎಂದು ಕೇರಳ ಸರ್ಕಾರ ಪ್ರತಿಪಾದಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT