ಮಂಗಳವಾರ, ಏಪ್ರಿಲ್ 20, 2021
32 °C
ಉತ್ತರ ಪ್ರದೇಶ ವಿಧಾನಸಭೆ ಅಧಿವೇಶನ

ಕ್ರಿಮಿನಲ್ ಪ್ರಕರಣ ಹಿಂಪಡೆಯುವ ಸರ್ಕಾರದ ಕ್ರಮಕ್ಕೆ ಪ್ರತಿಪಕ್ಷ ತೀವ್ರ ಆಕ್ಷೇಪ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಲಖನೌ: ರಾಜಕೀಯ ಮುಖಂಡರ ವಿರುದ್ಧ ದಾಖಲಾಗಿರುವ ಕ್ರಿಮಿನಲ್ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಬಿಜೆಪಿ ಸರ್ಕಾರದ ನಿರ್ಧಾರ ಮಂಗಳವಾರ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಪ್ರತಿ ಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದಕ್ಕೆ ಕಾರಣವಾಯಿತು.

‘ಹಿಂದಿನ ಸರ್ಕಾರದ ಅವಧಿಯಲ್ಲಿ ಭಯೋತ್ಪಾದಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲಾಗಿದೆ‘ ಎಂದು ಆರೋಪಿಸಿದ ಆಡಳಿತ ಪಕ್ಷದ ಶಾಸಕರು, ‘ಬಿಜೆಪಿ ಸರ್ಕಾರ ಪ್ರತಿಭಟನಾಕಾರರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯುತ್ತಿದೆ‘ ಎಂದು ಸಮರ್ಥಿಸಿಕೊಂಡರು.

ಇದೇ ವೇಳೆ ಪ್ರಶ್ನೋತ್ತರ ಅವಧಿಯಲ್ಲಿ ಬಿಎಸ್‌ಪಿ ಸದಸ್ಯ ಶ್ಯಾಮ್ ಸುಂದರ್ ಶರ್ಮಾ ಅವರ ಪ್ರಶ್ನೆಗೆ ಉತ್ತರಿಸಿದ ಕಾನೂನು ಸಚಿವ ಬ್ರಿಜೇಶ್ ಪಾಠಕ್, ‘ಏಪ್ರಿಲ್ 2017 ರಿಂದ ಜುಲೈ 2020ರವರೆಗೆ ಜನಹಿತ(ಸಾರ್ವಜನಿಕ ಹಿತಾಸಕ್ತಿಗಾಗಿ) ಯೋಜನೆಯಡಿ ರಾಜಕೀಯ ನಾಯಕರು ಮತ್ತು ಕಾರ್ಮಿಕರ ವಿರುದ್ಧದ 670 ಪ್ರಕರಣಗಳನ್ನು ಬಿಜೆಪಿ ಸರ್ಕಾರ ಹಿಂದಕ್ಕೆ ಪಡೆದಿದೆ ಎಂದು ಹೇಳಿದರು.

ಸರ್ಕಾರ ರಚನೆಯಾದ ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ನ್ಯಾಯಾಂಗದ ಮೇಲಿನ ಹೊರೆ ಕಡಿಮೆ ಮಾಡುವುದಕ್ಕಾಗಿ ರಾಜಕೀಯ ಸಂಬಂಧಿ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ನಿರ್ಧಾರವನ್ನು ಘೋಷಿಸಿದ್ದರು ಎಂದು ಹೇಳಿದರು.

ಪ್ರಶ್ನೋತ್ತರ ಅವಧಿಯಲ್ಲಿ ಶರ್ಮಾ ಅವರು ಪೂರಕ ಪ್ರಶ್ನೆಯಾಗಿ, ‘ಸರ್ಕಾರ ಹಿಂಪಡೆದಿರುವ ರಾಜಕೀಯ ಪ್ರಕರಣಗಳು ಮತ್ತು ಅದರಲ್ಲಿರುವ ಬಿಜೆಪಿಯ ಸದಸ್ಯತ್ವ ಪಡೆದ ವ್ಯಕ್ತಿಗಳ ಪಟ್ಟಿ ಕೊಡುವಂತೆ‘ ಕೇಳಿದರು.

ಇದಕ್ಕೆ ಉತ್ತರಿಸಿದ ಕಾನೂನು ಸಚಿವರು, ‘ರಾಜಕೀಯ ಪ್ರಕರಣಗಳನ್ನು ಪ್ರತ್ಯೇಕವಾಗಿ ವ್ಯಾಖ್ಯಾನಿಸಲಾಗಿಲ್ಲ. ಆದರೆ, ಗಂಭೀರವಲ್ಲದ ಪ್ರಕರಣಗಳನ್ನು ಹಿಂಪಡೆದಿದ್ದೇವೆ‘ ಎಂದು ಹೇಳಿದರು.

‘ಪ್ರಕರಣಗಳನ್ನು ಹಿಂಪಡೆಯಲು ಅರ್ಜಿ ಸಲ್ಲಿಸಿದ ನಂತರ, ಅಂತಿಮ ತೀರ್ಮಾನಕ್ಕೆ ಬರುವ ಮುನ್ನ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ 13 ಅಂಶಗಳ ವರದಿಯನ್ನು ಕೋರಲಾಗುತ್ತದೆ. ನಂತರ ಗೃಹ ಮತ್ತು ಕಾನೂನು ಇಲಾಖೆಗಳ ಪ್ರಧಾನ ಕಾರ್ಯದರ್ಶಿಗಳ ಅನುಮತಿ ಪಡೆಯಲಾಗುತ್ತದೆ‘ ಎಂದು ಸಚಿವರು ವಿವರಿಸಿದರು.

‘ಈ ವಿಷಯದಲ್ಲಿ ಕಾನೂನು, ಯಾವುದೇ ಪಕ್ಷ ಮತ್ತು ಇತರೆ ಕಾರಣಗಳ ಆಧಾರದಲ್ಲಿ ತಾರಮ್ಯ ಮಾಡುವುದಿಲ್ಲ. ಆದರೆ ಪ್ರಕರಣಗಳನ್ನು ಹಿಂದಕ್ಕೆ ಪಡೆದಿರುವವರ ಹೆಸರುಗಳನ್ನು ಬಹಿರಂಗೊಳಿಸಲಾಗುವುದಿಲ್ಲ‘ ಎಂದು ಹೇಳಿದರು.

‘ಸ್ಪೀಕರ್ ಅನುಮತಿ ನೀಡಿದರೆ, ಪ್ರಕರಣಗಳನ್ನು ಹಿಂತೆಗೆದುಕೊಂಡ ವ್ಯಕ್ತಿಗಳ ಪಟ್ಟಿಯನ್ನು ನಾನು ಸಾರ್ವಜನಿಕಗೊಳಿಸಬಹುದು‘ ಎಂದೂ ಸಚಿವರು ಹೇಳಿದರು.

‘ಹಿಂದಿನ ಸರ್ಕಾರದಲ್ಲಿ ಸ್ಫೋಟಕ ಕಾಯ್ದೆ ಮತ್ತು ಪೊಟಾ ಕಾಯ್ದೆಯಡಿ ಆರೋಪ ಎದುರಿಸುತ್ತಿದ್ದ ಭಯೋತ್ಪಾದಕರ ವಿರುದ್ಧದ ಪ್ರಕರಣಗಳನ್ನು ಹಿಂಪಡೆಯಲಾಗಿದೆ‘ ಎಂದು ಸಮಾಜವಾದಿ ಪಕ್ಷದ ಸರ್ಕಾರದ ಹೆಸರನ್ನು ಉಲ್ಲೇಖಿಸದೇ ಕಾನೂನು ಸಚಿವರು ಹೇಳಿದರು. ಇದು ವಿರೋಧ ಪಕ್ಷದ ನಾಯಕ ರಾಮ್‌ ಗೋವಿಂದ್ ಚೌಧರಿ ಅವರನ್ನು ಕೆರಳಿಸಿತು.

ಈ ವೇಳೆ ಸಮಾಜವಾದಿ ಪಕ್ಷದ ಸದಸ್ಯರು ಸ್ಪೀಕರ್‌ ಮುಂಭಾಗಕ್ಕೆ ಧಾವಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು