ಸದ್ದಾಂ, ಗಡಾಫಿ ಸಹ ಚುನಾವಣೆ ಗೆಲ್ಲುತ್ತಿದ್ದರು: ರಾಹುಲ್ ಗಾಂಧಿ

ನವದೆಹಲಿ: ಭಾರತದಲ್ಲಿ ಪ್ರಜಾಪ್ರಭುತ್ವದ ಅವನತಿಯಾಗುತ್ತಿದೆ ಎಂಬ ಅಧ್ಯಯನ ವರದಿಗಳ ಆಧಾರದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ನೇತಾರ ರಾಹುಲ್ ಗಾಂಧಿ, ಇರಾಕ್ನ ಸರ್ವಾಧಿಕಾರಿ ಸದ್ದಾಂ ಹುಸೇನ್ ಹಾಗೂ ಲಿಬಿಯಾದ ಮುಅಮ್ಮರ್ ಗಡಾಫಿ ಅವರು ಸಹ ಚುನಾವಣೆ ಗೆಲ್ಲುತ್ತಿದ್ದರು ಎಂದು ಹೇಳಿದ್ದಾರೆ.
ಬ್ರೌನ್ ವಿಶ್ವವಿದ್ಯಾಲಯದ ಆನ್ಲೈನ್ ಸಂವಾದದಲ್ಲಿ ರಾಹುಲ್ ಗಾಂಧಿ ತಮ್ಮ ಅಭಿಮತವನ್ನು ವ್ಯಕ್ತಪಡಿಸಿದರು.
ಸದ್ದಾಂ ಹುಸೇನ್ ಮತ್ತು ಗಡಾಫಿ ಸಹ ಚುನಾವಣೆ ನಡೆಸುತ್ತಿದ್ದರು ಮತ್ತು ಗೆಲುವು ಸಾಧಿಸುತ್ತಿದ್ದರು. ಅಲ್ಲಿ ಮತದಾನ ನಡೆಯುತ್ತಿಲ್ಲ ಎಂಬುದಲ್ಲ. ಆದರೆ ಆ ಮತವನ್ನು ರಕ್ಷಿಸಲು ಯಾವುದೇ ಸಾಂವಿಧಾನಿಕ ಚೌಕಟ್ಟು ಇರಲಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಭಾರತವೀಗ ಚುನಾಯಿತ ನಿರಂಕುಶಾಧಿಪತ್ಯ; ವಿ-ಡೆಮ್ ವರದಿ
ಚುನಾವಣೆ ಎಂಬುದು ಜನರು ಹೋಗಿ ಮತ ಯಂತ್ರಗಳಲ್ಲಿ ಬಟನ್ ಒತ್ತುವುದಲ್ಲ. ಚುನಾವಣೆ ಎಂಬುದು ನಿರೂಪಣೆ. ದೇಶದ ಸಾಂವಿಧಾನಿಕ ಚೌಕಟ್ಟು ಸರಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂಬುದನ್ನು ಖಾತ್ರಿಪಡಿಸುವುದಾಗಿದೆ. ಚುನಾವಣೆ ನ್ಯಾಯಯುತವಾಗಿ ನಡೆಯುತ್ತಿದ್ದು, ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು. ಹಾಗಾಗಿ ಮತದಾನದಲ್ಲಿ ಈ ಎಲ್ಲ ವಿಷಯಗಳು ಮುಖ್ಯವೆನಿಸುತ್ತದೆ ಎಂದು ಹೇಳಿದರು.
Live: My interaction with Prof Ashutosh Varshney, faculty & students of Brown University. https://t.co/1goKjIgp9H
— Rahul Gandhi (@RahulGandhi) March 16, 2021
ಭಾರತದ ಪ್ರಜಾಪ್ರಭುತ್ವ ಈಗ ಚುನಾಯಿತ ನಿರಂಕುಶಾಧಿಪತ್ಯದ ಸ್ಥಿತಿಗೆ ಇಳಿದಿದೆ ಎಂದು ಸ್ವೀಡನ್ನ ಗೊಥೆನ್ಬರ್ಗ್ ವಿಶ್ವವಿದ್ಯಾಲಯದ ವಿ-ಡೆಮ್ ಸ್ವತಂತ್ರ ಸಂಶೋಧನಾ ಸಂಸ್ಥೆಯ ಪ್ರಜಾಪ್ರಭುತ್ವ ವರದಿ 2021ರಲ್ಲಿ ಉಲ್ಲೇಖಿಸಿದೆ.
ಅಮೆರಿಕದ ಫ್ರೀಡಮ್ ಹೌಸ್ ಭಾರತವನ್ನು 'ಮುಕ್ತ ದೇಶ'ದಿಂದ 'ಭಾಗಶಃ ಮುಕ್ತ ದೇಶ' ದರ್ಜೆ ಇಳಿಸಿ, ಭಾರತದಲ್ಲಿ ಪ್ರಜಾಪ್ರಭುತ್ವ ಅವನತಿಯಾಗುತ್ತಿದೆ ಎಂದು ವರದಿ ಬಿಡುಗಡೆಗೊಳಿಸಿತ್ತು.
ಆದರೆ ವರದಿಗಳನ್ನು ತಳ್ಳಿ ಹಾಕಿರುವ ಭಾರತ ಸರ್ಕಾರ, ಅದನ್ನು 'ದಾರಿ ತಪ್ಪಿಸುವ', 'ತಪ್ಪಾದ' ಮತ್ತು 'ಅನುಚಿತ' ಎಂದು ಹೇಳಿದೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.