ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಸ್ಸಾಂ ಚುನಾವಣಾ ಫಲಿತಾಂಶ: ಯಾರಾಗಲಿದ್ದಾರೆ ಮುಂದಿನ ಮುಖ್ಯಮಂತ್ರಿ?

Last Updated 3 ಮೇ 2021, 7:40 IST
ಅಕ್ಷರ ಗಾತ್ರ

ಗುವಾಹಟಿ: ಅಸ್ಸಾಂ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದ್ದು ಬಿಜೆಪಿ ಅಧಿಕಾರ ಉಳಿಸಿಕೊಂಡಿರುವ ಬೆನ್ನಲ್ಲೇ ಮುಂದಿನ ಮುಖ್ಯಮಂತ್ರಿ ಯಾರಾಗಲಿದ್ದಾರೆ ಎಂಬ ಕುತೂಹಲ ಉಂಟಾಗಿದೆ.

ಈ ವಿಚಾರವಾಗಿ ನಿರ್ಧಾರ ಕೈಗೊಳ್ಳುವ ಆಯ್ಕೆಯನ್ನು ಪಕ್ಷದ ರಾಜ್ಯ ಮುಖಂಡರು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪಕ್ಷದ ಸಂಸದೀಯ ಮಂಡಳಿಗೆ ಬಿಟ್ಟಿದ್ದಾರೆ ಎನ್ನಲಾಗಿದೆ.

‘ಸಂಸದೀಯ ಮಂಡಳಿ ತೀರ್ಮಾನ ತೆಗೆದುಕೊಳ್ಳಲಿದೆ. ಪಕ್ಷವು ವೀಕ್ಷಕರೊಬ್ಬರನ್ನು ಕಳುಹಿಸಲಿದ್ದು ಅವರು ಎಲ್ಲರ ಅಭಿಪ್ರಾಯ ಪಡೆಯಲಿದ್ದಾರೆ. ಬಳಿಕ ಅದರಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ’ ಎಂದು ಬಿಜೆಪಿಯ ಅಸ್ಸಾಂ ಘಟಕದ ಅಧ್ಯಕ್ಷ ರಂಜಿತ್ ಕುಮಾರ್ ದಾಸ್ ಹೇಳಿದ್ದಾರೆ.

ಹಾಲಿ ಮುಖ್ಯಮಂತ್ರಿ ಸರ್ಬಾನಂದ ಸೊನೊವಾಲ್ ಅವರನ್ನೇ ಮುಂದುವರಿಸಲಾಗುತ್ತದೆಯೇ ಅಥವಾ ಹೊಸಮುಖವನ್ನು ಆಯ್ಕೆ ಮಾಡಲಾಗುತ್ತದೆಯೇ ಎಂಬ ಬಗ್ಗೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸಹ ಸುಳಿವು ಬಿಟ್ಟುಕೊಟ್ಟಿಲ್ಲ.

ಮುಖ್ಯಮಂತ್ರಿ ಸ್ಥಾನಕ್ಕೆ ಸೊನೊವಾಲ್ ಮತ್ತು ಪಕ್ಷದ ಹಿರಿಯ ನಾಯಕ ಹಿಮಂತ ಬಿಸ್ವ ಶರ್ಮಾ ಅವರ ನಡುವೆ ಪೈಪೋಟಿ ಇದೆ ಎಂಬುದನ್ನು ಪಕ್ಷದ ಆಂತರಿಕ ಮೂಲಗಳು ಬಹಿರಂಗಪಡಿಸಿವೆ. ಹಿಮಂತ ಬಿಸ್ವ ಶರ್ಮಾ ಅವರು 2015ರ ಆಗಸ್ಟ್‌ನಲ್ಲಿ ಕಾಂಗ್ರೆಸ್ ತೊರೆದು 2016ರಲ್ಲಿ ಬಿಜೆಪಿಗೆ ಸೇರ್ಪಡೆಯಾದವರು.

ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್‌ನ ತರುಣ್ ಗೊಗೊಯಿ ವಿರುದ್ಧ ಬಂಡಾಯವೆದ್ದು ಶರ್ಮಾ ಕಾಂಗ್ರೆಸ್ ತೊರೆದಿದ್ದರು. 2016ರಲ್ಲಿ ಅವರು ಬಿಜೆಪಿ ಸೇರುವ ವೇಳೆಗಾಗಲೇ ಬಿಜೆಪಿಯು ಸರ್ಬಾನಂದ ಸೊನೊವಾಲ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಿ ಆಗಿತ್ತು.

‘ಸಚಿವರಾಗಿ ಉತ್ತಮ ಆಡಳಿತ ನೀಡಿದ್ದಲ್ಲದೆ, 2016ರಿಂದ ಈವರೆಗೆ ಪಕ್ಷವನ್ನು ಗೆಲುವಿನತ್ತ ಕೊಂಡೊಯ್ದ ಕಾರಣ ಮುಂದಿನ ಸಿಎಂ ಆಗಲು ಶರ್ಮಾ ಅರ್ಹರು. ಅವರು ಸರ್ಕಾರ ಮತ್ತು ಪಕ್ಷ, ಎರಡರಲ್ಲೂ ಸಮರ್ಥವಾಗಿ ಬಿಕ್ಕಟ್ಟಿನ ಸಂದರ್ಭವನ್ನು ನಿಭಾಯಿಸಬಲ್ಲವರು ಎಂಬುದನ್ನು ಈಗಾಗಲೇ ನಿರೂಪಿಸಿದ್ದಾರೆ’ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ.

2014ರಿಂದ 2016ರವರೆಗೆ ಕೇಂದ್ರ ಸಚಿವರಾಗಿ ಮತ್ತು ಆ ಬಳಿಕ ಮುಖ್ಯಮಂತ್ರಿಯಾಗಿ ಸೊನೊವಾಲ್ ಪ್ರಾಮಾಣಿಕ ವರ್ಚಸ್ಸು ಹೊಂದಿದ್ದು ಅವರನ್ನೇ ಮುಂದುವರಿಸುವ ಬಗ್ಗೆ ಮೋದಿಯವರು ಒಲವು ಹೊಂದಿದ್ದಾರೆ ಎಂದು ಅವರ ಬೆಂಬಲಿಗರು ಹೇಳಿದ್ದಾರೆ.

ಅಖಿಲ ಅಸ್ಸಾಂ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷರಾಗಿದ್ದ ಸೊನೊವಾಲ್ ಬಳಿಕ ಎಜಿಪಿ ಸೇರಿದ್ದರು. ಆ ನಂತರ ಬಿಜೆಪಿ ಸೇರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT