ಆಯಾಸಗೊಂಡು, ಬಾಯಲ್ಲಿ ರಕ್ತ ಬಂದಂತಿರುವ ಸತ್ಯೇಂದ್ರ ಜೈನ್ ಫೋಟೊ: ಕಿಡಿಕಾರಿದ ಎಎಪಿ

ಹೊಸದಿಲ್ಲಿ: ಬಂಧಿತ ದೆಹಲಿ ಸಚಿವ ಸತ್ಯೇಂದ್ರ ಜೈನ್ ಅವರು ಗಡ್ಡ ಬಿಟ್ಟಿರುವ, ಆಯಾಸಗೊಂಡಂತಿರುವ, ಬಾಯಲ್ಲಿ ರಕ್ತ ಒಸರಿದಂತೆ ಕಾಣುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗಿದ್ದು, ಎಎಪಿ ನಾಯಕರು ಕಿಡಿಕಾರಿದ್ದಾರೆ.
ಜಾರಿ ನಿರ್ದೇಶನಾಲಯದ ಕಸ್ಟಡಿಯಲ್ಲಿರುವ ಜೈನ್ ಅವರಿಗೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಚಿತ್ರಹಿಂಸೆ ಮತ್ತು ಕಿರುಕುಳ ನೀಡುತ್ತಿದೆ ಎಂದು ಎಎಪಿ ಮುಖಂಡರು ಆರೋಪಿಸಿದ್ದಾರೆ.
'ದೆಹಲಿ ಮೊಹಲ್ಲಾ ಕ್ಲಿನಿಕ್ ನೀಡಿದ ಸತ್ಯೇಂದ್ರ ಜೈನ್ ಅವರ ನಿನ್ನೆಯ ಫೋಟೊ' ಎಂಬ ಶೀರ್ಷಿಕೆಯಲ್ಲಿ ಪತ್ರಕರ್ತರೊಬ್ಬರು ಶುಕ್ರವಾರ ಟ್ವಿಟರ್‌ನಲ್ಲಿ ಹಂಚಿಕೊಂಡ ಪೋಸ್ಟ್‌ಅನ್ನು ದೆಹಲಿ ಸಿಎಂ ಅರವಿಂದ ಕೇಜ್ರಿವಾಲ್ ರೀಟ್ವೀಟ್ ಮಾಡಿದ್ದಾರೆ.
ಗುರುವಾರ ಜೈನ್ ಅವರು ರೌಸ್ ಎವೆನ್ಯೂ ಕೋರ್ಟ್‌ಗೆ ಹಾಜರಾಗಲು ಹೋಗುತ್ತಿದ್ದ ವೇಳೆ ಅಸ್ವಸ್ಥಗೊಂಡಿದ್ದರಿಂದ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ವರದಿಯಾಗಿದೆ.
57 ವರ್ಷದ ಜೈನ್ ಅವರನ್ನು ಮೇ 30ರಂದು ಬಂಧಿಸಲಾಗಿದೆ.
'ಇದು ರಾಷ್ಟ್ರಕ್ಕೆ ಮೊಹಲ್ಲಾ ಕ್ಲಿನಿಕ್ ಪರಿಚಯಿಸಿದ ಮತ್ತು ದೆಹಲಿ ಜನರ 300 ಕೋಟಿ ಉಳಿಸಿದ ವ್ಯಕ್ತಿ. ಬಳಲಿದ ಕಪ್ಪು ಕಲೆಯನ್ನು ಹೊಂದಿರುವ ಇವರು ಸತ್ಯೇಂದ್ರ ಜೈನ್. ಇದಕ್ಕೆ ಕಾರಣ ಮೋದಿ ಮತ್ತು ಅವರ ಮೈನಾ(ಇ.ಡಿ). ರಾಷ್ಟ್ರವು ಎಂದಿಗೂ ಇವರನ್ನು ಕ್ಷಮಿಸುವುದಿಲ್ಲ ಎಂದು ಎಎಪಿ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.
'ಶ್ರೀ ರಾಮಚಂದ್ರನಿಗೆ ಅಧಿಕಾರ ಸಿಕ್ಕಿತು. ಅದನ್ನು ಸದ್ಭಳಕೆ ಮಾಡಿಕೊಳ್ಳುವ ಮೂಲಕ ಮರ್ಯಾದಾ ಪುರುಷೋತ್ತಮ ಎಂದೆನಿಸಿಕೊಂಡ. ಆದರೆ ರಾವಣ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡ. ರಾವಣನ ಪ್ರತಿಕೃತಿಯನ್ನು ಇಂದು ದಹಿಸಲಾಗುತ್ತದೆ. ರಾವಣನ ಅಹಂಕಾರವೂ ಅಂತ್ಯಗೊಂಡಿದೆ. ಮೋದಿಯವರೇ ನೆನಪಿನಲ್ಲಿಡಿ, ಇತಿಹಾಸ ನಿಮ್ಮನ್ನು ಕ್ಷಮಿಸುವುದಿಲ್ಲ. ಮುಗ್ಧ ಸಚಿವರ ಜೊತೆಗಿನ ಇಂತಹ ವರ್ತನೆ ಕ್ಷಮಾರ್ಹವಲ್ಲ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
दिल्ली को मोहल्ला क्लिनिक्स देने वाले @SatyendarJain की कल की तस्वीर ... pic.twitter.com/kLTnohup1E
— 🇮🇳PULKIT NAGAR (@nagar_pulkit) June 9, 2022
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.