ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದಾನಿ ಅಕ್ರಮ ತನಿಖೆಗೆ ಕೋರಿದ್ದ ಅರ್ಜಿಯ ವಿಚಾರಣೆಗೆ ಸುಪ್ರೀಂ ಕೋರ್ಟ್‌ ಸಮ್ಮತಿ

Last Updated 9 ಫೆಬ್ರುವರಿ 2023, 7:45 IST
ಅಕ್ಷರ ಗಾತ್ರ

ನವದೆಹಲಿ: ಕೈಗಾರಿಕೋದ್ಯಮಿ ಗೌತಮ್‌ ಅದಾನಿ ನೇತೃತ್ವದ ಸಮೂಹ ಸಂಸ್ಥೆ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿರುವ ಹಿಂಡೆನ್‌ಬರ್ಗ್ ಸಂಶೋಧನಾ ವರದಿಯ ಕುರಿತ ತನಿಖೆಗೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಯ ಮೇಲ್ವಿಚಾರಣೆಯ ಸಮಿತಿಯನ್ನು ರಚಿಸಲು ಕೇಂದ್ರಕ್ಕೆ ನಿರ್ದೇಶನ ನೀಡುಬೇಕೆಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಶುಕ್ರವಾರ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ಅರ್ಜಿಯ ತುರ್ತು ವಿಚಾರಣೆ ನಡೆಸುವಂತೆ ವಕೀಲ ವಿಶಾಲ್ ತಿವಾರಿ ಅವರು ಗುರುವಾರ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಪೀಠಕ್ಕೆ ಮನವಿ ಮಾಡಿದ್ದರು.

ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಸಲ್ಲಿಸಲಾಗಿರುವ ಮತ್ತೊಂದು ಅರ್ಜಿಯ ವಿಚಾರಣೆ ಫೆಬ್ರುವರಿ 10ರಂದು ನಡೆಯುತ್ತಿದೆ. ಆ ಅರ್ಜಿಯೊಂದಿಗೆ ಶುಕ್ರವಾರ ತಮ್ಮ ಅರ್ಜಿಯನ್ನು ವಿಚಾರಣೆ ನಡೆಸಬೇಕು ಎಂದು ತಿವಾರಿ ಅವರು ಪೀಠಕ್ಕೆ ಮನವಿ ಮಾಡಿದರು.

ಕಾರ್ಪೊರೇಟ್‌ ಸಂಸ್ಥೆಗಳಿಗೆ ನೀಡಲಾಗುವ ₹500 ಕೋಟಿಗಿಂತಲೂ ಮಿಗಿಲಾದ ಸಾಲಗಳ ಮಂಜೂರಾತಿ ನೀತಿಯನ್ನು ಮೇಲ್ವಿಚಾರಣೆ ಮಾಡಲು ವಿಶೇಷ ಸಮಿತಿಯನ್ನು ರಚಿಸಲು ನಿರ್ದೇಶನ ನೀಡಬೇಕು ಎಂದೂ ತಿವಾರಿ ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಕೋರಿದ್ದಾರೆ.

ಅದಾನಿ ಸಮೂಹವು ‘ಷೇರು ಮೌಲ್ಯದ ಮೇಲೆ ಕೃತಕವಾಗಿ ಪ್ರಭಾವ ಬೀರಬಲ್ಲ ಕೃತ್ಯಗಳಲ್ಲಿ ಲಜ್ಜೆಯಿಲ್ಲದೆ ತೊಡಗಿಸಿಕೊಂಡಿದೆ ಹಾಗೂ ಲೆಕ್ಕಪತ್ರ ವಂಚನೆ ಎಸಗಿದೆ’ ಎಂದು ಹಿಂಡನ್‌ಬರ್ಗ್‌ ರಿಸರ್ಚ್‌ ಸಂಸ್ಥೆಯು ಆರೋಪ ಮಾಡಿದೆ. ಸಮೂಹವು ಶೆಲ್ ಕಂಪನಿಗಳ ಮೂಲಕ, ತೆರಿಗೆ ವಂಚಕರ ಪಾಲಿಗೆ ಸ್ವರ್ಗವೆಂದು ಕರೆಸಿಕೊಂಡಿರುವ ಸಾಗರದಾಚೆಯ ನಾಡುಗಳನ್ನು ‘ಸರಿಯಲ್ಲದ ರೀತಿಯಲ್ಲಿ’ ಬಳಸಿಕೊಂಡಿದೆ ಎಂದು ಕೂಡ ಅದು ಆರೋಪಿಸಿದೆ. ಅದಾನಿ ಸಮೂಹಕ್ಕೆ ಸೇರಿದ, ಷೇರುಪೇಟೆ ನೋಂದಾಯಿತ ಕಂಪನಿಗಳ ಸಾಲದ ಪ್ರಮಾಣವು ಗಣನೀಯ ಪ್ರಮಾಣದಲ್ಲಿ ಇದೆ. ಇದರಿಂದಾಗಿ ಇಡೀ ಸಮೂಹದ ಹಣಕಾಸಿನ ಸ್ಥಿತಿ ಅಪಾಯದಲ್ಲಿದೆ ಎಂದು ಕೂಡ ವರದಿಯಲ್ಲಿ ಹೇಳಲಾಗಿದೆ.

‘ತಪ್ಪು ಮಾಹಿತಿ, ಆಧಾರವಿಲ್ಲದ ಹಾಗೂ ವಿಶ್ವಾಸಾರ್ಹವಲ್ಲದ ಮಾಹಿತಿಯನ್ನು ಕೆಟ್ಟ ಉದ್ದೇಶದಿಂದ ಒಗ್ಗೂಡಿಸಿ ಈ ವರದಿ ಸಿದ್ಧಪಡಿಸಲಾಗಿದೆ’ ಎಂದು ಈ ವರದಿಯ ಬಗ್ಗೆ ಅದಾನಿ ಸಮೂಹ ಪ್ರತಿಕ್ರಿಯಿಸಿದೆ.

ವರದಿಯ ಪರಿಣಾಮವಾಗಿ ಉದ್ಯಮಿ ಗೌತಮ್‌ ಅದಾನಿ ಕೆಲವೇ ದಿನಗಳಲ್ಲಿ ಲಕ್ಷಾಂತರ ಕೋಟಿ ರೂಪಾಯಿಗಳ ನಷ್ಟ ಅನುಭವಿಸಿದ್ದಾರೆ.

ಇವುಗಳನ್ನೂ ಓದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT