ಶನಿವಾರ, ಅಕ್ಟೋಬರ್ 16, 2021
29 °C
ನೀಟ್‌: ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ ಮೀಸಲಾತಿ

ವಾರ್ಷಿಕ ಆದಾಯ: ಮಾನದಂಡದ ಹಿಂದಿರುವ ಕಾರಣ ವಿವರಿಸಲು ‘ಸುಪ್ರೀಂ’ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌) ರಾಷ್ಟ್ರೀಯ ಕೋಟಾದಡಿ ಮೀಸಲಾತಿ ಪಡೆಯಲು ಆರ್ಥಿಕ ದುರ್ಬಲ ವರ್ಗದ (ಇಡಬ್ಲ್ಯುಎಸ್‌) ಅಭ್ಯರ್ಥಿಗಳ ವಾರ್ಷಿಕ ₹ 8 ಲಕ್ಷ ಆದಾಯ ಇರಬೇಕು ಎಂಬ ಮಾನದಂಡ ನಿಗದಿಪಡಿಸಲಾಗಿದೆ. ಈ ಮಾನದಂಡ ನಿಗದಿಯ ಹಿಂದಿರುವ ಕಾರಣಗಳನ್ನು ವಿವರಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಗುರುವಾರ ಸೂಚಿಸಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.

ವೈದ್ಯಕೀಯ ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ನೀಡಲು, ‘ನೀಟ್‌’ನ ರಾಷ್ಟ್ರೀಯ ಕೋಟಾದಲ್ಲಿ ಒಬಿಸಿ ಹಾಗೂ ಇಡಬ್ಲ್ಯುಎಸ್‌ ಅಭ್ಯರ್ಥಿಗಳಿಗೆ ಮೀಸಲಾತಿ ಜಾರಿಗೊಳಿಸಿ ಜುಲೈ 29ರಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಔರೆಲಿಯೊ ನ್ಯೂನ್ಸ್‌ ಹಾಗೂ ಇತರರು ಅರ್ಜಿಗಳನ್ನು ಸಲ್ಲಿಸಿದ್ದರು.

‘ಆರ್ಥಿಕವಾಗಿ ದುರ್ಬಲ ವರ್ಗಗಳಿಗೆ ಸೇರಿದ ಅಭ್ಯರ್ಥಿಗಳ ವಾರ್ಷಿಕ ಆದಾಯ ₹ 8 ಲಕ್ಷ ಇರಬೇಕು ಎಂಬುದನ್ನು ನಿಗದಿ ಮಾಡುವಾಗ ಯಾವ ರೀತಿಯ ಪರಿಶೀಲನೆ ನಡೆಸಿದ್ದೀರಿ. ಒಬಿಸಿಗಳಿಗೆ ಅನ್ವಯವಾಗುವಂಥ ಮಾನದಂಡಗಳನ್ನೇ ಇಲ್ಲಿ ಅನ್ವಯಿಸಲಾಗಿದೆಯೇ’ ಎಂದು ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.

‘ಆದಾಯಕ್ಕೆ ಸಂಬಂಧಿಸಿದ ಮಾನದಂಡಗಳನ್ನು ದೇಶದಾದ್ಯಂತ ಏಕರೂಪವಾಗಿ ಅನ್ವಯಿಸಲಾಗದು. ಮುಂಬೈ ಮತ್ತು ಬೆಂಗಳೂರಿನಂಥ ನಗರಗಳಲ್ಲಿ ವಾಸಿಸುವ ವ್ಯಕ್ತಿಯ ವಾರ್ಷಿಕ ಆದಾಯವನ್ನು ಉತ್ತರ ಪ್ರದೇಶದ ಕೊನೆಯ ಗ್ರಾಮವೊಂದರ ನಿವಾಸಿಯ ಆದಾಯದೊಂದಿಗೆ ಹೋಲಿಸಲಾಗದು’ ಎಂದೂ ನ್ಯಾಯಪೀಠ ಅಭಿಪ್ರಾಯಪಟ್ಟಿತು.

ಈ ಕುರಿತು ಅಫಿಡವಿಟ್‌ ಸಲ್ಲಿಸಲು ಅವಕಾಶ ನೀಡುವಂತೆ ನಟರಾಜ್‌ ಮನವಿ ಮಾಡಿದರು. ಇದಕ್ಕೆ ಒಪ್ಪಿದ ನ್ಯಾಯಪೀಠ ವಿಚಾರಣೆಯನ್ನು ಅ.20ಕ್ಕೆ ಮುಂದೂಡಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು