ನವದೆಹಲಿ: ₹1000, ₹ 500 ಮುಖಬೆಲೆಯ ಅಮಾನ್ಯವಾಗಿರುವ ನೋಟುಗಳ ಸ್ವೀಕೃತಿಗೆ ಸಂಬಂಧಿಸಿದ ವ್ಯಕ್ತಿಗತ ಪ್ರಕರಣಗಳನ್ನು ವಿಚಾರಣೆಗೆ ಪರಿಗಣಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. ಈ ಬಗ್ಗೆ ಸರ್ಕಾರಕ್ಕೇ ದೂರು ನೀಡಬೇಕು ಎಂದು ತಿಳಿಸಿದೆ.
ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ವಿಕ್ರಂನಾಥ್ ಅವರಿದ್ದ ಪೀಠವು, ವೈಯಕ್ತಿಕ ದೂರುಗಳನ್ನು ಆಲಿಸಿ 12 ವಾರಗಳ ಅವಧಿಯಲ್ಲಿ ಪರಿಹಾರವನ್ನು ಒದಗಿಸಬೇಕು ಎಂದೂ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತು.
ಸಂವಿಧಾನದ 142ನೇ ವಿಧಿಯ ಅನುಸಾರ ಸಂವಿಧಾನ ಪೀಠದ ತೀರ್ಪಿನ ನಂತರ ನೋಟು ರದ್ದತಿ ಕುರಿತು ವೈಯಕ್ತಿಕ ಪ್ರಕರಣಗಳ ವಿಚಾರಣೆಗೆ ಅವಕಾಶ ಇರುವುದಿಲ್ಲ. ಆದರೂ, ಕೇಂದ್ರ ಸರ್ಕಾರದ ತೀರ್ಮಾನ ಕುರಿತಂತೆ ಯಾರಿಗಾದರೂ ತಕರಾರು ಇದ್ದಲ್ಲಿ ಸಂಬಂಧಿತ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲು ಅವರು ಸ್ವತಂತ್ರರು ಎಂದು ಪೀಠ ಅಭಿಪ್ರಾಯಪಟ್ಟಿತು.
₹ 1000, ₹ 500 ಮುಖಬೆಲೆಯ ನೋಟುಗಳನ್ನು ಅಮಾನ್ಯಗೊಳಿಸಿ 2016ರ ನವೆಂಬರ್‌ನಲ್ಲಿ ಕೇಂದ್ರವು ಕೈಗೊಂಡಿದ್ದ ತೀರ್ಮಾನವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿತ್ತು. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮತ್ತು ಒಕ್ಕೂಟ ಸರ್ಕಾರದ ನಡುವೆ ಮಾತುಕತೆ ಆಗಿದ್ದ ಕಾರಣ ಈ ತೀರ್ಮಾನದ ಹಿಂದೆ ಲೋಪ ಆಗಿದೆ ಎಂದು ಹೇಳಲಾಗದು ಎಂದು ಐವರು ಸದಸ್ಯರ ಸಂವಿಧಾನಪೀಠವು ಅಭಿಪ್ರಾಯಪಟ್ಟಿತ್ತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.