ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ಗೌರಿ ನೇಮಕ ತಡೆಗೆ ಸುಪ್ರೀಂ ಕೋರ್ಟ್‌ ನಿರಾಕರಣೆ

Last Updated 7 ಫೆಬ್ರುವರಿ 2023, 6:47 IST
ಅಕ್ಷರ ಗಾತ್ರ

ನವದೆಹಲಿ: ವಕೀಲೆ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಅವರು ಮದ್ರಾಸ್ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸುವುದನ್ನು ತಡೆಯುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಪುರಸ್ಕರಿಸಲು ಸುಪ್ರೀಂ ಕೋರ್ಟ್ ಮಂಗಳವಾರ ನಿರಾಕರಿಸಿದೆ.

‘ನಾವು ರಿಟ್ ಅರ್ಜಿಯನ್ನು ಪರಿಗಣಿಸುತ್ತಿಲ್ಲ' ಎಂದು ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಬಿ ಆರ್ ಗವಾಯಿ ಅವರನ್ನೊಳಗೊಂಡ ವಿಶೇಷ ಪೀಠ ಹೇಳಿದೆ.

ವಿಶೇಷ ಪೀಠವು ಬೆಳಗ್ಗೆ 10.25ರಲ್ಲಿ ಅರ್ಜಿಯ ವಿಚಾರಣೆ ನಡೆಸಿತಾದರೂ, ಪ್ರಮಾಣ ವಚನ ಸ್ವೀಕರಿಸುವುದಕ್ಕೆ ತಡೆ ನೀಡಲು ನಿರಾಕರಿಸಿತು.

ಅತ್ತ ರಿಟ್‌ ಅರ್ಜಿ ವಿಚಾರಣೆ ನಡೆಯುವ ಹೊತ್ತಲ್ಲೇ ಇತ್ತ ಗೌರಿ ಅವರು ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯಾಗಿ ಮಂಗಳವಾರ ಪ್ರಮಾಣ ವಚನ ಸ್ವೀಕರಿಸಿದರು.

ಗೌರಿ ನೇಮಕವನ್ನು ವಿರೋಧಿಸಿ ಮದ್ರಾಸ್ ಹೈಕೋರ್ಟ್‌ನ ಮೂವರು ವಕೀಲರು ರಿಟ್‌ ಅರ್ಜಿ ಸಲ್ಲಿಸಿದ್ದರು. ಮುಖ್ಯ ನ್ಯಾಯಮೂರ್ತಿ ಡಿ. ವೈ. ಚಂದ್ರಚೂಡ್ ನೇತೃತ್ವದ ಪೀಠವು ಫೆಬ್ರವರಿ 10ಕ್ಕೆ ವಿಚಾರಣೆ ನಿಗದಿ ಮಾಡಿತ್ತು. ಗೌರಿ ಅವರ ನೇಮಕಾತಿಯ ಬಗ್ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ ಎಂದು ಹಿರಿಯ ವಕೀಲ ರಾಜು ರಾಮಚಂದ್ರನ್‌ ಅವರು ಪೀಠಕ್ಕೆ ತಿಳಿಸಿದ ನಂತರ ಅರ್ಜಿಯ ವಿಚಾರಣೆಯನ್ನು ಫೆ.7ಕ್ಕೆ ಮರು ನಿಗದಿ ಮಾಡಲಾಯಿತು.

‘ಮುಸ್ಲಿಂ ಮತ್ತು ಕ್ರಿಶ್ಚಿಯನ್ನರ ವಿರುದ್ಧ ಗೌರಿ ಅವರು ದ್ವೇಷ ಭಾಷಣ ಮಾಡಿದ್ದಾರೆ’ ಎಂದು ಅರ್ಜಿದಾರ ವಕೀಲರಾದ ಅನ್ನಾ ಮ್ಯಾಥ್ಯೂ, ಸುಧಾ ರಾಮಲಿಂಗಂ ಮತ್ತು ಡಿ ನಾಗಶೈಲ ಅವರು ತಮ್ಮ ರಿಟ್‌ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.

ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ‘ಗಂಭೀರ ಬೆದರಿಕೆ’ ಇರುವ ಹಿನ್ನೆಲೆಯಲ್ಲಿ 4ನೇ ಪ್ರತಿವಾದಿ (ಗೌರಿ) ಅವರು ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸದಂತೆ ಸೂಕ್ತ ಮಧ್ಯಂತರ ಆದೇಶ ನೀಡುವಂತೆ ಅರ್ಜಿದಾರರು ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT