ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಟಾಕಿ ನಿಷೇಧ ಯಾವುದೇ ಸಮುದಾಯದ ವಿರುದ್ಧ ಅಲ್ಲ: ಸುಪ್ರೀಂ

Last Updated 28 ಅಕ್ಟೋಬರ್ 2021, 18:49 IST
ಅಕ್ಷರ ಗಾತ್ರ

ನವದೆಹಲಿ: ‘ಪಟಾಕಿಗಳನ್ನು ನಿಷೇಧಿಸುವ ಕ್ರಮವು ಯಾವುದೋ ಒಂದು ಸಮುದಾಯದ ವಿರುದ್ಧದ ಕ್ರಮವಲ್ಲ’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ. ಒಂದು ಸಮುದಾಯವನ್ನು ಗುರಿ ಮಾಡಿಕೊಂಡು ಪಟಾಕಿಯನ್ನು ನಿಷೇಧಿಸಲಾಗಿದೆ ಎಂಬ ವದಂತಿಯನ್ನು ಈ ಮೂಲಕ ಸುಪ್ರೀಂ ಕೋರ್ಟ್‌ ತಿಳಿಗೊಳಿಸಿದೆ.

ನ್ಯಾಯಮೂರ್ತಿಗಳಾದ ಎಂ.ಆರ್.ಶಾ ಮತ್ತು ಎ.ಎಸ್.ಬೋಪಣ್ಣ ಅವರಿದ್ದ ಪೀಠವು, ‘ಪಟಾಕಿ ನಿಷೇಧ ಆದೇಶವನ್ನು ಸಂಪೂರ್ಣವಾಗಿ ಜಾರಿಗೆ ತರಬೇಕು’ ಎಂದು ಹೇಳಿದೆ.

‘ಪಟಾಕಿ ತಯಾರಕರು ಮನೋರಂಜನೆಯ ನೆಪದಲ್ಲಿ ದೇಶದ ನಾಗರಿಕರ ಜೀವದ ಜತೆ ಆಟವಾಡುವಂತಿಲ್ಲ. ನಾವು ಯಾವುದೋ ಒಂದು ಸಮುದಾಯದ ವಿರುದ್ಧ ಇಲ್ಲ. ಬದಲಿಗೆ ಜನರ ಜೀವಿಸುವ ಮತ್ತು ಆರೋಗ್ಯದ ಹಕ್ಕಿನ ರಕ್ಷಣೆಗಾಗಿ ಇದ್ದೇವೆ ಎಂಬ ಸಂದೇಶವನ್ನು ರವಾನಿಸಬೇಕಿದೆ’ ಎಂದು ಪೀಠವು ಹೇಳಿದೆ.

‘ಎಲ್ಲಾ ಸ್ವರೂಪದ ಪಟಾಕಿಗಳನ್ನು ನಾವು ನಿಷೇಧಿಸಿಲ್ಲ. ಪ್ರತಿವರ್ಷ ಪಟಾಕಿಗಳ ಕಾರಣದಿಂದ ದೆಹಲಿಯ ಜನರು ಏನೆಲ್ಲಾ ಅನುಭವಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿದೆ. ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಂಡಿದ್ದೇವೆ’ ಎಂದು ಪೀಠವು ಹೇಳಿದೆ.

‘ಪಟಾಕಿಗೆ ನಿಷೇಧ ಹೇರಿದ್ದರೂ, ಇಂದಿಗೂ ಪಟಾಕಿಗಳು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿವೆ. ಆದರೆ ನಿಷೇಧ ಆದೇಶದ ಪ್ರಕಾರ ಕೇವಲ ಹಸಿರು ಪಟಾಕಿಗಳಷ್ಟೇ ಮಾರಾಟವಾಗಬೇಕು. ಅದೂ ಪರವಾನಗಿ ಪಡೆದ ಮಾರಾಟಗಾರರ ಮೂಲಕ ಮಾತ್ರ. ಆನ್‌ಲೈನ್ ಮೂಲಕವೂ ಪಟಾಕಿ ಮಾರಾಟವನ್ನು ನಿಷೇಧಿಸಲಾಗಿದೆ. ನಿಷೇಧವನ್ನು ಜಾರಿಗೆ ತರಬೇಕಾದ ಪ್ರಾಧಿಕಾರಗಳು ಆದೇಶವನ್ನು ಯಥಾವತ್ತಾಗಿ ಮತ್ತು ಪೂರ್ಣಪ್ರಮಾಣದಲ್ಲಿ ಜಾರಿಗೆ ತರಬೇಕು’ ಎಂದು ಪೀಠವು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT