ಮಂಗಳವಾರ, ಮಾರ್ಚ್ 28, 2023
26 °C

ಅವಳಿ ಸ್ಫೋಟದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭದ್ರತೆ ಹೆಚ್ಚಳ

ಜುಲ್ಫೀಕರ್‌ ಮಜೀದ್‌/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀನಗರ: ಗಣರಾಜ್ಯೋತ್ಸವ ಮತ್ತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ನೇತೃತ್ವದ 'ಭಾರತ್ ಜೋಡೊ ಯಾತ್ರೆ' ಕಾಶ್ಮೀರಕ್ಕೆ ಪ್ರವೇಶಿಸುತ್ತಿರುವುದು ಹಾಗೂ ಶನಿವಾರದ ಅವಳಿ ಸ್ಫೋಟದ ಬೆನ್ನಲ್ಲೇ ಕಣಿವೆ ರಾಜ್ಯದಾದ್ಯಂತ ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ.

ಜನವರಿ 26 ರ ಎಲ್ಲಾ ಸರ್ಕಾರಿ ಕಾರ್ಯಕ್ರಮಗಳು ಸುಗಮವಾಗಿ ನಡೆಯುವ ನಿಟ್ಟಿನಲ್ಲಿ ಬಹು ಹಂತದ ಭದ್ರತಾ ವ್ಯವಸ್ಥೆ ನಿಯೋಜಿಸಲಾಗಿದೆ. ರಾಹುಲ್‌ ಗಾಂಧಿ ನಡೆಸುತ್ತಿರುವ ಭಾರತ್‌ ಜೋಡೊ ಯಾತ್ರೆ ಜನವರಿ 30 ರಂದು ಶ್ರೀನಗರದಲ್ಲಿ ಮುಕ್ತಾಯಗೊಳ್ಳಲಿರುವುದರಿಂದ ಜನವರಿ 26 ರ ನಂತರವೂ ಈ ಭದ್ರತಾ ವ್ಯವಸ್ಥೆಗಳು ಮುಂದುವರೆಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ಮತ್ತು ಅರೆಸೇನಾಪಡೆಯ ಸಿಆರ್‌ಪಿಎಫ್ ಸೇರಿದಂತೆ ಹೆಚ್ಚುವರಿ ಪಡೆಗಳನ್ನು ಕೇಂದ್ರಾಡಳಿತ ಪ್ರದೇಶದಾದ್ಯಂತ ನಿಯೋಜಿಸಲಾಗಿದೆ. ಎರಡೂ ಪ್ರಮುಖ ಕಾರ್ಯಕ್ರಮಗಳು ಶಾಂತಿಯುತವಾಗಿ ನಡೆಯುವುದನ್ನು ಖಚಿತಪಡಿಸಿಕೊಳ್ಳಲು ವ್ಯವಸ್ಥೆ ಮಾಡಲಾಗಿದೆ. ಶ್ರೀನಗರ ಮತ್ತು ಕಾಶ್ಮೀರದ ಇತರ ಜಿಲ್ಲೆಗಳಲ್ಲಿ ಎಲ್ಲಾ ಸಿಸಿಟಿವಿಗಳನ್ನು ಕಾರ್ಯಗತಗೊಳಿಸಲಾಗಿದೆ ಮತ್ತು ಆಯಾ ಪೊಲೀಸ್ ನಿಯಂತ್ರಣ ಕೊಠಡಿಗಳಿಂದ ವಾಹನಗಳು, ಪಾದಚಾರಿಗಳ ಚಲನೆಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಶನಿವಾರ ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿನ ಅವಳಿ ಸ್ಫೋಟಕ್ಕೆ ಹಿಮನಗರಿ ಬೆಚ್ಚಿಬಿದ್ದಿತ್ತು. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದರು. ಅವಳಿ ಸ್ಫೋಟದ ನಂತರ ಶ್ರೀನಗರ ಮತ್ತು ಜಮ್ಮುವಿನಲ್ಲಿ ಹೆದ್ದಾರಿಗಳು ಮತ್ತು ಸೂಕ್ಷ್ಮ ಪ್ರದೇಶಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು