ಶುಕ್ರವಾರ, ಆಗಸ್ಟ್ 19, 2022
27 °C

ಭಾರತದಲ್ಲಿ ಕೋವಿಡ್ ಲಸಿಕೆಯ ಕ್ಲಿನಿಕಲ್ ಟ್ರಯಲ್ ಸ್ಥಗಿತಗೊಳಿಸಿದ ಸೆರಂ ಸಂಸ್ಥೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಬ್ರಿಟನ್‌ನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಮತ್ತು ಆಸ್ಟ್ರಾಜೆನಿಕಾ ಕಂಪನಿಯು ಅಭಿವೃದ್ಧಿಪಡಿಸಿರುವ ಕೋವಿಡ್–19 ಲಸಿಕೆಯ ಕ್ಲಿನಿಕಲ್ ಟ್ರಯಲ್ ಅನ್ನು ಭಾರತದ ಸೆರಂ ಇನ್‌ಸ್ಟಿಟ್ಯೂಟ್ ಗುರುವಾರ ಸ್ಥಗಿತಗೊಳಿಸಿದೆ.

ಬ್ರಿಟನ್‌ನಲ್ಲಿನ ಕ್ಲಿನಿಕಲ್ ಟ್ರಯಲ್‌ನಲ್ಲಿ ಲಸಿಕೆ ಪಡೆದ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರಾದ ಕಾರಣ ಆಸ್ಟ್ರಾಜೆನಿಕಾ ಕಂಪನಿಯು ಕ್ಲಿನಿಕಲ್ ಟ್ರಯಲ್‌ ಅನ್ನು ಬುಧವಾರ ಸ್ಥಗಿತಗೊಳಿಸಿತ್ತು. ಹೀಗಿದ್ದೂ ಸೆರಂ ಕಂಪನಿಯು ಆ ಲಸಿಕೆಯ ಕ್ಲಿನಿಕಲ್ ಟ್ರಯಲ್‌ ಅನ್ನು ಭಾರತದಲ್ಲಿ ಮುಂದುವರಿಸಿತ್ತು. ಇದನ್ನು ಪ್ರಶ್ನಿಸಿ, ಭಾರತೀಯ ಔಷಧ ಮಹಾನಿಯಂತ್ರಕರು (ಡಿಸಿಜಿಐ) ಸೆರಂ ಕಂಪನಿಗೆ ಬುಧವಾರ ಸಂಜೆ ನೋಟಿಸ್ ಜಾರಿಮಾಡಿದ್ದರು.

‘ಈ ಲಸಿಕೆಯನ್ನು ಎರಡು ಮತ್ತು ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಸ್‌ಗೆ ಒಳಪಡಿಸಲು ಅನುಮತಿ ನೀಡಲಾಗಿದೆ. ಇದರಿಂದ ಅಡ್ಡಪರಿಣಾಮಗಳಾಗಿರುವ ಬಗ್ಗೆ ವರದಿಗಳಿವೆ. ಇದು ಮಾನವನ ಬಳಕೆಗೆ ಸುರಕ್ಷಿತ ಎಂದು ಸಾಬೀತಾಗುವವರೆಗೂ, ಈಗ ನೀಡಿರುವ ಅನುಮತಿಯನ್ನು ಏಕೆ ರದ್ದುಪಡಿಸಬಾರದು’ ಎಂದು ಡಿಸಿಜಿಐ ತನ್ನ ನೋಟಿಸ್‌ನಲ್ಲಿ ಪ್ರಶ್ನಿಸಿತ್ತು. ಹೀಗಾಗಿ ಸೆರಂ ಕಂಪನಿಯು ಭಾರತದಲ್ಲಿ ನಡೆಸುತ್ತಿದ್ದ ಕ್ಲಿನಿಕಲ್ ಟ್ರಯಲ್ ಅನ್ನು ಸ್ಥಗಿತಗೊಳಿಸಿದೆ.

‘ಮಾನವನ ಮೇಲೆ ಲಸಿಕೆಯ ಪರೀಕ್ಷಾರ್ಥ ಪ್ರಯೋಗವನ್ನು ನಿಲ್ಲಿಸಿ ಎಂದು ನಮಗೇನೂ ಹೇಳಿಲ್ಲ. ಆಸ್ಟ್ರಾಜೆನಿಕಾ ಕಂಪನಿಯು ಮತ್ತೆ ಕ್ಲಿನಿಕಲ್ ಟ್ರಯಲ್ ಆರಂಭಿಸುವವರೆಗೂ, ನಾವೂ ಕ್ಲಿನಿಕಲ್ ಟ್ರಯಲ್ ನಡೆಸುವುದಿಲ್ಲ. ಲಸಿಕೆಯ ಅಡ್ಡಪರಿಣಾಮಗಳ ಬಗ್ಗೆ ಸಂದೇಹವಿರುವ ಕಾರಣ ನಾವು ಡಿಸಿಜಿಐನ ನಿರ್ದೇಶನಗಳನ್ನು ಪಾಲಿಸುತ್ತೇವೆ’ ಎಂದು ಸೆರಂ ಇನ್‌ಸ್ಟಿಟ್ಯೂಟ್ ಹೇಳಿದೆ.

ಆಸ್ಟ್ರಾಜೆನಿಕಾ ಅಭಿವೃದ್ಧಿಪಡಿಸಲಿರುವ ಕೋವಿಡ್ ಲಸಿಕೆಯನ್ನು ತಯಾರಿಸುವ ಸಂಬಂಧ ಭಾರತದ ಸೆರಂ ಕಂಪನಿಯು ಒಪ್ಪಂದ ಮಾಡಿಕೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು