ಪಶ್ಚಿಮ ಬಂಗಾಳ: ಸುವೇಂದು ಅಧಿಕಾರಿ ಭೇಟಿ ಅಲ್ಲಗಳೆದ ಸಾಲಿಸಿಟರ್ ಜನರಲ್

ನವದೆಹಲಿ: ಬಿಜೆಪಿ ಶಾಸಕ ಸುವೇಂದು ಅಧಿಕಾರಿಯನ್ನು ತಮ್ಮ ಅಧಿಕೃತ ನಿವಾಸದಲ್ಲಿ ಭೇಟಿ ಮಾಡಿರುವುದನ್ನು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅಲ್ಲಗಳೆದಿದ್ದಾರೆ.
ಸುವೇಂದು ಅಧಿಕಾರಿಯನ್ನು ಭೇಟಿ ಮಾಡಿರುವುದರಿಂದ ತುಷಾರ್ ಮೆಹ್ತಾ ಅವರ ವಜಾಕ್ಕೆ ಆಗ್ರಹಿಸಿ ಟಿಎಂಸಿ ಸಂಸದರು, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ನಂತರ ತುಷಾರ್ ಅವರು ಈ ಹೇಳಿಕೆ ನೀಡಿದ್ದಾರೆ.
‘ಸುವೇಂದು ಅಧಿಕಾರಿ ಗುರುವಾರ ಮಧ್ಯಾಹ್ನ 3.30ಕ್ಕೆ ಮಾಹಿತಿ ನೀಡದೇ ನನ್ನ ಗೃಹ ಕಚೇರಿಗೆ ಆಗಮಿಸಿದ್ದರು. ನಾನು ಆ ವೇಳೆ ಪೂರ್ವ ನಿರ್ಧರಿತ ಬೇರೆ ಸಭೆಯಲ್ಲಿದ್ದ ಕಾರಣ ನನ್ನ ಕಚೇರಿಯ ಸಿಬ್ಬಂದಿ ಅವರನ್ನು ನಿರೀಕ್ಷಣಾ ಕೊಠಡಿಯಲ್ಲಿ ಕಾಯುವುದಕ್ಕೆ ಹೇಳಿ, ಒಂದು ಕಪ್ ಚಹಾ ನೀಡಿದ್ದರು. ಸಭೆ ಮುಗಿದ ನಂತರ ನನ್ನ ಆಪ್ತ ಕಾರ್ಯದರ್ಶಿ ಸುವೇಂದು ಅವರು ಬಂದಿರುವ ಮಾಹಿತಿ ನೀಡಿದರು. ಆಗ ನಾನು ಅವರನ್ನು ಭೇಟಿಯಾಗಲು ಆಗದಿರುವುದನ್ನು ಅವರ ಗಮನಕ್ಕೆ ತಂದು, ಅವರನ್ನು ಕಾಯಿಸಿದ್ದಕ್ಕಾಗಿ ಕ್ಷಮೆಯಾಚಿಸಿರುವುದಾಗಿ ತಿಳಿಸಲು ನನ್ನ ಆಪ್ತಕಾರ್ಯದರ್ಶಿಯಲ್ಲಿ ವಿನಂತಿಸಿದೆ. ಸುವೇಂದು ಅವರು ನನ್ನ ಆಪ್ತ ಕಾರ್ಯದರ್ಶಿಗೆ ಧನ್ಯವಾದ ಅರ್ಪಿಸಿ, ನನ್ನನ್ನು ಭೇಟಿಯಾಗಲು ಒತ್ತಾಯಿಸದೆ ಹೊರಟುಹೋದರು ಎಂದು ತುಷಾರ್ ಮೆಹ್ತಾ ಸ್ಪಷ್ಟನೆ ನೀಡಿದ್ದಾರೆ.
ಪ್ರಧಾನಿಗೆ ಬರೆದ ಪತ್ರದಲ್ಲಿ ಟಿಎಂಸಿ ಸಂಸದರಾದ ಡೆರೆಕ್ ಓ‘ಬ್ರಿಯೆನ್, ಸುಖೇಂದು ಶೇಖರ್ ರಾಯ್ ಮತ್ತು ಮಾಹುವಾ ಮೈತ್ರಾ ಅವರು, ಬಿಜೆಪಿ ಶಾಸಕ ಸುವೇಂದು ನಾರದಾ ಮತ್ತು ಶಾರದಾ ಪ್ರಕರಣಗಳಲ್ಲಿ ಆರೋಪಿಯಾಗಿದ್ದು, ಈ ಪ್ರಕರಣಗಳ ತನಿಖೆ ನಡೆಯುತ್ತಿದೆ. ಈ ಹಂತದಲ್ಲಿ ಪ್ರಕರಣದ ತನಿಖೆಯ ಫಲಿತಾಂಶದ ಮೇಲೆ ಪ್ರಭಾವ ಬೀರುವುದಕ್ಕಾಗಿ ಸಾಲಿಸಿಟರ್ ಜನರಲ್ ಅವರನ್ನು ಭೇಟಿ ಮಾಡಿರುವುದು ಅನುಚಿತ ಕ್ರಮ ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ... ನಿರಾಶ್ರಿತರು, ಭಿಕ್ಷುಕರು ದುಡಿಯಬೇಕು; ಎಲ್ಲ ಪೂರೈಸಲು ಸಾಧ್ಯವಿಲ್ಲ: ಹೈಕೋರ್ಟ್
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.