ಶನಿವಾರ, ಅಕ್ಟೋಬರ್ 16, 2021
22 °C

ಹಡಗಿನಲ್ಲಿ ಡ್ರಗ್ಸ್ ಪಾರ್ಟಿ: ಶಾರುಕ್ ಖಾನ್ ಪುತ್ರನ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಮುಂಬೈ ಸಮೀಪದ ಕಡಲಿನಲ್ಲಿ ಐಷಾರಾಮಿ ಹಡಗಿನಲ್ಲಿ ನಡೆಯುತ್ತಿದ್ದ ಡ್ರಗ್ಸ್‌ ಪಾರ್ಟಿಯ ಮೇಲೆ ಮಾದಕ ಪದಾರ್ಥ ನಿಯಂತ್ರಣ ಬ್ಯೂರೊ (ಎನ್‌ಸಿಬಿ) ದಾಳಿ ನಡೆಸಿ, ಮಾದಕ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ. ಬಾಲಿವುಡ್ ನಟ ಶಾರುಕ್ ಖಾನ್ ಅವರ ಪುತ್ರ ಆರ್ಯನ್ ಖಾನ್ (23) ಮತ್ತು ಇನ್ನೂ ಮೂವರನ್ನು ಈ ಪ್ರಕರಣ ದಲ್ಲಿ ಬಂಧಿಸಲಾಗಿದೆ.

ಮುಂಬೈನಿಂದ ಗೋವಾಗೆ ಹೊರಟಿದ್ದ ಹಡಗಿನಲ್ಲಿ ಈ ಕಾರ್ಯಾಚರಣೆ ನಡೆದಿದೆ. ಕಾರ್ಯಾಚರಣೆ ನಂತರ ಹಡಗನ್ನು ಮುಂಬೈಗೆ ವಾಪಸ್ ಕರೆತರಲಾಗಿದೆ.

ಪ್ರಯಾಣಿಕರ ಸೋಗಿನಲ್ಲಿ ಶನಿವಾರ ಹಡಗು ಹತ್ತಿದ್ದ ಎನ್‌ಸಿಬಿ ಅಧಿಕಾರಿಗಳು, ಭಾನುವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ನಿಷೇಧಿತ ಮಾದಕ ವಸ್ತುಗಳನ್ನು ಖರೀದಿಸಿದ, ಹೊಂದಿದ್ದ ಮತ್ತು ಸೇವಿಸಿದ್ದ ಆರೋಪದಲ್ಲಿ ಆರ್ಯನ್ ಖಾನ್ ಅವರನ್ನು ಬಂಧಿಸಲಾಗಿದೆ. ಎಲ್ಲಾ ಬಂಧಿತರನ್ನು ಎನ್‌ಸಿಬಿ ಅಧಿಕಾರಿಗಳು ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಎದುರು ಹಾಜರುಪಡಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಲಯವು ಬಂಧಿತರನ್ನು ಸೋಮವಾರದವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಿದೆ.

ಬಂಧಿತರಿಂದ ಅಧಿಕಾರಿಗಳು 13 ಗ್ರಾಂ ಕೊಕೇನ್, 5 ಗ್ರಾಂ ಎಂಡಿ, 21 ಗ್ರಾಂ ಚರಸ್ ಮತ್ತು 22 ಎಂಡಿಎಂಎ ಮಾತ್ರೆಗಳನ್ನು ವಶಕ್ಕೆ ಪಡೆದಿದ್ದಾರೆ. ಇಷ್ಟೂ ಮಾದಕವಸ್ತುಗಳ ಮಾರುಕಟ್ಟೆ ಮೌಲ್ಯ ₹1.33 ಲಕ್ಷ. ಬಂಧಿತ ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಪ್ರಕರಣದಲ್ಲಿ ಅವು ಮಹತ್ವದ ಸಾಕ್ಷ್ಯಗಳು ಎಂದು ಎನ್‌ಸಿಬಿ ಮಾಹಿತಿ ನೀಡಿದೆ.

ಆರ್ಯನ್ ಖಾನ್ ಅವರ ಬಂಧನ ಖಚಿತವಾದ ನಂತರ ಶಾರುಕ್ ಖಾನ್ ಅವರು ತಮ್ಮ ಮನೆಯಿಂದ, ತಮ್ಮ ವಕೀಲ ಸತೀಶ್ ಮನೀಶಿಂಧೆ ಅವರ ಮನೆಗೆ ತೆರಳುತ್ತಿರುವ ವಿಡಿಯೊ ವೈರಲ್ ಆಗಿದೆ. ಆದರೆ ಶಾರುಕ್ ಅವರು, ತಮ್ಮ ಮಗನ ಬಂಧನದ ಬಗ್ಗೆ ಈವರೆಗೆ ಯಾವ ಪ್ರತಿಕ್ರಿಯೆಯನ್ನೂ ನೀಡಿಲ್ಲ.

ಅವರ ವಕೀಲ ಸತೀಶ್ ಅವರು, ‘ಆರ್ಯನ್ ಖಾನ್ ಅವರು ಹಡಗಿನ ಟಿಕೆಟ್ ಖರೀದಿಸಿರಲಿಲ್ಲ, ಅವರ ಬಳಿ ಬೋರ್ಡಿಂಗ್ ಪಾಸ್ ಸಹ ಇರಲಿಲ್ಲ. ಪಾರ್ಟಿಯಲ್ಲಿ ಭಾಗಿಯಾಗಲು ಬಂದಿದ್ದ ಆಹ್ವಾನದ ಮೇರೆಗೆ ಅವರು ಹಡಗಿಗೆ ಹೋಗಿದ್ದರು. ಕೇವಲ ಚಾಟ್‌ ಆಧಾರದಲ್ಲಿ ಅವರನ್ನು ಎನ್‌ಸಿಬಿ ಅಧಿಕಾರಿಗಳು ಬಂಧಿಸಿದ್ದಾರೆ’ ಎಂದು ಆರೋಪಿಸಿದ್ದಾರೆ. ಆರ್ಯನ್ ಅವರ ಪರವಾಗಿ ಸೋಮವಾರ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.

ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ನಡೆಯುತ್ತಿದ್ದ ಸಂಬಂಧ ಕಾರ್ಡೀಲಿಯಾ ಕ್ರೂಸಸ್ ಕಂಪನಿಗೆ ನೋಟಿಸ್ ನೀಡಲಾಗಿದೆ. ‘ನಮ್ಮ ಹಡಗಿನಲ್ಲಿ ನಡೆಯುತ್ತಿದ್ದ ಪಾರ್ಟಿಗೂ, ನಮಗೂ ಸಂಬಂಧವಿಲ್ಲ. ನಾವು ಹಡಗನ್ನು ದೆಹಲಿಯ ಇವೆಂಟ್ ಮ್ಯಾನೆಜ್‌
ಮೆಂಟ್ ಕಂಪನಿಯೊಂದಕ್ಕೆ ಬಾಡಿಗೆಗೆ ನೀಡಿದ್ದೆವು’ ಎಂದು ಕಂಪೆನಿಯು ಹೇಳಿದೆ. ಆ ಕಂಪನಿಯ ಅಧಿಕಾರಿಗಳಿಗೂ, ವಿಚಾರಣೆಗೆ ಹಾಜರಾಗುವಂತೆ ಎನ್‌ಸಿಬಿ ನೋಟಿಸ್ ಜಾರಿ ಮಾಡಿದೆ.

ಭಾರತದಲ್ಲಿ ಇದೇ ಮೊದಲ ದಾಳಿ

ಅತ್ಯಂತ ಗೋಪ್ಯ ಮೂಲಗಳಿಂದ ಪಡೆದ ಖಚಿತ ಸುಳಿವು, ಎರಡು ವಾರಗಳ ಸಿದ್ಧತೆ ಮತ್ತು ಸಮಾಲೋಚನೆಗಳ ಬಳಿಕ ಈ ಕಾರ್ಯಾಚರಣೆ ನಡೆದಿದೆ. ಕಡಲಿನಲ್ಲಿ ಹಡಗಿನಲ್ಲಿ ನಡೆಯುವ ಡ್ರಗ್ಸ್‌ ಪಾರ್ಟಿಯ ಮೇಲೆ ಇಂತಹ ದಾಳಿ ಭಾರತದಲ್ಲಿ ನಡೆದಿರುವುದು ಇದೇ ಮೊದಲು. 

ಈ ಪ್ರಕರಣವು ಅಂತರ ರಾಷ್ಟ್ರೀಯ ಡ್ರಗ್ಸ್‌ ನಂಟಿನ ಬಗ್ಗೆ ಇನ್ನಷ್ಟು ವಿವರಗಳು ಬಹಿರಂಗವಾಗಲು ಕಾರಣವಾಗಲಿದೆ ಎನ್ನಲಾಗುತ್ತಿದೆ. ಮಾದಕ ಪದಾರ್ಥ ನಿಯಂತ್ರಣ ಬ್ಯೂರೊ (ಎನ್‌ಸಿಬಿ) ಇತ್ತೀಚಿನ ವರ್ಷಗಳಲ್ಲಿ ನಡೆಸಿದ ಅತ್ಯಂತ ದೊಡ್ಡ ಕಾರ್ಯಾಚರಣೆಗಳಲ್ಲಿ ಇದೂ ಒಂದು.  

ಎನ್‌ಸಿಬಿಯ ಮಹಾ ನಿರ್ದೇಶಕ ಎಸ್‌.ಎನ್‌. ಪ್ರಧಾನ್‌ ಮತ್ತು ಪ್ರಾದೇಶಿಕ ನಿರ್ದೇಶಕ ಸಮೀರ್‌ ವಾಂಖೆಡೆ ಅವರು ನಿರಂತರ ಸಂಪರ್ಕದಲ್ಲಿದ್ದು ಯೋಜನೆ ರೂಪಿಸಿದ್ದರು. ಎಷ್ಟು ಪರಿಪೂರ್ಣವಾಗಿ ಯೋಜನೆ ರೂಪಿಸಲಾಗಿತ್ತು ಎಂಬುದನ್ನು ಪ್ರಧಾನ್‌ ಅವರೇ ವಿವರಿಸಿದ್ದಾರೆ. ‘ಅದು ಪ್ರಯಾಣಿಕ ಹಡಗು ಆಗಿತ್ತು. ಸಮುದ್ರದಲ್ಲಿ ನಡೆಸುವ ಕಾರ್ಯಾಚರಣೆಯಲ್ಲಿ ಸ್ವಲ್ಪವೂ ಲೋಪ ಆಗುವಂತಿರಲಿಲ್ಲ. ಕಾರ್ಯಾಚರಣೆಯು ಯೋಜನೆಯಂತೆ ಪರಿಪೂರ್ಣವಾಗಿ ನಡೆಯಿತು’ ಎಂದು ಪ್ರಧಾನ್‌ ಹೇಳಿದ್ದಾರೆ. 

ಎನ್‌ಸಿಬಿ ಅಧಿಕಾರಿಗಳು ಪ್ರಯಾಣಿಕರಂತೆ ಟಿಕೆಟ್‌ ಪಡೆದು ಹಡಗು ಏರಿದ್ದರು. ಇತರ ಪ್ರಯಾಣಿಕರ ಜತೆಗೆ ಬೆರೆತು ಅವರ ವಿಶ್ವಾಸ ಗಳಿಸಿಕೊಂಡರು. ನಂತರ ದಾಳಿ ನಡೆಸಿ, ಹಡಗನ್ನು ತೀರಕ್ಕೆ ತಂದರು. 

ಮುಂಬೈ ಬಂದರು ಟ್ರಸ್ಟ್‌ನ ಭದ್ರತೆಯ ಹೊಣೆ ಹೊತ್ತಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯು ಡ್ರಗ್ಸ್ ಪಾರ್ಟಿಯ ಬಗ್ಗೆ ಸುಳಿವು ನೀಡಿತ್ತು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು