ಮಂಗಳವಾರ, ಮಾರ್ಚ್ 21, 2023
20 °C

ನಾಚಿಕೆಗೇಡು ಪ್ರಧಾನಿ: ಕೋವಿಡ್‌ ನಿರ್ವಹಣೆಗೆ ಮೋದಿ ವಿರುದ್ಧ ಮಮತಾ ಆಕ್ರೋಶ

ಪಿಟಿಐ Updated:

ಅಕ್ಷರ ಗಾತ್ರ : | |

ಕೋಲ್ಕತ್ತ: ಕೋವಿಡ್ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಮತ್ತು ಲಸಿಕೆ ಬೇಡಿಕೆ ಪೂರೈಸುವಲ್ಲಿ ಕೇಂದ್ರ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟೀಕಿಸಿದ್ದಾರೆ.

‘ರಾಜ್ಯದ ಲಸಿಕೆ ಬೇಡಿಕೆ ಪೂರೈಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಹೀಗಾಗಿ ರಾಜ್ಯಕ್ಕೆ ಬೇಕಿರುವ ಲಸಿಕೆಯನ್ನು ನಾವೇ ಖರೀದಿಸಬೇಕಾಗಿ ಬಂದಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಹಾಕಿರುವ ಕಟೌಟ್‌ಗಳಿಂದ ತೊಡಗಿ, ಲಸಿಕೆ ಪ್ರಮಾಣಪತ್ರಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಚಿತ್ರ ಹಾಕಲಾಗಿದೆ. ಅವರೊಬ್ಬ ನಾಚಿಕೆಗೆಟ್ಟ ಪ್ರಧಾನಿ’ ಎಂದು ಮಮತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಓದಿ: 

ವಿಧಾನಸಭೆಯಲ್ಲಿ ಮಾತನಾಡಿದ ಅವರು, ಪಶ್ಚಿಮ ಬಂಗಾಳವು ಈವರೆಗೆ 2 ಕೋಟಿ ಡೋಸ್ ಲಸಿಕೆ ಪಡೆದಿದೆ. ರಾಜ್ಯದ ಜನಸಂಖ್ಯೆಗೆ ಹೋಲಿಸಿದರೆ ಇದು ತೀರಾ ಅಸಮರ್ಪಕ ಹಂಚಿಕೆಯಾಗಿದೆ. ಇಂಥ ಪರಿಸ್ಥಿತಿಯಲ್ಲಿ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುವುದು ಸರ್ಕಾರಕ್ಕೆ ಸವಾಲಾಗಿದೆ ಎಂದು ಅವರು ಹೇಳಿದ್ದಾರೆ.

‘ನಾವು ಈಗಾಗಲೇ 2.26 ಕೋಟಿ ಜನರಿಗೆ ಲಸಿಕೆ ನೀಡಿದ್ದೇವೆ. ಅಗತ್ಯವಿರುವಷ್ಟು ಡೋಸ್ ಲಸಿಕೆಯನ್ನು ಪೂರೈಸುವುದಾಗಿ ಕೇಂದ್ರ ಸರ್ಕಾರ ಭರವಸೆ ನೀಡಿದ್ದ ಹೊರತಾಗಿಯೂ 26 ಲಕ್ಷ ಡೋಸ್‌ ನಾವೇ ಖರೀದಿಸಬೇಕಾಗಿ ಬಂದಿದೆ’ ಎಂದು ಮಮತಾ ಹೇಳಿದ್ದಾರೆ.

ಲಸಿಕಾ ಅಭಿಯಾನದ ವೆಚ್ಚ ಭರಿಸಲು ‘ಪಿಎಂ ಕೇರ್ಸ್‌ ನಿಧಿ’ಯ ಹಣವನ್ನು ಏಕೆ ಬಳಸುತ್ತಿಲ್ಲ ಎಂಬುದನ್ನು ತಿಳಿಯಲು ಬಯಸುವುದಾಗಿಯೂ ಅವರು ಹೇಳಿದ್ದಾರೆ.

ಓದಿ: 

ಕೇಂದ್ರ ಸರ್ಕಾರವು ತನ್ನ ತಪ್ಪು ನೀತಿಗಳಿಂದಾಗಿ ಕೋವಿಡ್ ಬಿಕ್ಕಟ್ಟನ್ನು ಸರಿಯಾಗಿ ನಿಭಾಯಿಸಿಲ್ಲ ಎಂದು ಅವರು ದೂರಿದ್ದಾರೆ.

‘ಕೇಂದ್ರದ ತಪ್ಪು ನೀತಿಗಳಿಂದಾಗಿ ಸಾಂಕ್ರಾಮಿಕ ಹೆಚ್ಚಳವಾಯಿತು. ನಮ್ಮ ನಾಚಿಕೆಯಿಲ್ಲದ ಪ್ರಧಾನಿ ದೇಶವನ್ನು ವಿಫಲಗೊಳಿಸಿದ್ದಾರೆ. ಆದರೆ, ಕಟೌಟ್‌ಗಳಿಂದ ತೊಡಗಿ ಲಸಿಕೆ ಪ್ರಮಾಣಪತ್ರಗಳವರೆಗೆ ಅವರ ಚಿತ್ರಗಳು ರಾರಾಜಿಸುತ್ತಿವೆ. ನಾನು ಅನೇಕ ಪ್ರಧಾನ ಮಂತ್ರಿಗಳನ್ನು ನೋಡಿದ್ದೇನೆ. ಆದರೆ ಇಷ್ಟು ನಾಚಿಕೆಯಿಲ್ಲದವರನ್ನು ನೋಡಿಲ್ಲ’ ಎಂದು ಕಿಡಿಕಾರಿದ್ದಾರೆ.

ಸಂಭಾವ್ಯ ಮೂರನೇ ಅಲೆ ತಡೆಯುವ ನಿಟ್ಟಿನಲ್ಲಿ ಪಶ್ಚಿಮ ಬಂಗಾಳ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದೂ ಅವರು ಹೇಳಿದ್ದಾರೆ.

ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ ಸರ್ಕಾರದ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು, ‘ಮೃತದೇಹಗಳು ನದಿಯಲ್ಲಿ ತೇಲಿಹೋಗುತ್ತಿರುವುದನ್ನು ನಾವು ನೋಡಿದ್ದೇವೆ. ಕೆಲವು ಶವಗಳು ತೇಲಿಕೊಂಡು ಬಂದು ನಮ್ಮ ರಾಜ್ಯವನ್ನೂ ತಲುಪಿವೆ. ಉತ್ತರ ಪ್ರದೇಶದಲ್ಲಿ ಸಾಂಕ್ರಾಮಿಕದಿಂದ ಎಷ್ಟು ಮಂದಿ ಮೃತಪಟ್ಟಿದ್ದಾರೆ ಎಂಬುದು ಅವರಿಗೆ ತಿಳಿದಿದೆಯೇ? ಅವರಿಗೆ ನಾಚಿಕೆಯಾಗುವುದಿಲ್ಲವೇ’ ಎಂದು ಪ್ರಶ್ನಿಸಿದ್ದಾರೆ.

ಓದಿ: 

ನಮ್ಮತ್ತ ಬೆರಳು ತೋರಿಸುವವರು ಕನ್ನಡಿಯಲ್ಲಿ ತಮ್ಮನ್ನು ತಾವು ನೋಡಿಕೊಳ್ಳಲಿ ಎಂದು ಆದಿತ್ಯನಾಥ್ ವಿರುದ್ಧ ಹರಿಹಾಯ್ದಿದ್ದಾರೆ. ಪಶ್ಚಿಮ ಬಂಗಾಳ ಚುನಾವಣಾ ಪ್ರಚಾರ ಸಂದರ್ಭ ಯೋಗಿ ಅವರು ಮಮತಾ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು