ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿವಸೇನೆಯನ್ನು ಗುಲಾಮನಂತೆ ಕಂಡಿದ್ದ ಬಿಜೆಪಿ: ಸಂಜಯ್‌ ರಾವುತ್‌

Last Updated 13 ಜೂನ್ 2021, 8:39 IST
ಅಕ್ಷರ ಗಾತ್ರ

ಮುಂಬೈ: ‘ಈ ಹಿಂದೆ 2014 ರಿಂದ 2019ರವರೆಗೆ ಬಿಜೆಪಿ ಸಂಗಡ ಅಧಿಕಾರ ಹಂಚಿಕೊಂಡಿದ್ದಾಗ ಶಿವಸೇನೆಯನ್ನು ಗುಲಾಮರ ರೀತಿ ಕಾಣಲಾಗಿತ್ತು. ಪಕ್ಷವನ್ನು ರಾಜಕೀಯವಾಗಿ ಮುಗಿಸಲೂ ಪ್ರಯತ್ನಿಸಲಾಗಿತ್ತು’ ಎಂದು ಸಂಸತ್‌ ಸದಸ್ಯ ಸಂಜಯ್ ರಾವುತ್‌ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

‘ಈ ಹಿಂದಿನ ಮೈತ್ರಿ ಸರ್ಕಾರದಲ್ಲಿ ಶಿವಸೇನೆಗೆ ಎರಡನೇ ದರ್ಜೆಯ ಸ್ಥಾನಮಾನ ನೀಡಲಾಗಿತ್ತು. ಗುಲಾಮರ ರೀತಿ ನಡೆಸಿಕೊಳ್ಳಲಾಗಿತ್ತು. ನಮ್ಮ ಬೆಂಬಲದೊಡನೆ ಪಡೆದ ಅಧಿಕಾರ ಬಳಸಿ ನಮ್ಮದೇ ಪಕ್ಷವನ್ನು ಮುಗಿಸಲು ಪ್ರಯತ್ನ ನಡೆದಿತ್ತು’ ಎಂದು ಸೇನಾ ಮುಖಂಡ ರಾವುತ್‌ ಆರೋಪಿಸಿದ್ದಾರೆ. ಉತ್ತರ ಮಹಾರಾಷ್ಟ್ರದ ಜಲಗಾಂವ್‌ನಲ್ಲಿ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಅವರು ಈ ಮಾತುಗಳನ್ನಾಡಿದ್ದಾರೆ.

ಶಿವಸೇನಾ ಅಧ್ಯಕ್ಷರೂ ಆಗಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರತ್ಯೇಕವಾಗಿ ಭೇಟಿ ಮಾಡಿದ ಕೆಲವೇ ದಿನಗಳಲ್ಲಿ ರಾವುತ್‌ ಈ ಕಟಕಿಯಾಡಿದ್ದಾರೆ. ಮೋದಿ– ಠಾಕ್ರೆ ಭೇಟಿ ರಾಜಕೀಯ ಊಹಾಪೋಹಗಳಿಗೆ ಕಾರಣವಾಗಿದೆ.

2019ರ ವಿಧಾನಸಭಾ ಚುನಾವಣೆಯ ನಂತರ ಮುಖ್ಯಮಂತ್ರಿ ಸ್ಥಾನ ನೀಡುವ ವಿಷಯಕ್ಕೆ ಸಂಬಂಧಿಸಿದಂತೆ ಈ ಎರಡು ಪಕ್ಷಗಳ ನಡುವೆ ಬಿರುಕು ಮೂಡಿತ್ತು. ಬಿಜೆಪಿಯ ಅತಿ ಹಳೆಯ ಮಿತ್ರ ಪಕ್ಷವಾಗಿದ್ದ ಶಿವಸೇನಾ ಅನಿರೀಕ್ಷಿತವಾಗಿ ಎನ್‌ಸಿಪಿ ಮತ್ತು ಕಾಂಗ್ರೆಸ್‌ ಜೊತೆ ಸೇರಿಕೊಂಡು ಮಹಾ ವಿಕಾಸ ಅಘಾಡಿ ಹೆಸರಿನಲ್ಲಿ ಮೈತ್ರಿಕೂಟ ರೂಪಿಸಿ ಮಹಾರಾಷ್ಟ್ರದಲ್ಲಿ ಅಧಿಕಾರ ಹಿಡಿದಿತ್ತು.

ಮೂರು ದಿನ ಮಟ್ಟಿಗೆ ದೇವೇಂದ್ರ ಫಡಣವೀಸ್‌ ಜೊತೆ ಸೇರಿಕೊಂಡು ಬಿಜೆಪಿಯೊಡನೆ ಅಧಿಕಾರ ಹಂಚಿಕೊಳ್ಳಲು ಮುಂದಾಗಿದ್ದ ಎನ್‌ಸಿಪಿ ಮುಖಂಡ ಅಜಿತ್‌ ಪವಾರ್‌ ಈಗ ಅಘಾಡಿಯ ಅತಿ ಪ್ರಬಲ ವಕ್ತಾರರಾಗಿದ್ದಾರೆ ಎಂದು ರಾವುತ್‌ ಹೇಳಿದ್ದಾರೆ. ಉಪಮುಖ್ಯಮಂತ್ರಿಯಾಗಿ ಅಜಿತ್‌ ಪವಾರ್‌ ಈಗ ಉದ್ಧವ್‌ ಠಾಕ್ರೆ ಅವರಿಗೆ ಹೆಗಲು ನೀಡುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT