ಶುಕ್ರವಾರ, ಮೇ 20, 2022
19 °C

ನಾನು ನಡೆಯುವುದು ಕಲಿಸಿದೆ, ಆತ ತುಳಿದ: ಮುಲಾಯಂ ತಮ್ಮ ಶಿವಪಾಲ್‌ ಬಹಿರಂಗ ಆಕ್ರೋಶ

ಪ್ರಜಾವಾಣಿ ವೆಬ್‌ಡೆಸ್ಕ್‌ Updated:

ಅಕ್ಷರ ಗಾತ್ರ : | |

ಲಖನೌ: ಮುಲಾಯಂ ಸಿಂಗ್‌ ಯಾದವ್‌ ಅವರ ತಮ್ಮ ಶಿವಪಾಲ್ ಸಿಂಗ್ ಯಾದವ್ ಅವರು ಅಣ್ಣನ ಮಗ, ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರ ಮೇಲೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರೊಂದಿಗೆ ಸಮಾಜವಾದಿ ಪಕ್ಷದ ಯಾದವೀ ಕಲಹ ಬಹಿರಂಗಗೊಂಡಿದೆ.

ಟ್ವಿಟರ್‌ ನಲ್ಲಿ ತಮ್ಮ ಮನದಾಳ ಹಂಚಿಕೊಂಡಿರುವ ಶಿವಪಾಲ್‌, ಅಖಿಲೇಶ್ ಅವರ ಹೆಸರು ಹೇಳದೇ ಟೀಕಿಸಿದ್ದಾರೆ. ‘ನಾನು ಆತನನ್ನು ತೃಪ್ತಿಪಡಿಸಲು ಆತ್ಮಗೌರವ ಬದಿಗಿಟ್ಟು ಅತ್ಯಂತ ಕೆಳಮಟ್ಟಕ್ಕೆ ಇಳಿದೆ. ನಾನು ಇನ್ನೂ ಆತನ ಮೇಲೆ ಕೋಪಗೊಂಡಿದ್ದೇನೆ ಅಂದಮೇಲೆ, ನನ್ನನ್ನು ಆತ ಎಷ್ಟು ನೋಯಿಸಿದ್ದಾನೆ ಎಂಬುದನ್ನು ನೀವು ಅರ್ಥಮಾಡಿಕೊಳ್ಳಬಹುದು. ನಾನು ಆತನಿಗೆ ನಡೆಯಲು ಕಲಿಸಿದ್ದೆ, ಆದರೆ ಆತ ನನ್ನನ್ನು ತುಳಿಯುತ್ತಿದ್ದಾನೆ. ಮರುಸಂಘಟನೆಯ ವಿಶ್ವಾಸದೊಂದಿಗೆ, ಎಲ್ಲರ ಸಹಕಾರಕ್ಕಾಗಿ ಆಶಿಸುತ್ತಾ ಈದ್ ಮುಬಾರಕ್’ ಎಂದು ಶಿವಪಾಲ್‌ ಯಾದವ್‌ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

ಶಿವಪಾಲ್‌ ಯಾದವ್‌ ಅವರು ಟೀಕೆಗೆ ಟ್ವೀಟರ್‌ ಅನ್ನು ಬಳಸಿಕೊಂಡಿದ್ದು ಇದೇ ಮೊದಲು. ಹೀಗಾಗಿ ಈ ಟ್ವೀಟ್‌ ಸಮಾಜವಾದಿ ಪಕ್ಷದಲ್ಲಿ ಆಘಾತ ಉಂಟು ಮಾಡಿದೆ.

‘ಪಕ್ಷ ಈಗ ವಿಭಜನೆಯತ್ತ ಸಾಗುತ್ತಿದೆ. ನಮ್ಮ ಮುಸ್ಲಿಂ ಮುಖಂಡರು ಈಗಾಗಲೇ ಅಖಿಲೇಶ್ ಅವರ ನಾಯಕತ್ವದ ಬಗ್ಗೆ ಅಸಮಾಧಾನ ಹೊಂದಿದ್ದಾರೆ. ಈಗ ಶಿವಪಾಲ್ ತಮ್ಮ ಮನದಾಳವನ್ನು ಸ್ಪಷ್ಟಪಡಿಸಿದ್ದಾರೆ. ಪಕ್ಷಕ್ಕೆ ಕೆಟ್ಟ ದಿನಗಳು ಕಾದಿವೆ‘ ಎಂದು ಎಸ್‌ಪಿಯ ಹಿರಿಯ ಶಾಸಕರೊಬ್ಬರು ಹೇಳಿದರು.

ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆಗಾಗಿ ಒಂದಾಗಿದ್ದ ಶಿವಪಾಲ್‌ ಯಾದವ್‌ ತಮ್ಮ ಮತ್ತು ಅಖಿಲೇಶ್‌ ಯಾದವ್‌ ನಡುವೆ ಸದ್ಯ ಮನಸ್ತಾಪ ಮನೆ ಮಾಡಿದೆ. ಈ ಮಧ್ಯೆ ಶಿವಪಾಲ್‌ ಯಾದವ್‌ ಅವರು ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ. ಶಿವಪಾಲ್‌ ಯಾದವ್‌ ತಮ್ಮನ್ನು ಉಚ್ಚಾಟಿಸಿ ನೋಡುವಂತೆ ಅಖಿಲೇಶ್‌ಗೆ ಇತ್ತೀಚೆಗೆ ಸವಾಲೆಸೆದಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು