ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ತಂತ್ರಜ್ಞಾನ ಕಾಯ್ದೆ 66ಎ ಅಡಿ ಸಾವಿರಕ್ಕೂ ಹೆಚ್ಚು ಪ್ರಕರಣ: ‘ಸುಪ್ರೀಂ’

ರದ್ದಾದ ಸೆಕ್ಷನ್‌ ದುರ್ಬಳಕೆ
Last Updated 5 ಜುಲೈ 2021, 20:49 IST
ಅಕ್ಷರ ಗಾತ್ರ

ನವದೆಹಲಿ: ಮಾಹಿತಿ ತಂತ್ರಜ್ಞಾನ ಕಾಯ್ದೆಯ 66 ಎ ಸೆಕ್ಷನ್‌ ಅನ್ನು 2015ರಲ್ಲಿಯೇ ರದ್ದುಪಡಿಸಲಾಗಿದೆ. ಹಾಗಿದ್ದರೂ ಈ ಸೆಕ್ಷನ್‌ ಅಡಿಯಯಲ್ಲಿ ಪ್ರಕರಣ ದಾಖಲಾಗುತ್ತಿರುವುದಕ್ಕೆ ಸುಪ್ರೀಂ ಕೋರ್ಟ್‌ ಸೋಮವಾರ ಆಘಾತ ವ್ಯಕ್ತಪಡಿಸಿದೆ. ಆನ್‌ಲೈನ್‌ನಲ್ಲಿ ಆಕ್ಷೇಪಾರ್ಹ ವಿಚಾರಗಳನ್ನು ಪ್ರಕಟಿಸುವವರ ವಿರುದ್ಧ ಈ ಸೆಕ್ಷನ್‌ ಅಡಿಯಲ್ಲಿ ದೂರು ದಾಖಲಿಸಲಾಗುತ್ತಿದೆ.

ಕಾಯ್ದೆಯ ರದ್ದುಪಡಿಸಲಾದ ಸೆಕ್ಷನ್‌ನ ದುರ್ಬಳಕೆ ಆಗುತ್ತಿದೆ ಎಂದು ದೂರಿ ಪಿಯುಸಿಎಲ್‌ ಎಂಬ ಎನ್‌ಜಿಒ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನೋಟಿಸ್‌ ನೀಡಿದ್ದು, ಸೆಕ್ಷನ್‌ನ ದುರ್ಬಳಕೆ ಸಂಬಂಧ ಎರಡು ವಾರಗಳಲ್ಲಿ ಪ್ರತಿಕ್ರಿಯೆ ಸಲ್ಲಿಸಲು ಸೂಚಿಸಿದೆ.ತೀರ್ಪನ್ನು ಉಲ್ಲಂಘಿಸಿದ ಅಧಿಕಾರಿಗಳನ್ನು ಜೈಲಿಗೆ ಕಳುಹಿಸುವ ಎಚ್ಚರಿಕೆಯನ್ನೂ ನೀಡಿದೆ.

66 ಎ ಸೆಕ್ಷನ್‌ ಸಂವಿಧಾನಬಾಹಿರ ಎಂದು ಸುಪ್ರೀಂ ಕೋರ್ಟ್‌ ತೀರ್ಪು ಕೊಟ್ಟ ಬಳಿಕ ಈ ಸೆಕ್ಷನ್‌ ಅಡಿಯಲ್ಲಿ 1,307 ಪ್ರಕರಣಗಳು ದಾಖಲಾಗಿವೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ. ಅವುಗಳ ಪೈಕಿ 745 ಪ್ರಕರಣಗಳು ವಿವಿಧ ಜಿಲ್ಲಾ ನ್ಯಾಯಾಲಯಗಳಲ್ಲಿ
ಇತ್ಯರ್ಥಕ್ಕೆ ಬಾಕಿ ಇವೆ ಎಂದು ಅರ್ಜಿದಾರರ ಪರ ವಕೀಲ ಸಂಜಯ್‌ ಪಾರಿಖ್‌ ಹೇಳಿದ್ದಾರೆ.

‘ಜನರಿಗೆ ತೊಂದರೆ ಅಗುತ್ತಿದೆ. ಸುಪ್ರೀಂ ಕೋರ್ಟ್‌ನ ನಿರ್ದೇಶನವು ಜಾರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವ ವ್ಯವಸ್ಥೆ ಬೇಕು’ ಎಂದು ಸಂಜಯ್‌ ಅವರು ಹೇಳಿದರು.

ಕಾಯ್ದೆಯಲ್ಲಿಯೇ ಸೆಕ್ಷನ್‌ 66 ಎಯ ನಂತರ ‘ಈ ಕಾಯ್ದೆಯನ್ನು ರದ್ದುಪಡಿಸಲಾಗಿದೆ, ಇದು ಅಸಾಂವಿಧಾನಿಕ’ ಎಂದು ಬರೆಯುವ ಪ್ರವೃತ್ತಿ ರೂಢಿಸಿಕೊಳ್ಳಬೇಕು. ಅಡಿಟಿಪ್ಪಣಿಯಲ್ಲಿ ಈ ವಿವರ ಕೊಟ್ಟರೆ ಅದನ್ನು ಪೊಲೀಸ್‌ ಅಧಿಕಾರಿಗಳು ಗಮನಿಸದೇ ಇರುವ ಸಾಧ್ಯತೆ ಇದೆ ಎಂದು ಅಟಾರ್ನಿ ಜನರಲ್‌ ಕೆ.ಕೆ. ವೇಣುಗೋಪಾಲ್‌ ಹೇಳಿದರು.

ನ್ಯಾಯಮೂರ್ತಿ ಆರ್‌.ಎಫ್‌. ನರಿಮನ್‌ ಅವರು ಸಂವಿಧಾನದ 144ನೇ ವಿಧಿಯನ್ನು ಉಲ್ಲೇಖಿಸಿ, ಸುಪ್ರೀಂ ಕೋರ್ಟ್‌ ನಿರ್ದೇಶನಗಳಿಗೆ ಎಲ್ಲ ಪ್ರಾಧಿಕಾರಗಳೂ ಪೂರಕವಾಗಿ ವರ್ತಿಸಬೇಕು ಎಂಬುದನ್ನು ನೆನಪಿಸಿದರು. ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್‌ ಮತ್ತು ಬಿ.ಆರ್‌. ಗವಾಯಿ ಅವರ ಪೀಠವು ಪ್ರಕರಣದ ವಿಚಾರಣೆಯನ್ನು ಎರಡು ವಾರ ಬಳಿಕ ಕೈಗೆತ್ತಿಕೊಳ್ಳಲಿದೆ.

‘ಈಗ ಏನು ಆಗುತ್ತಿದೆ ಎಂಬುದು ನಿಮಗೆ ಆಘಾತಕಾರಿ ಅನಿಸುತ್ತಿಲ್ಲವೇ? 2015ರಲ್ಲಿಯೇ ಇದನ್ನು ರದ್ದುಪಡಿಸಿದ ತೀರ್ಪು ಬಂದಿದೆ. ಸೆಕ್ಷನ್‌ ಈಗಲೂ ಬಳಕೆ ಆಗುತ್ತಿರುವುದು ಆಘಾತಕಾರಿ. ಇದು ಭಯಾನಕ’ ಎಂದು ಪೀಠವು ಹೇಳಿದೆ.

2015ರ ತೀರ್ಪಿನ ಬಗ್ಗೆ ಪೊಲೀಸ್‌ ಸಿಬ್ಬಂದಿಗೆ ರಾಜ್ಯ ಸರ್ಕಾರಗಳು ಜಾಗೃತಿ ಮೂಡಿಸಬೇಕು ಎಂದು 2019ರಲ್ಲಿ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡದ್ದರೂ, ಸೆಕ್ಷನ್‌ನ ದುರ್ಬಳಕೆ ಆಗುತ್ತಿದೆ ಎಂದು ಸಂಜಯ್‌ ವಿವರಿಸಿದರು.

ಎಷ್ಟು ಪ್ರಕರಣಗಳು ದಾಖಲಾಗಿವೆ ಎಂಬುದು ಗಮನದಲ್ಲಿ ಇದೆ. ಈ ಬಗ್ಗೆ ಏನನ್ನಾದರೂ ಮಾಡಲೇಬೇಕು ಎಂದು ಪೀಠವು ಹೇಳಿತು.

3 ವರ್ಷ ಶಿಕ್ಷೆ ಇತ್ತು
ಮಾಹಿತಿ ತಂತ್ರಜ್ಞಾನ ಕಾಯ್ದೆಯ 66 ಎ ಸೆಕ್ಷನ್‌ ಸಂವಿಧಾನದ 19(1) (ಎ) ವಿಧಿ (ವಾಕ್‌ ಸ್ವಾತಂತ್ರ್ಯ) ಮತ್ತು ವಿಧಿ 19 (2)ರ (ನ್ಯಾಯಯುತ ನಿರ್ಬಂಧಗಳು) ಉಲ್ಲಂಘನೆಯಾಗಿದೆ ಎಂದು 2015ರ ಮಾರ್ಚ್‌ 24ರಂದು ಸುಪ್ರೀಂ ಕೋರ್ಟ್‌ ಆದೇಶ ನೀಡಿ, ಸೆಕ್ಷನ್‌ ಅನ್ನು ವಜಾ ಮಾಡಿತ್ತು. ಆನ್‌ಲೈನ್‌ನಲ್ಲಿ ಆಕ್ಷೇಪಾರ್ಹ ಪೋಸ್ಟ್‌ ಹಾಕಿದವರಿಗೆ ಈ ಸೆಕ್ಷನ್‌ ಅಡಿಯಲ್ಲಿ ಮೂರು ವರ್ಷ ಶಿಕ್ಷೆ ವಿಧಿಸಲು ಅವಕಾಶ ಇತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT