ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಾನ್ ಚಾಲೀಸಾ ಪಠಿಸುವುದು ಯಾವಾಗ ದೇಶದ್ರೋಹವಾಗಿ ಬದಲಾಯಿತು: ಬಿಜೆಪಿ

Last Updated 24 ಏಪ್ರಿಲ್ 2022, 16:01 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ನಿವಾಸ ‘ಮಾತೋಶ್ರೀ’ ಹೊರಗೆ ಹನುಮಾನ್ ಚಾಲೀಸಾ ಪಠಿಸುವುದಾಗಿ ಘೋಷಿಸಿದ್ದ ಪಕ್ಷೇತರ ಶಾಸಕ ರವಿ ರಾಣಾ ಮತ್ತು ಅವರ ಪತ್ನಿ, ಸಂಸದೆ ನವನೀತ್ ರಾಣಾ ಅವರ ಬೆಂಬಲಕ್ಕೆ ಬಿಜೆಪಿ ನಿಂತಿದೆ. ಮಹಾ ವಿಕಾಸ್ ಆಘಾಡಿ ಸರ್ಕಾರವು ಹಿಂದೂ ನಂಬಿಕೆಗಳನ್ನು ಧ್ವೇಷಿಸುತ್ತಿದೆ ಮತ್ತು ಹನುಮಾನ್ ಚಾಲೀಸಾ ಪಠಿಸುವುದು ಯಾವಾಗಿನಿಂದ ದೇಶದ್ರೋಹವಾಯಿತು ಎಂದು ಪ್ರಶ್ನಿಸಿದೆ.

ವಿವಿಧ ಸಮುದಾಯಗಳು ಹಾಗೂ ಗುಂಪುಗಳ ನಡುವೆ ದ್ವೇಷವನ್ನು ಸೃಷ್ಟಿಸಿದ್ದಾರೆ ಎಂದು ಆರೋಪಿಸಿ ರಾಣಾ ದಂಪತಿಯನ್ನು ಬಂಧಿಸಿದ್ದ ಮುಂಬೈ ಪೊಲೀಸರು, ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿದ್ದಾರೆ. ಬಾಂದ್ರಾ ಮ್ಯಾಜಿಸ್ಟ್ರೇಟ್ ಕೋರ್ಟ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ವಕ್ತಾರ ಗೌರವ್ ಭಾಟಿಯಾ, ಹನುಮಾನ್ ಚಾಲೀಸಾವನ್ನು ಪಠಿಸಿದರು ಮತ್ತು ರಾಣಾ ದಂಪತಿಯನ್ನು ಸಮರ್ಥಿಸಿಕೊಂಡರು.

'ಮೂರು ಪಕ್ಷಗಳ ಮಹಾ ವಿಕಾಸ್ ಆಘಾಡಿ ಸರ್ಕಾರವನ್ನು 'ಮಹಾ ವಸೂಲಿ' (ಸುಲಿಗೆಕೋರ) ಎಂದು ಬಣ್ಣಿಸಿದ ಅವರು, ಮಹಾರಾಷ್ಟ್ರದಲ್ಲಿ ಯಾರಾದರೂ ಹನುಮಾನ್ ಚಾಲೀಸಾವನ್ನು ಪಠಿಸಿದರೆ ಅಂಥವರ ವಿರುದ್ಧ ಸರ್ಕಾರ ದೇಶದ್ರೋಹದ ಪ್ರಕರಣ ದಾಖಲಿಸಲಿದೆ' ಎಂದು ದೂರಿದರು.

'ಭಾರತದಲ್ಲಿ ನಾವು ಹೆಮ್ಮೆಯಿಂದ ಹನುಮಾನ್ ಚಾಲೀಸಾವನ್ನು ಪಠಿಸಬಹುದು. ಇದನ್ನು ಪಠಿಸುವುದು ಯಾವಾಗ ದೇಶದ್ರೋಹವಾಯಿತು? ಹಿಂದೂ ನಂಬಿಕೆಗಳ ವಿರುದ್ಧ ರಾಜ್ಯ ಸರ್ಕಾರವು ಹಗೆತನ ಸಾಧಿಸುತ್ತಿದೆ' ಎಂದು ಆರೋಪಿಸಿದ್ದಾರೆ.

ಮಹಾರಾಷ್ಟ್ರ ಸರ್ಕಾರದೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಅನ್ನು ಟೀಕಿಸಿದ ಭಾಟಿಯಾ, 2019ರ ಸಾರ್ವತ್ರಿಕ ಚುನಾವಣೆಯ ಪ್ರಣಾಳಿಕೆಯಲ್ಲಿ ಪಕ್ಷವು ಅಧಿಕಾರಕ್ಕೆ ಬಂದರೆ ದೇಶದ್ರೋಹದ ಕಾನೂನನ್ನು ತೆಗೆದುಹಾಕುವುದಾಗಿ ಹೇಳಿತ್ತು. ಈಗ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್ ಅದೇ ಕಾನೂನನ್ನು ಬಳಕೆ ಮಾಡಿದೆ' ಎಂದು ಹೇಳಿದರು.

ರಾಣಾ ದಂಪತಿಯ ಈ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದ ಶಿವಸೇನಾ ಕಾರ್ಯಕರ್ತರು ಬೆಳಗ್ಗೆಯಿಂದಲೇ ‘ಮಾತೋಶ್ರೀ’ ಬಳಿ ಜಮಾಯಿಸಿದ್ದರು. ಮತ್ತೊಂದು ಗುಂಪು ರಾಣಾ ದಂಪತಿ ನಿವಾಸದ ಮುಂದೆ ಪ್ರತಿಭಟನೆ ನಡೆಸಿತ್ತು. ಹನುಮಾನ್ ಚಾಲೀಸಾವನ್ನು ಪಠಿಸುವ ನಿರ್ಧಾರವನ್ನು ರಾಣಾ ದಂಪತಿ ಕೈಬಿಟ್ಟ ನಂತರ ಖಾರ್‌ ಉಪನಗರದಲ್ಲಿರುವ ಅವರ ನಿವಾಸದಿಂದ ಬಿಗಿ ಭದ್ರತೆಯಲ್ಲಿ ಕರೆದುಕೊಂಡು ಹೋಗಿದ್ದ ಪೊಲೀಸರು, ಸಂಜೆ ಬಂಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT