ಗುರುವಾರ , ಆಗಸ್ಟ್ 11, 2022
27 °C
ಶಿಬಿರದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿಂಘು ಗಡಿ ಸಮೀಪದ ಹಳ್ಳಿಗರು

ಪ್ರತಿಭಟನೆಯ ಅಂಗಳದಲ್ಲಿ ಉಚಿತ ವೈದ್ಯಕೀಯ ಸೇವೆ !

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ದೆಹಲಿಯ ಸಿಂಘು ಗಡಿಭಾಗದಲ್ಲಿ ಒಂದು ಕಡೆ ಸಾವಿರಾರು ರೈತರು ಪ್ರತಿಭಟನೆ ನಡೆಸುತ್ತಿದ್ದರೆ, ಇನ್ನೊಂದೆಡೆ ಟಂಟ್‌ಗಳಲ್ಲಿ ಕುಳಿತ ವೈದ್ಯಕೀಯ ಸಿಬ್ಬಂದಿ, ಅನಾರೋಗ್ಯದಿಂದ ಬಳಲುತ್ತಿದ್ದ ಪ್ರತಿಭಟನಾಕಾರರಿಗೆ ಚಿಕಿತ್ಸೆ ನೀಡುತ್ತಿದ್ದರು. 

ವಿಶೇಷ ಎಂದರೆ, ಇದೇ ವೈದ್ಯಕೀಯ ಶಿಬಿರಗಳಲ್ಲಿ ಸಿಂಘು ಗಡಿ ಭಾಗದ ಆಸುಪಾಸಿನಲ್ಲಿರುವ ಹಳ್ಳಿಗಳ ಬಡ ಕುಟುಂಬ ವರ್ಗದವರು ಚಿಕಿತ್ಸೆ ಪಡೆಯುತ್ತಿದ್ದಾರೆ !

ಪಶ್ಚಿಮ ಬಂಗಾಳ ಸೇರಿದಂತೆ, ವಿವಿಧ ರಾಜ್ಯಗಳ ಕೆಲವು ಸ್ವಯಂ ಸೇವಾ ಸಂಸ್ಥೆಗಳು ಪ್ರತಿಭಟನೆ ನಡೆಯುತ್ತಿರುವ ಗಡಿಭಾಗಗಳಲ್ಲಿ ಉಚಿತ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿವೆ. ಹಲವು ವೈದ್ಯರು ದಿನವಿಡೀ ಪ್ರತಿಭಟನಾ ನಿರತರ ಆರೋಗ್ಯ ಸೇವೆಗೆ ನಿಂತಿದ್ದಾರೆ. ಇದಕ್ಕಾಗಿ ಹಲವು ಶಿಬಿರಗಳು ನಡೆಯುತ್ತಿವೆ. ಈ ಶಿಬಿರದಲ್ಲಿ ಪ್ರತಿಭಟನಾ ನಿರತ ರೈತರ ಜತೆಗೆ ಆಲಿಪುರ, ಕೊಂಡ್ಲಿ ಸೇರಿದಂತೆ ಸುತ್ತಲಿನ ಹಳ್ಳಿಗಳ ಜನರು ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕಿತ್ಸೆಗಾಗಿ ತನ್ನ ಇಬ್ಬರು ಹೆಣ್ಣಮಕ್ಕಳನ್ನು ಕರೆದುಕೊಂಡು ಬಂದಿದ್ದ ಕೊಂಡ್ಲಿ ಹಳ್ಳಿಯ ಬಬ್ಲಿ, ‘ನನ್ನ ಹಿರಿಯ ಮಗಳು ಬಬಿತಾಗೆ ತುಂಬಾ ಶೀತ ಮತ್ತು ಕೆಮ್ಮು. ಇನ್ನೊಬ್ಬ ಮಗಳು ಸಾಕ್ಷಿ, ತುಂಬಾ ನಿಶ್ಯಕ್ತಳಾಗಿದ್ದಳು. ಪಕ್ಕದ ಮನೆಯವರು ಇಲ್ಲಿಗೆ ಹೋಗುವಂತೆ ಸಲಹೆ ನೀಡಿದರು. ಅದಕ್ಕೆ ಮಕ್ಕಳನ್ನು ಕರೆದು ಕೊಂಡು ಇಲ್ಲಿಗೆ ಬಂದು ಚಿಕಿತ್ಸೆ ಕೊಡಿಸಿದೆ‘ ಎಂದರು. ‘ವೈದ್ಯರು ಕೆಮ್ಮಿಗೆ ಸಿರಫ್ ಜತೆಗೆ ಔಷಧಗಳನ್ನು ಕೊಟ್ಟಿದ್ದಾರೆ. ಕಿರಿಯ ಮಗಳನ್ನು ಪರೀಕ್ಷಿಸಿ, ಕಬ್ಬಿಣ ಮತ್ತು ಕ್ಯಾಲ್ಷಿಯಂ ಅಂಗಳಿರುವ ಮಾತ್ರೆಗಳನ್ನು ಕೊಟ್ಟಿದ್ದಾರೆ‘ ಎಂದು ಅವರು ಹೇಳಿದರು.

ಆಲಿಪುರದ ಭೀಮ್‌ಸಿಂಗ್, ಮಂಡಿನೋವಿನಿಂದ ಬಳಲುತ್ತಿದ್ದ ತಮ್ಮ ತಂದೆ ಮಂಗಟ್ ಸಿಂಗ್ ಅವರನ್ನು ಚಿಕಿತ್ಸೆಗಾಗಿ ವೈದ್ಯರ ಶಿಬಿರಕ್ಕೆ ಕರೆದುಕೊಂಡು ಬಂದಿದ್ದರು. ‘ನಮ್ಮ ತಂದೆಗೆ ತೀವ್ರ ಮಂಡಿನೋವು. ಚಳಿಗಾಲದಲ್ಲಿ ಕಾಲುಗಳೆಲ್ಲ ಊದಿಕೊಳ್ಳುತ್ತವೆ. ದುಬಾರಿ ಶುಲ್ಕ ಕೊಟ್ಟು ಚಿಕಿತ್ಸೆ ಕೊಡಿಸಲಾಗುವುದಿಲ್ಲ. ಇಲ್ಲಿ ಉಚಿತವಾಗಿ ಚಿಕಿತ್ಸೆ ಕೊಡುತ್ತಾರೆಂದು ಗೊತ್ತಾಯ್ತು. ಅದಕ್ಕೆ ಕರೆದುಕೊಂಡು ಬಂದೆ‘ ಎಂದು ಹೇಳಿದರು.

ಸ್ವಯಂ ಸೇವಾ ಸಂಸ್ಥೆಯ ವೈದ್ಯಕೀಯ ಸೇವಾ ಕೇಂದ್ರದ ಡಾ. ಅಂಶುಮನ್ ಮಿತ್ರ ಅವರ ಪ್ರಕಾರ  ಸಿಂಘು ಗಡಿಯಲ್ಲಿ ಸುಮಾರು 12 ವೈದ್ಯಕೀಯ ಶಿಬಿರಗಳು ‘24X7‘  ಕೆಲಸ ಮಾಡುತ್ತಿವೆ. ವೈದ್ಯರು, ನರ್ಸ್‌ಗಳು ಮತ್ತು ಅರೆ ವೈದ್ಯಕೀಯ ಸಿಬ್ಬಂದಿ ಶಿಬಿರದಲ್ಲಿದ್ದಾರೆ. ಪ್ರತಿ ದಿನ 200 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಶೇ 40 ರಷ್ಟು ರೋಗಿಗಳು ಸಿಂಘ ಗಡಿಯ ಆಸುಪಾಸಿನಲ್ಲಿರುವ ಹಳ್ಳಿಯ ಬಡ ಕುಟುಂಬದವರು.

‘ಪರೀಕ್ಷಿಸಿ, ಚಿಕಿತ್ಸೆ ನೀಡಿದ ಬಹುತೇಕ ಎಲ್ಲ ಪ್ರಕರಣಗಳು ಶೀತ, ಕೆಮ್ಮು, ಹೊಟ್ಟೆನೋವು, ಚರ್ಮ ಮತ್ತು ಕಣ್ಣಿನ ಸೋಂಕು, ಅಲರ್ಜಿಯಂತಹ ಪ್ರಕರಣಗಳಾಗಿವೆ‘ಎಂದು ಡಾ. ಮೃದುಲಾ ತಿಳಿಸಿದರು.

ಸೋಷಿಯಲ್ ಅಪ್‌ಲಿಫ್ಟ್‌ಮೆಂಟ್‌ ಇಂಡಿಯಾ ಮೂವ್‌ಮೆಂಟ್‌ನ ಡಾ. ದೇವೀಂದರ್ ಕೌರ್, ‘ಕೆಲವು ಹೃದ್ರೋಗ, ರಕ್ತದೊತ್ತಡ ಮತ್ತು ಹೈಪರ್‌ಗ್ಲೈಸೀಮಿಯಾದಿಂದ ಬಳಲುತ್ತಿದ್ದ ರೋಗಿಗಳನ್ನು ಪರೀಕ್ಷಿಸಿದೆ‘ ಎಂದು ಹೇಳಿದರು.

ವೈದ್ಯಕೀಯ ಶಿಬಿರಗಳಲ್ಲಿ ನೆಬ್ಯುಲೈಜರ್, ಸ್ವಯಂಚಾಲಿತ ಬಾಹ್ಯ ಡಿಫಿಬ್ರಿಲೇಟರ್‌ಗಳು, ಬಿಪಿ ಯಂತ್ರಗಳು, ರಕ್ತದಲ್ಲಿನ ಸಕ್ಕರೆ ಪರೀಕ್ಷಾ ಕಿಟ್‌ಗಳು ಇತ್ಯಾದಿಗಳಿವೆ. ವೈದ್ಯಕೀಯ ಶಿಬಿರ ಆಯೋಜನೆಗೆ ನೆರವಾಗಿದ್ದ ಭಾರತೀಯ ಯೂತ್ ಕಾಂಗ್ರೆಸ್‌(ಐವೈಸಿ) ಸೇರಿದಂತೆ ಕೆಲವು ಸಂಘಟನೆಗಳು ಆಂಬ್ಯುಲೆನ್ಸ್ ಪೂರೈಸಿದ್ದವು. ಇದರಿಂದ ಕೆಲವೊಂದು ಪ್ರಕರಣಗಳನ್ನು ತುರ್ತು ಚಿಕಿತ್ಸೆಗೆ  ಕರೆದೊಯ್ಯಲು ಸಹಾಯವಾಯಿತು.

ಐವೈಸಿ ವೈದ್ಯಕೀಯ ಶಿಬಿರದಲ್ಲಿದ್ದ ಸ್ವಯಂ ಸೇವಕ ಗೌರವ್ ಕೌಶಿಕ್ ‘ಸುತ್ತಮುತ್ತಲಿನ ಹಳ್ಳಿಗಳ ಸಾಕಷ್ಟು ಜನರು ಈ ಶಿಬಿರಕ್ಕೆ ಬಂದು ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರೆಲ್ಲರಿಗೆ ನಾವು ಸಂತೋಷದಿಂದ ನೆರವಾಗುತ್ತಿದ್ದೇವೆ‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು