ಮಂಗಳವಾರ, ಸೆಪ್ಟೆಂಬರ್ 28, 2021
25 °C

ಆಗಸ್ಟ್ 2ರ ವೇಳೆಗೆ ಕೇರಳದಲ್ಲಿ 65 ಝೀಕಾ ವೈರಸ್ ಪ್ರಕರಣಗಳು ಪತ್ತೆ: ಮಾಂಡವಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಆಗಸ್ಟ್ 2, 2021ರ ವೇಳೆಗೆ ಕೇರಳದಿಂದ 65 ಝೀಕಾ ವೈರಸ್ ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವಿಯಾ ಶುಕ್ರವಾರ ಲೋಕಸಭೆಗೆ ಮಾಹಿತಿ ನೀಡಿದರು.

ಕೇರಳದ ರಾಜಧಾನಿ ತಿರುವನಂತಪುರದಲ್ಲಿ 61 ಪ್ರಕರಣಗಳು, ಎರ್ನಾಕುಲಂನಲ್ಲಿ ಎರಡು ಮತ್ತು ಕೊಟ್ಟಾಯಂ ಹಾಗೂ ಕೊಲ್ಲಂನಲ್ಲಿ ತಲಾ ಒಂದು ಪ್ರಕರಣ ವರದಿಯಾಗಿದೆ ಎಂದು ಅವರು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಸರ್ಕಾರವು ಕೈಗೊಂಡ ಕ್ರಮಗಳ ಬಗ್ಗೆ ವಿವರಿಸಿದ ಮಾಂಡವಿಯಾ, ಕೇಂದ್ರ ಆರೋಗ್ಯ ಸಚಿವಾಲಯವು ಝೀಕಾ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿದೆ. ವೈರಸ್‌ನ ಪ್ರಸಾರ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳನ್ನು ಅದು ವಿವರಿಸುತ್ತದೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಾದೇಶಿಕ ಕಚೇರಿಗಳ ಮೂಲಕ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮತ್ತು ಅವುಗಳ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಚಿವಾಲಯವು ಸಮೀಕ್ಷೆ ನಡೆಸುತ್ತಿದೆ ಎಂದರು.

ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೋಂಕು ನಿಯಂತ್ರಣ ಚಟುವಟಿಕೆಗಳು ಮತ್ತು ಕೀಟನಾಶಕಗಳ ಲಭ್ಯತೆ, ಫಾಗಿಂಗ್ ಯಂತ್ರದ ಸ್ಥಿತಿಯ ಕಾರ್ಯವೈಖರಿಯನ್ನು ಮಾಸಿಕ ವರದಿಗಳ ಮೂಲಕ ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಹೇಳಿದರು.

ನವಜಾತ ಶಿಶುಗಳಲ್ಲಿ ಸೋಂಕು ಹರಡುವಿಕೆ ಬಗ್ಗೆ ಕಣ್ಗಾವಲಿಗಾಗಿ ಆರೋಗ್ಯ ಸಚಿವಾಲಯದ ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮ(ಆರ್‌ಬಿಎಸ್‌ಕೆ)ದ ಅಡಿಯಲ್ಲಿ ನಿಗಾ ವಹಿಸಲಾಗುತ್ತಿದೆ ಎಂದು ಅವರು ಸದನಕ್ಕೆ ತಿಳಿಸಿದರು.

ಝೀಕಾ ನಿಯಂತ್ರಣ ಚಟುವಟಿಕೆಗಳಕುರಿತಂತೆ ಮೇಲ್ವಿಚಾರಣೆ ಮತ್ತು ನೆರವು ಒದಗಿಸಲು ಕೇಂದ್ರದ ತಂಡಗಳನ್ನು ನಿಯೋಜಿಸಲಾಗಿದೆ ಎಂದು ಮಾಂಡವಿಯಾ ಹೇಳಿದರು.

ಝೀಕಾ ವೈರಸ್ ರೋಗವು ಪ್ರಾಥಮಿಕವಾಗಿ ಈಡಿಸ್ ಸೊಳ್ಳೆಗಳ ಕಡಿತದಿಂದ ಹರಡುವ ವೈರಸ್‌ನಿಂದ ಉಂಟಾಗುತ್ತದೆ. ಇದು ಸಾಮಾನ್ಯವಾಗಿ ಸೌಮ್ಯವಾದ ಕಾಯಿಲೆಯಾಗಿದ್ದು ಜ್ವರ, ಮೈಮೇಲೆ ದದ್ದು, ಸ್ನಾಯು ಮತ್ತು ಕೀಲು ನೋವು, ತಲೆನೋವು ಲಕ್ಷಣಗಳಿರುತ್ತವೆ. ಝೀಕಾ ವೈರಸ್ ಸೋಂಕಿತ ಹಲವರಲ್ಲಿ ರೋಗಲಕ್ಷಣಗಳು ಇರುವುದಿಲ್ಲ.

ಗರ್ಭಾವಸ್ಥೆಯಲ್ಲಿ ಝೀಕಾ ವೈರಸ್ ಸೋಂಕು ತಗುಲಿದರೆ ಶಿಶುಗಳು ಮೈಕ್ರೊಸೆಫಾಲಿ ಮತ್ತು ಜನ್ಮಜಾತ ಅಂಗವಿಕಲತೆಯಿಂದ ಜನಿಸುವುದಕ್ಕೆ ಕಾರಣವಾಗಬಹುದು, ಇದನ್ನು ಜನ್ಮಜಾತ ಝೀಕಾ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು