ಶನಿವಾರ, ಡಿಸೆಂಬರ್ 4, 2021
26 °C
ಪ್ರತಿಭಟನೆ ಸ್ಥಳದಲ್ಲಿ ವ್ಯಕ್ತಿಯ ಹತ್ಯೆ ಪ್ರಕರಣ

ರೈತರ ಹೋರಾಟಕ್ಕೆ ಮಸಿ ಬಳಿಯುವ ಯತ್ನ: ಕಿಸಾನ್ ಸಂಯುಕ್ತ ಮೋರ್ಚಾ ಶಂಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಸಿಂಘು ಗಡಿ: ಸಿಂಘು ಗಡಿಯಲ್ಲಿ, ರೈತರು ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ನಡೆದಿರುವ ಹತ್ಯೆಯ ಹಿಂದೆ, ರೈತರ ಹೋರಾಟಕ್ಕೆ ಮಸಿ ಬಳಿಯುವ ಸಂಚು ಇರುವ ಅಪಾಯಗಳಿವೆ ಎಂದು ಕಿಸಾನ್ ಸಂಯುಕ್ತ ಮೋರ್ಚಾ ಶಂಕೆ ವ್ಯಕ್ತಪಡಿಸಿದೆ. 

ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಸಲಾಗುತ್ತಿರುವ ಪ್ರತಿಭಟನೆಯ ನೇತೃತ್ವವನ್ನು ಕಿಸಾನ್ ಸಂಯುಕ್ತ ಮೋರ್ಚಾ ವಹಿಸಿಕೊಂಡಿದೆ. ಹತ್ಯೆ ಪತ್ತೆಯಾದ ಬೆನ್ನಲ್ಲೇ ಮೋರ್ಚಾದ ನಾಯಕರು ಮಾಧ್ಯಮಗೋಷ್ಠಿ ನಡೆಸಿ, ಈ ಬಗ್ಗೆ ವಿವರಣೆ ನೀಡಿದ್ದಾರೆ.

‘ನಮ್ಮ ಹೋರಾಟಕ್ಕೆ ಧರ್ಮದ ಬಣ್ಣ ನೀಡುವ ಯತ್ನಗಳು ನಡೆಯುತ್ತಿವೆ. ಇಲ್ಲಿ ನಡೆದುದ್ದರ ಬಗ್ಗೆ ನಮಗೆಲ್ಲಾ ವಿಷಾದವಿದೆ. ಕಿಸಾನ್ ಸಂಯುಕ್ತ ಮೋರ್ಚಾವು ಮೂರು ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿದೆ. ಈ ಘಟನೆ ನಮ್ಮ ವಿರುದ್ಧ ನಡೆಸಲಾದ ಒಂದು ಸಂಚು ಇರಬಹುದು’ ಎಂದು ಕಿಸಾನ್ ಸಂಯುಕ್ತ ಮೋರ್ಚಾ ಹೇಳಿದೆ.

‘ಹತ್ಯೆಯಾದ ಲಖಬೀರ್ ಸಿಂಗ್ ಹಲವು ದಿನಗಳಿಂದ ನಿಹಾಂಗ್‌ ಗುಂಪಿನಲ್ಲೇ ಇದ್ದರು. ಅವರ ಪವಿತ್ರ ಗ್ರಂಥವನ್ನು ಕಸಿಯಲು ಯತ್ನಿಸಿದ ಆರೋಪದಲ್ಲಿ ಅವರನ್ನು ಹತ್ಯೆ ಮಾಡಿದ್ದಾರೆ. ಕಳವು ಯತ್ನ ತಪ್ಪು. ಆದರೆ ಅದಕ್ಕೆ ಪ್ರತಿಕ್ರಿಯೆಯಾಗಿ ಹತ್ಯೆ ನಡೆಸುವುದನ್ನು ನಾವು ಎಂದಿಗೂ ಒಪ್ಪುವುದಿಲ್ಲ. ತಪ್ಪಿತಸ್ಥರಿಗೆ ಶಿಕ್ಷೆ ನೀಡಿ’ ಎಂದು ಮೋರ್ಚಾ ಆಗ್ರಹಿಸಿದೆ.

‘ಇದು ನಿಹಾಂಗ್‌ ಗುಂಪಿನ ಆಂತರಿಕ ವಿಚಾರ. ಇದರಲ್ಲಿ ಯಾವುದೇ ಧರ್ಮವನ್ನು ಅವಹೇಳನ ಮಾಡುವ ಯತ್ನವಿಲ್ಲ. ಇದಕ್ಕೆ ಧರ್ಮದ ಬಣ್ಣ ಹಚ್ಚುವ ಅವಶ್ಯಕತೆ ಇಲ್ಲ’ ಎಂದು ಮೋರ್ಚಾದ ನಾಯಕರು ಹೇಳಿದ್ದಾರೆ.

ರೈತರಲ್ಲ, ಭಯೋತ್ಪಾದಕರು: ಗೌರವ್ ಭಾಟಿಯಾ

ಕೇಂದ್ರ ಸರ್ಕಾರದ ವಿರುದ್ಧ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವವರು ರೈತರಲ್ಲ, ಅರಾಜಕತಾವಾದಿಗಳು ಎಂದು ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿದ್ದಾರೆ. ಪ್ರತಿಭಟನೆ ಸ್ಥಳದಲ್ಲಿ ಯುವಕನೊಬ್ಬನ ಹತ್ಯೆ ನಡೆದಿದೆ. ಇವೆಲ್ಲಾ ನಡೆಯಬಾರದಿತ್ತು. ಕಿಸಾನ್ ಸಂಯುಕ್ತ ಮೋರ್ಚಾವೇ ಇದಕ್ಕೆ ಹೊಣೆ ಎಂದು ಅವರು ಆರೋಪಿಸಿದ್ದಾರೆ.

‘ಪ್ರತಿಭಟನೆಯ ಮೊದಲ ದಿನದಿಂದಲೂ ಭಯೋತ್ಪಾದಕರು ಅಲ್ಲಿ ಸೇರಿಕೊಂಡಿದ್ದಾರೆ. ಜನವರಿ 26ರಂದು ಕೆಂಪುಕೋಟೆಯ ಮೇಲೆ ಅವರು ದಾಳಿ ನಡೆಸಿದರು. ಆನಂತರ ಹಲ್ಲೆ, ಅತ್ಯಾಚಾರಗಳು ನಡೆದವು. ಈಚೆಗಷ್ಟೇ ಲಖಿಂಪುರ ಖೇರಿಯಲ್ಲಿ ಬಿಜೆಪಿ ಕಾರ್ಯಕರ್ತರನ್ನು ಹತ್ಯೆ ಮಾಡಿದರು. ಈಗ ದಲಿತನೊಬ್ಬನನ್ನು ಹತ್ಯೆ ಮಾಡಿದ್ದಾರೆ. ಈ ಭಯೋತ್ಪಾದಕರನ್ನು ಅಲ್ಲಿಂದ ಓಡಿಸಬೇಕು’ ಎಂದು ಬಿಜೆಪಿ ವಕ್ತಾರ ಗೌರವ್ ಭಾಟಿಯಾ ಆಗ್ರಹಿಸಿದ್ದಾರೆ.

ಆದರೆ ಈ ಆರೋಪವನ್ನು ಕಿಸಾನ್ ಸಂಯುಕ್ತ ಮೋರ್ಚಾ ತಳ್ಳಿ ಹಾಕಿದೆ. ‘ಪ್ರತಿಭಟನೆ ನಿರತ ರೈತರಿಗೂ, ಹತ್ಯೆಯಾದ ಲಖಬೀರ್ ಸಿಂಗ್‌ಗೂ ಮತ್ತು ನಿಹಾಂಗ್‌ ಪಂಥದವರಿಗೆ ಸಂಬಂಧವಿಲ್ಲ’ ಎಂದು ಕಿಸಾನ್ ಸಂಯುಕ್ತ ಮೋರ್ಚಾ ಸ್ಪಷ್ಟನೆ ನೀಡಿದೆ.

ಯಾರು ಈ ನಿಹಾಂಗರು?

ಕಟ್ಟಾ ಸಿಖ್ ಯೋಧರನ್ನು ನಿಹಾಂಗರು ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ ಕಡು ನೀಲಿ ಬಣ್ಣದ ನಿಲುವಂಗಿ, ಅದೇ ಬಣ್ಣದ ದೊಡ್ಡ ಪೇಟ, ಭುಜಕೀರ್ತಿಗಳಲ್ಲಿ ಖಡ್ಗಗಳು, ದೊಡ್ಡ ಖಡ್ಗ, ಚೂರಿ ಇವು ನಿಹಾಂಗರ ವೇಷಭೂಷಣ. ಗುರು ಗೋವಿಂದ ಸಿಂಗ್ ಅವರ ಕಾಲದಿಂದಲೂ ಈ ಪಂಗಡ ಇದೆ. ಧರ್ಮ ರಕ್ಷಣೆ ತಮ್ಮ ಹಕ್ಕು ಎಂದು ಇವರು ಭಾವಿಸಿದ್ದಾರೆ.

ಬ್ರಿಟಿಷರು ಭಾರತಕ್ಕೆ ಬಂದಾಗ ಪಂಜಾಬ್ ಪ್ರಾಂತದಲ್ಲಿ ಈ ಪಂಥವು ಪ್ರಾಬಲ್ಯ ಹೊಂದಿತ್ತು. ಭಾರತದ ಮೇಲೆ ಅಫ್ಗಾನಿಸ್ತಾನ, ಇರಾನ್‌ನ ದಾಳಿಯನ್ನು ಈ ಪಂಥದ ಯೋಧರು ತಡೆದಿದ್ದರು ಎಂಬುದು ಇತಿಹಾಸದಲ್ಲಿ ದಾಖಲಾಗಿದೆ. 1818ರಲ್ಲಿ ಈ ಪಂಥವು ಛಿದ್ರವಾಯಿತು. ಆಗ ಬಹುತೇಕ ನಿಹಾಂಗರನ್ನು ಬ್ರಿಟಿಷರು ತಮ್ಮ ಸೇನೆಗೆ ಸೇರಿಸಿಕೊಂಡರು. ನಂತರ ಅದೇ ಸಿಖ್ ರೆಜಿಮೆಂಟ್ ಆಯಿತು. ಸೇನೆಯನ್ನು ಸೇರದೆ ಉಳಿದ ನಿಹಾಂಗರು, ತಮ್ಮ ಸಂಪ್ರದಾಯವನ್ನು ಪಾಲಿಸಿಕೊಂಡು ಬಂದಿದ್ದಾರೆ.

ಆದರೆ ಇವರಲ್ಲಿ ಕೆಲವು ಗುಂಪುಗಳು ಗುರು ಗ್ರಂಥ ಸಾಹಿಬ್‌ನಲ್ಲಿ ಸೂಚಿಸಿರುವುದಕ್ಕಿಂತ ವ್ಯತಿರಿಕ್ತವಾಗಿ ನಡೆದುಕೊಳ್ಳುತ್ತಿದೆ. ಧರ್ಮಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ ಎಂಬ ಆರೋಪವಿದೆ. ನಿಹಾಂಗರು ಈಗ ಭೂಮಾಫಿಯಾ, ಮಾದಕವಸ್ತು ಸೇವೆನೆ-ಮಾರಾಟಗಳಲ್ಲಿ ತೊಡಗಿದ್ದಾರೆ ಎಂಬ ಆರೋಪವೂ ಇದೆ.

***

ಬಿಜೆಪಿ ಕಾರ್ಯಕರ್ತರ ಹತ್ಯೆ ‘ಕ್ರಿಯೆಗೆ ಪ್ರತಿಕ್ರಿಯೆ’ ಎಂದು ಟಿಕಾಯತ್ ಹೇಳಿದ್ದರು. ಇದರಿಂದ ಉತ್ತೇಜಿತರಾಗಿ ಈ ಹತ್ಯೆ ಮಾಡಿದ್ದಾರೆ

- ಅಮಿತ್ ಮಾಳವೀಯ, ಬಿಜೆಪಿ ಐಟಿ ಘಟಕ ಮುಖ್ಯಸ್ಥ

***

ಈ ಘಟನೆಯ ಹಿಂದೆ ಕೇಂದ್ರ ಸರ್ಕಾರದ ಸಂಸ್ಥೆಗಳು ಕೆಲಸ ಮಾಡಿವೆ. ತನಿಖೆ ನಡೆಸಿದರೆ, ಸತ್ಯ ಬಯಲಾಗುತ್ತದೆ. ಹೀಗಾಗಿ ಸರಿಯಾದ ತನಿಖೆ ನಡೆಸಬೇಕು

- ಕುಲವಂತ್ ಸಿಂಗ್, ರೈತ ನಾಯಕ

***

ಹಿಂಸಾಚಾರಕ್ಕೆ ಎಲ್ಲಿಯೂ ಅವಕಾಶವಿರಬಾರದು. ತನಿಖೆ ನಡೆಸಿ, ತಪ್ಪಿತಸ್ಥರನ್ನು ಪತ್ತೆ ಮಾಡಿ, ಶಿಕ್ಷೆ ನೀಡುವುದು ಸರ್ಕಾರದ ಜವಾಬ್ದಾರಿ. ಸರ್ಕಾರ ಈ ಕೆಲಸ ಮಾಡಬೇಕು

- ಪವನ್ ಖೇರಾ, ಕಾಂಗ್ರೆಸ್ ವಕ್ತಾರ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು