ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಕ್ಕುಗಳ ಉಲ್ಲಂಘನೆ ಹೆಸರಲ್ಲಿ ದೇಶದ ಘನತೆಗೆ ಧಕ್ಕೆ ತರುವ ಯತ್ನ: ಮೋದಿ ಟೀಕೆ

Last Updated 12 ಅಕ್ಟೋಬರ್ 2021, 18:54 IST
ಅಕ್ಷರ ಗಾತ್ರ

ನವದೆಹಲಿ: ಮಾನವ ಹಕ್ಕುಗಳ ಬಗ್ಗೆ ತಮ್ಮದೇ ಆದ ‘ಆಯ್ದ ವ್ಯಾಖ್ಯಾನ’ ಮಾಡುವವರ ಬಗ್ಗೆ ಕಿಡಿ ಕಾರಿರುವ ಪ್ರಧಾನಿ ನರೇಂದ್ರ ಮೋದಿ, ಮಾನವ ಹಕ್ಕುಗಳ ಉಲ್ಲಂಘನೆಯನ್ನು ರಾಜಕೀಯ ಲಾಭ–ನಷ್ಟದ ಲೆಕ್ಕಾಚಾರದಿಂದ ನೋಡುವುದು ಮಾನವ ಹಕ್ಕುಗಳಿಗಷ್ಟೇ ಅಲ್ಲ ಪ್ರಜಾಪ್ರಭುತ್ವಕ್ಕೂ ಅಪಾಯಕಾರಿ ಎಂದಿದ್ದಾರೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್ಎಚ್‌ಆರ್‌ಸಿ) 28ನೇ ಸಂಸ್ಥಾಪನಾ ದಿನದ ಕಾರ್ಯಕ್ರಮದಲ್ಲಿ
ಮಂಗಳವಾರ ಮಾತನಾಡಿದರು.

ಘಟನೆಗಳು ಒಂದೇ ತೆರನಾಗಿ ಇದ್ದರೂ, ತಮ್ಮ ಹಿತಾಸಕ್ತಿಯ ಕಡೆಗೇ ಗಮನ ಇರುವ ಕೆಲವರು‌ ಮಾನವ ಹಕ್ಕುಗಳನ್ನು ಭಿನ್ನವಾಗಿಯೇ ನೋಡುತ್ತಾರೆ. ಮಾನವ ಹಕ್ಕುಗಳ ಉಲ್ಲಂಘನೆ ಹೆಸರಿನಲ್ಲಿ ಕೆಲವರು ದೇಶದ ವರ್ಚಸ್ಸಿಗೂ ಧಕ್ಕೆ ತರುತ್ತಿದ್ದು, ಅಂಥವರ ಬಗ್ಗೆ ಜನರು ಎಚ್ಚರದಿಂದ ಇರಬೇಕು ಎಂದು ಮೋದಿ ಹೇಳಿದರು.

ಯಾವುದೇ ವ್ಯಕ್ತಿ ಅಥವಾ ಸಂಘಟನೆಯ ಹೆಸರನ್ನು ಅವರು ಉಲ್ಲೇಖಿಸಲಿಲ್ಲ.

ಅಡುಗೆ ಅನಿಲ, ಶೌಚಾಲಯ ಸೌಲಭ್ಯ, ವಿದ್ಯುತ್‌, ಬಡವರ ಮನೆಗಳಿಗೆ ವಿದ್ಯುತ್‌ ಸೌಕರ್ಯ ಒದಗಿಸುವ ಮೂಲಕ, ತಮ್ಮ ಸರ್ಕಾರವು ಜನರಿಗೆ ಅವರ ಹಕ್ಕುಗಳ ಬಗ್ಗೆ ಅರಿವು ಮೂಡಿಸಿದೆ ಎಂದು ಮೋದಿ ಹೇಳಿದರು.

ತ್ರಿವಳಿ ತಲಾಖ್‌ ವಿರುದ್ಧದ ಕಾನೂನು ಮಾಡುವ ಮೂಲಕ, ತಮ್ಮ ಸರ್ಕಾರವು ಮುಸ್ಲಿಂ ಮಹಿಳೆಯರಿಗೆ ಹೊಸ ಹಕ್ಕುಗಳನ್ನು ನೀಡಿದೆ ಎಂದರು. 26 ವಾರಗಳ ಮಾತೃತ್ವ ರಜೆ, ಅತ್ಯಾಚಾರ ಪ್ರಕರಣದಲ್ಲಿ ಕಠಿಣ ಶಿಕ್ಷೆಯ ಕಾಯ್ದೆ ರೂಪಿಸುವುದರೊಂದಿಗೆ ಮಹಿಳಾ ಸಬಲೀಕರಣಕ್ಕಾಗಿ ತಮ್ಮ ಸರ್ಕಾರದ ಕೊಡುಗೆಗಳನ್ನು ವಿವರಿಸಿದರು.

ಎನ್‌ಎಚ್‌ಆರ್‌ಸಿ ಅಧ್ಯಕ್ಷ, ನಿವೃತ್ತ ನ್ಯಾಯಮೂರ್ತಿ ಅರುಣ್‌ ಕುಮಾರ್‌ ಮಿಶ್ರಾ ಮಾತನಾಡಿ, ‘ರಾಜಕೀಯ ಹಿಂಸೆ ಹಾಗೂ ಭಯೋತ್ಪಾದನೆಯನ್ನು ಸಮಾಜ ಸೇವಾ ಸಂಘಟನೆಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಬಲವಾಗಿ ಖಂಡಿಸಬೇಕು. ಈ ವಿಷಯ
ಗಳ ಬಗೆಗಿನ ಉದಾಸೀನತೆಯು ಮೂಲಭೂತವಾದಕ್ಕೆ ದಾರಿ ಮಾಡಿಕೊಡುತ್ತದೆ. ಹಾಗೂ ಇತಿಹಾಸ ನಮ್ಮನ್ನು ಎಂದಿಗೂ ಕ್ಷಮಿಸದು’ ಎಂದು ಎಚ್ಚರಿಸಿದರು.

ದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿರುವುದಾಗಿ ಹೊರಗಿನ ಶಕ್ತಿಗಳು ಸುಳ್ಳು ಆಪಾದನೆ ಮಾಡುವುದು ಸಾಮಾನ್ಯವಾಗಿದ್ದು, ಇದನ್ನು ವಿರೋಧಿಸಬೇಕು ಎಂದರು.

‘ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ ದೇಶದ ಈಶಾನ್ಯ ಭಾಗದಲ್ಲಿ ಶಾಂತಿ ಸ್ಥಾಪನೆಗಾಗಿ ಕೇಂದ್ರ ಗೃಹಸಚಿವ ಅಮಿತ್‌ ಶಾ ಅವರು ದಣಿಯವರಿದ ಪ್ರಯತ್ನ ನಡೆಸಿದ್ದಾರೆ. ಹೊಸ ಯುಗ ಆರಂಭಿಸಿದ್ದಾರೆ’ ಎಂದು ಶ್ಲಾಘಿಸಿದರು.

ಭಾರತವು ಜಾಗತಿಕವಾಗಿ ಬಲಾಢ್ಯ ರಾಷ್ಟ್ರವಾಗಿ, ಹೊಸ ಶಕ್ತಿಯಾಗಿ ಹೊಮ್ಮಿದ್ದು, ಇದರ ಹೆಗ್ಗಳಿಕೆ ದೇಶದ ಜನರಿಗೆ, ಸಂವಿಧಾನ ವ್ಯವಸ್ಥೆಗೆ ಹಾಗೂ ನಾಯಕತ್ವಕ್ಕೆ ಸಲ್ಲಬೇಕು ಎಂದರು.

ಕಾರ್ಯಕ್ರಮದಲ್ಲಿ ಗೃಹ ಸಚಿವ ಅಮಿತ್‌ ಶಾ ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT