ಶುಕ್ರವಾರ, ಅಕ್ಟೋಬರ್ 22, 2021
28 °C

ವೇಗ ಕಡಿವಾಣಕ್ಕೆ ವಿಶೇಷ ಸಾಧನ: ಆಯ್ದ ರಸ್ತೆ, ಹೆದ್ದಾರಿಗಳಲ್ಲಿ ಅಳವಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಅತಿವೇಗದಿಂದಾಗುವ ಅಪಘಾತಗಳಿಗೆ ಕಡಿವಾಣ ಹಾಕಲು ಆಯ್ದ ಕೆಲವು ರಾಜ್ಯಗಳಲ್ಲಿನ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ ಮತ್ತು ನಗರಗಳ ಪ್ರಮುಖ ರಸ್ತೆಗಳಲ್ಲಿ ವೇಗ ನಿರ್ವಹಣಾ ಸಾಧನಗಳನ್ನು (ಎಸ್‌ಎಂಡಿ) ಅಳವಡಿಸಲು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಪ್ರಸ್ತಾವ ಸಿದ್ಧಪಡಿಸಿದೆ.

ಅತಿಹೆಚ್ಚು ಅಪಘಾತಗಳು ಸಂಭವಿಸುವ ಮತ್ತು ಅಪಘಾತಗಳಿಂದ ಅತಿಹೆಚ್ಚು ಸಾವು ಸಂಭವಿಸುವ 14 ರಾಜ್ಯಗಳನ್ನು ಈ ಯೋಜನೆಗೆ ಆಯ್ಕೆ ಮಾಡಿಕೊಳ್ಳಲಾಗಿದೆ. 

ಎಸ್‌ಎಂಡಿಗಳು ವಾಹನಗಳ ವೇಗ, ನೋಂದಣಿ ಸಂಖ್ಯೆ, ವಾಹನದಲ್ಲಿರುವವರ ಮುಖವನ್ನು ದಾಖಲಿಸುವ ಸಾಮರ್ಥ್ಯ ಹೊಂದಿರಲಿವೆ. ಇವುಗಳನ್ನು ನಾಲ್ಕು ಲಕ್ಷಕ್ಕಿಂತಲೂ ಹೆಚ್ಚು ಜನಸಂಖ್ಯೆಯುಳ್ಳ ನಗರಗಳ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಅಳವಡಿಸಲಾಗುವುದು. ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿಗಳಲ್ಲೂ ಇವುಗಳನ್ನು ಅಳವಡಿಸಲಾಗುತ್ತದೆ. 

ಈ ಸಾಧನಗಳು ದಾಖಲಿಸಿಕೊಂಡ ವಿವರಗಳನ್ನು ‘ಸಂಚಾರ ನಿರ್ದೇಶನ ಮತ್ತು ನಿಯಂತ್ರಣ ಕೊಠಡಿ’ಗೆ ರವಾನೆ ಮಾಡುತ್ತವೆ. ಇದರ ಆಧಾರದಲ್ಲಿ ಸಂಬಂಧಿತ ವಾಹನ ಮತ್ತು ಅದರ ಚಾಲಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸಚಿವಾಲಯವು ತನ್ನ ಪ್ರಸ್ತಾವದಲ್ಲಿ ವಿವರಿಸಿದೆ.

ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ₹7,270 ಕೋಟಿ ಅನುದಾನ ನೀಡಲಿದೆ. ರಾಜ್ಯ ಸರ್ಕಾರಗಳೂ ಸ್ವಲ್ಪ ಪ್ರಮಾಣದ ವೆಚ್ಚವನ್ನು ಭರಿಸಬೇಕಾಗುತ್ತದೆ. 2027ರ ವೇಳೆಗೆ ರಸ್ತೆ ಅಪಘಾತಗಳಿಂದ ಸಂಭವಿಸುವ ಸಾವುಗಳ ಪ್ರಮಾಣದಲ್ಲಿ ಶೇ 30ರಷ್ಟು ಇಳಿಕೆ ಮಾಡಲು ಈ ಯೋಜನೆ ಸಿದ್ಧಪಡಿಸಲಾಗಿದೆ. ಈ ಯೋಜನೆ ಅಡಿ ರಸ್ತೆ ಅಪಘಾತ ದತ್ತಾಂಶವನ್ನು ಸಿದ್ಧಪಡಿಸಲಾಗುತ್ತದೆ. ಅದನ್ನು ಎಲ್ಲಾ ರಾಜ್ಯಗಳ ಜತೆ ಹಂಚಿಕೊಳ್ಳಲಾಗುತ್ತದೆ ಎಂದು ಸಚಿವಾಲಯವು ಹೇಳಿದೆ.

ಯೋಜನೆಗೆ ಆಯ್ಕೆಯಾದ ರಾಜ್ಯಗಳು

* ಉತ್ತರ ಪ್ರದೇಶ

* ಮಹಾರಾಷ್ಟ್ರ

* ಮಧ್ಯಪ್ರದೇಶ

* ರಾಜಸ್ಥಾನ

* ಕರ್ನಾಟಕ

* ತಮಿಳುನಾಡು

* ಆಂಧ್ರಪ್ರದೇಶ

* ಗುಜರಾತ್

* ಬಿಹಾರ

* ಪಶ್ಚಿಮ ಬಂಗಾಳ

* ತೆಲಂಗಾಣ

* ಒಡಿಶಾ

* ಹರಿಯಾಣ

* ಅಸ್ಸಾಂ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು