ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಸ್ಲಿಮರ ವಿರುದ್ಧದ ವ್ಯವಸ್ಥಿತ ದಾಳಿ: ಪತ್ರಕರ್ತರ ಖಂಡನೆ

ರಾಷ್ಟ್ರಪತಿ, ನ್ಯಾಯಾಧೀಶರು, ಸಾಂವಿಧಾನಿಕ ಸಂಸ್ಥೆಗಳಿಗೆ ಬಹಿರಂಗ ಪತ್ರ
Last Updated 23 ಮಾರ್ಚ್ 2022, 19:46 IST
ಅಕ್ಷರ ಗಾತ್ರ

ನವದೆಹಲಿ: ಭಾರತದ ಅಲ್ಪಸಂಖ್ಯಾತರು, ಅದರಲ್ಲೂ ಮುಸ್ಲಿಮರ ಮೇಲೆ ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ವ್ಯವಸ್ಥಿತ ‘ದಾಳಿ’ಗಳ ವಿಚಾರದಲ್ಲಿ ತಕ್ಷಣವೇ ಮಧ್ಯಪ್ರವೇಶಿಸಬೇಕು ಎಂದು ಸಾಂವಿಧಾನಿಕ ಸಂಸ್ಥೆಗಳ ಮುಖ್ಯಸ್ಥರಿಗೆ ದೇಶದ ಪ್ರಮುಖ ಪತ್ರಕರ್ತರು ಬಹಿರಂಗ ಪತ್ರದ ಮೂಲಕ ಮನವಿ ಮಾಡಿದ್ದಾರೆ.

‘ಹಿಂದುತ್ವವು ಅಪಾಯದಲ್ಲಿದೆ’, ‘ಮುಸ್ಲಿಮರು ದೇಶಕ್ಕೆ ಬೆದರಿಕೆಯಾಗಿದ್ದಾರೆ’ ಎಂದು ದೇಶದಾದ್ಯಂತ ಬಿಂಬಿಸುವ ಯತ್ನ ನಡೆಯುತ್ತಿದೆ ಎಂದು28 ಹಿರಿಯ ಪತ್ರಕರ್ತರ ಸಹಿಯುಳ್ಳ ಪತ್ರದಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಮುಸ್ಲಿಂ ವಿರೋಧಿ ಭಾವನೆಗಳನ್ನು ಉತ್ತೇಜಿಸುವ ‘ದಿ ಕಾಶ್ಮೀರ್ ಫೈಲ್ಸ್’, ಚಿತ್ರ ಪ್ರದರ್ಶನ; ಕರ್ನಾಟಕದಲ್ಲಿ ಹಿಜಾಬ್ ವಿವಾದ; ‘ಬುಲ್ಲಿಬಾಯ್’ ಆ್ಯಪ್ ಸೇರಿ ಹಲವು ವಿಧದಲ್ಲಿ ಮುಸ್ಲಿಂ ಮಹಿಳೆಯರನ್ನು ಗುರಿಯಾಗಿಸುವ ಯತ್ನ ನಡೆಯುತ್ತಿವೆ. ಈ ಬಗ್ಗೆ ರಾಷ್ಟ್ರಪತಿ, ಸುಪ್ರೀಂ ಕೋರ್ಟ್, ವಿವಿಧ ಹೈಕೋರ್ಟ್‌ಗಳ ನ್ಯಾಯಮೂರ್ತಿಗಳು, ಚುನಾವಣಾ ಆಯೋಗ ಮತ್ತು ಇತರೆ ಸಾಂವಿಧಾನಿಕ ಸಂಸ್ಥೆಗಳು ಮಧ್ಯಪ್ರವೇಶಿಸಬೇಕು ಎಂದು ಮನವಿ ಮಾಡಲಾಗಿದೆ.

‘ಈ ಎಲ್ಲ ಘಟನೆಗಳನ್ನು ಒಟ್ಟಿಗೆ ಪರಿಗಣಿಸಿದಾಗ, ಹಿಂದುತ್ವವು ಅಪಾಯದಲ್ಲಿದೆ ಎಂಬ ಭಾವನೆಯನ್ನು ದೇಶದಾದ್ಯಂತ ಬಿಂಬಿಸುವ ಉನ್ಮಾದ ಕಂಡುಬರುತ್ತಿದೆ. ಈ ಮೂಲಕ ಹಿಂದೂಗಳು ಹಾಗೂ ಭಾರತೀಯರಿಗೆ ಭಾರತದಲ್ಲಿರುವ ಮುಸ್ಲಿಮರು ಬೆದರಿಕೆಯಾಗಿದ್ದಾರೆ ಎಂಬಂತೆ ಚಿತ್ರಿಸಲಾಗುತ್ತಿದೆ.ನಮ್ಮ ಸಾಂವಿಧಾನಿಕ, ಶಾಸನಬದ್ಧ ಮತ್ತು ಪ್ರಜಾಸತ್ತಾತ್ಮಕ ಸಂಸ್ಥೆಗಳು ತಕ್ಷಣವೇ ಮತ್ತು ಪರಿಣಾಮಕಾರಿಯಾಗಿ ಕ್ರಮ ಜರುಗಿಸಿ, ಈ ಪ್ರವೃತ್ತಿಯನ್ನು ನಿಲ್ಲಿಸಬೇಕಾದ ತುರ್ತು ಅಗತ್ಯವಿದೆ’ ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ದಿ ಹಿಂದೂ ಪತ್ರಿಕೆಯ ಮಾಜಿ ಪ್ರಧಾನ ಸಂಪಾದಕ ಮತ್ತು ದಿ ಹಿಂದೂ ಪಬ್ಲಿಷಿಂಗ್ ಗ್ರೂಪ್‌ ನಿರ್ದೇಶಕ ಎನ್. ರಾಮ್, ಪತ್ರಕರ್ತ ಹಾಗೂ ಬರಹಗಾರ ಮೃಣಾಲ್ ಪಾಂಡೆ, ದಿ ಟೆಲಿಗ್ರಾಫ್‌ ಸಂಪಾದಕ ಆರ್. ರಾಜಗೋಪಾಲ್, ದಿ ವೈರ್‌ ಸಂಸ್ಥಾಪಕ ಸಂಪಾದಕ ಸಿದ್ಧಾರ್ಥ ವರದರಾಜನ್, ಕಾರವಾನ್‌ನ ಕಾರ್ಯನಿರ್ವಾಹಕ ಸಂಪಾದಕ ವಿನೋದ್ ಜೋಸ್ ಈ ಪತ್ರಕ್ಕೆ ಸಹಿ ಹಾಕಿದ್ದಾರೆ.

2021ರ ಡಿಸೆಂಬರ್‌ನಲ್ಲಿ ಹರಿದ್ವಾರದಲ್ಲಿ ನಡೆದ ಧರ್ಮ ಸಂಸತ್‌ ಮೂಲಕ ಮುಸ್ಲಿಮರ ವಿರುದ್ಧದ ಹೋರಾಟಕ್ಕೆ ಕರೆ ನೀಡಲಾಯಿತು ಎಂದು ಪತ್ರದಲ್ಲಿ ಹೇಳಲಾಗಿದೆ. ‘2021 ಹಾಗೂ 2022ರಲ್ಲಿ ದೇಶದ ಜನರನ್ನು ಧರ್ಮದ ಆಧಾರದಲ್ಲಿ ವಿಭಜಿಸುವ ಹಾಗೂ ಮುಸ್ಲಿಮರ ಹೆಸರಿಗೆ ಮಸಿ ಬಳಿಯುವ ಯತ್ನಗಳು ನಡೆದವು. ಮುಸ್ಲಿಂ ಹೆಣ್ಣುಮಕ್ಕಳನ್ನು ಸಾಮಾಜಿಕ ಜಾಲತಾಣಗಳು, ಅದರಲ್ಲೂ ಬುಲ್ಲಿಬಾಯ್‌ ಆ್ಯಪ್‌ ಮೂಲಕ ವ್ಯವಸ್ಥಿತವಾಗಿ ಗುರಿ ಮಾಡಲಾಯಿತು. ಹಿಜಾಬ್ ಗಲಾಟೆಯಿಂದ ದೇಶದಾದ್ಯಂತ ಮುಸ್ಲಿಂ ಹೆಣ್ಣುಮಕ್ಕಳು ಕಿರುಕುಳ ಹಾಗೂ ಅಪಮಾನಕ್ಕೆ ಒಳಗಾದರು. 2022ರ ಚುನಾವಣಾ ಪ್ರಚಾರದಲ್ಲಿ ಆಡಳಿತಾರೂಢ ಪಕ್ಷದ ‘ತಾರಾ ಪ್ರಚಾರಕರು’ ಕಾನೂನು ಬಾಹಿರವಾಗಿ, ನಾಚಿಕೆಬಿಟ್ಟು ಧರ್ಮದ ಹೆಸರಿನಲ್ಲಿ ಮತ ಕೇಳಿದ್ದನ್ನು ನಾವು ಗಮನಿಸಿದ್ದೇವೆ’ ಎಂದು ಪತ್ರಕರ್ತರು ಹೇಳಿದ್ದಾರೆ.

‘ದಿ ಕಾಶ್ಮೀರ್ ಫೈಲ್ಸ್’ ಚಿತ್ರ ಪ್ರದರ್ಶನದ ವೇಳೆ ಚಿತ್ರಮಂದಿರದ ಒಳಗೆ ಹಾಗೂ ಹೊರಗೆ ಮುಸ್ಲಿಂ ವಿರೋಧಿ ಭಾವನೆಗಳನ್ನು ಎತ್ತಿಕಟ್ಟುವ ಸಂಘಟಿತ ಕೆಲಸವಾಗುತ್ತಿದೆ ಎಂದು ಪತ್ರದಲ್ಲಿ ಬರೆಯಲಾಗಿದೆ. ಕೋವಿಡ್‌ ಆರಂಭದ ದಿನಗಳಲ್ಲಿ ಮುಸ್ಲಿಮರ ಮೇಲೆ ವ್ಯವಸ್ಥಿತ ಸಂಚು ನಡೆಯಿತು. ‘ಕೊರೊನಾ ಜಿಹಾದ್’ ಎಂಬ ಪರಿಕಲ್ಪನೆಯನ್ನು ಹುಟ್ಟುಹಾಕಲಾಯಿತು’ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT