ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧನಕ್ಕೂ ಮುನ್ನ ಯುಎಪಿಎ ಕಾಯ್ದೆ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ಸ್ಟ್ಯಾನ್

Last Updated 6 ಜುಲೈ 2021, 13:20 IST
ಅಕ್ಷರ ಗಾತ್ರ

ಮುಂಬೈ: ಬುಡಕಟ್ಟು ಜನಾಂಗಗಳ ಹಕ್ಕುಗಳಿಗಾಗಿ ಜೀವಮಾನದುದ್ದಕ್ಕೂ ಹೋರಾಟ ನಡೆಸಿದ್ದ ಸ್ಟ್ಯಾನ್‌ ಸ್ವಾಮಿ ನಿಧನರಾಗುವ ಎರಡು ದಿನದ ಮುನ್ನ ಕಾನೂನುಬಾಹಿರ ಚುಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯ ಸೆಕ್ಷನ್‌ 43ಡಿ (5) ಅನ್ನು ಪ್ರಶ್ನಿಸಿ ಬಾಂಬೆ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು.

ಪ್ರತಿಯೊಬ್ಬ ನಾಗರಿಕನಿಗೆ ಸಂವಿಧಾನ ನೀಡಿರುವ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಯುಎಪಿಎ ಕಿತ್ತುಕೊಂಡಿದೆ. ಇದೊಂದು 'ದುಸ್ತರವಾದ ಪ್ರತಿಬಂಧಕ' ಎಂದು ಸ್ಟ್ಯಾನ್‌ ಸ್ವಾಮಿ ವ್ಯಾಖ್ಯಾನಿಸಿದ್ದರು.

ಬಾಂಬೆ ಹೈಕೋರ್ಟ್‌ನಲ್ಲಿ ಜುಲೈ 3ರಂದು 'ಸೆಕ್ಷನ್‌ 43ಡಿ(5)ರ ಯುಎಪಿಎ, ಸಂವಿಧಾನ ನೀಡಿರುವ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಮತ್ತು ಸ್ವಾತಂತ್ರ್ಯವನ್ನು ಉಲ್ಲಂಘಿಸುತ್ತದೆ' ಎಂದು ಸ್ಟ್ಯಾನ್‌ ಅವರ ವಕೀಲ ಮಿಹಿರ್‌ ದೇಸಾಯಿ ತಿಳಿಸಿದ್ದರು.

ಜಾಮೀನು ಬಯಸುವವರಿಗೆ ಯುಎಪಿಎ ದುಸ್ತರವಾದ ಪ್ರತಿಬಂಧಕವಾಗಿ ಪರಿಣಮಿಸಿದೆ. ಮೂಲಭೂತ ಹಕ್ಕು ಹಾಗೂ ಸ್ವಾತಂತ್ರ್ಯವನ್ನು ನೀಡಿರುವ ಸಂವಿಧಾನವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದರು.

'ಚಾಲ್ತಿಯಲ್ಲಿರುವ ಅಪರಾಧ ಕಾನೂನು ಪ್ರಕ್ರಿಯೆಯಲ್ಲಿ ಜೈಲಿನಲ್ಲಿರುವ ಆರೋಪಿಯ ಸಾಧು ಗುಣಗಳನ್ನು ಪರಿಗಣಿಸಲಾಗುತ್ತದೆ. ಆದರೆ ಯುಎಪಿಎಯ ಸೆಕ್ಷನ್‌ 43ಡಿ (5) ಕಾನೂನು ಇದನ್ನು ತಲೆಕೆಳಗಾಗುವಂತೆ ಮಾಡಿದೆ' ಎಂದು ವಕೀಲ ಮಿಹಿರ್‌ ದೇಸಾಯಿ ಹೇಳಿದ್ದಾರೆ.

ಯುಎಪಿಎಯ ಸೆಕ್ಷನ್‌ 43ಡಿ (5) ಹೇಳುವುದೇನು?

ಆರೋಪ ಸಾಬೀತಾಗದೇ ಇದ್ದರೂ, ಆರೋಪಿ ತಪ್ಪೆಸಗಿದ್ದಾನೆ ಎಂದು ಕೋರ್ಟ್‌ ಭಾವಿಸಿದರೆ ಇತರರ ಜಾಮೀನು ಅಥವಾ ವೈಯಕ್ತಿಕ ಬಾಂಡ್‌ನ ಆಧಾರದಲ್ಲಿ ಆರೋಪಿ ಬಿಡುಗಡೆಯಾಗಲು (ಜಾಮೀನು ಪಡೆಯಲು) ಅವಕಾಶವಿಲ್ಲ ಎಂದು ಯುಎಪಿಎಯ ಸೆಕ್ಷನ್ 43ಡಿ (5) ಹೇಳುತ್ತದೆ

ಸಾಮಾಜಿಕ ಕಾರ್ಯಕರ್ತ ಸ್ಟ್ಯಾನ್‌ ಸ್ವಾಮಿ ಅವರು ಎಲ್ಗಾರ್‌ ಪರಿಷತ್‌ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರು. ಅನಾರೋಗ್ಯದ ಹಿನ್ನೆಲೆ ನವಿ ಮುಂಬೈನ ತಲೋಜ ಜೈಲಿನಲ್ಲಿದ್ದ ಸ್ಟ್ಯಾನ್‌ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುವಂತೆ ಮೇ 28ರಂದು ಬಾಂಬೆ ಹೈಕೋರ್ಟ್ ಆದೇಶಿಸಿತ್ತು. 84 ವರ್ಷ ವಯಸ್ಸಾಗಿದ್ದ ಸ್ಟ್ಯಾನ್‌ ಸ್ವಾಮಿ ಜುಲೈ 05ರಂದು ನಿಧನರಾಗಿದ್ದರು.

ತಮಿಳುನಾಡಿನ ತಿರುಚ್ಚಿಯಲ್ಲಿ ಜನಿಸಿದ್ದ ಸ್ಟ್ಯಾನ್‌ ಸ್ವಾಮಿ ಅವರು ಜೆಸ್ವಿತ್‌ ಸಂಸ್ಥೆಯ ಗುರುವಾಗಿ ಜಾರ್ಖಂಡ್‌ನ ರಾಜಧಾನಿ ರಾಂಚಿಯ ನಾಮ್‌ ಕುಮ್‌ ಎಂಬ ಪ್ರದೇಶದಲ್ಲಿ ಜೆಸ್ವಿತ್‌ ಬಡಕುಟೀರದಲ್ಲಿ ವಾಸಿಸುತ್ತ ಆದಿವಾಸಿಗಳ ಹಕ್ಕುಸ್ಥಾಪನೆಗಾಗಿ ಹೋರಾಟ ನಡೆಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT