ಭಾನುವಾರ, ಆಗಸ್ಟ್ 14, 2022
24 °C

ವಲಸೆ ಕಾರ್ಮಿಕರಿಗೆ ರಾಜ್ಯಗಳು ಪಡಿತರ ವಿತರಿಸಿಲ್ಲ: ಸುಪ್ರೀಂಗೆ ಕೇಂದ್ರದ ಮಾಹಿತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ‘ಕೋವಿಡ್‌ ಲಾಕ್‌ಡೌನ್ ಅವಧಿಯಲ್ಲಿ ವಲಸೆ ಕಾರ್ಮಿಕರಿಗೆ ವಿತರಿಸಲಿ ಎಂದು ರಾಜ್ಯ ಸರ್ಕಾರಗಳಿಗೆ ಹೆಚ್ಚುವರಿ ಪಡಿತರವನ್ನು ಪೂರೈಕೆ ಮಾಡಿದ್ದೆವು. ಆದರೆ ರಾಜ್ಯ ಸರ್ಕಾರಗಳು ಅದನ್ನು ಪೂರ್ಣ ಪ್ರಮಾಣದಲ್ಲಿ ಬಳಕೆ ಮಾಡಿಲ್ಲ’ ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿದೆ.

ಕೋವಿಡ್‌ ಲಾಕ್‌ಡೌನ್‌ನ ಸಂದರ್ಭದಲ್ಲಿ ತೊಂದರೆಗೆ ಈಡಾಗಿದ್ದ ವಲಸೆ ಕಾರ್ಮಿಕರಿಗೆ ಪಡಿತರ ಒದಗಿಸುವುದಕ್ಕೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿವಾಗಿ ವಿಚಾರಣೆ ನಡೆಸುತ್ತಿದೆ. 

‘ಯಾವುದೇ ಯೋಜನೆ ಅಡಿ ಬರದೇ ಇರುವ ವಲಸೆ ಕಾರ್ಮಿಕರಿಗೆ ನೀಡಲೆಂದೇ 2020ರ ಮೇ ತಿಂಗಳಲ್ಲಿ ಹೆಚ್ಚುವರಿಯಾಗಿ 8 ಲಕ್ಷ ಟನ್‌ ಪಡಿತರವನ್ನು ರಾಜ್ಯ ಸರ್ಕಾರಗಳಿಗೆ ಪೂರೈಕೆ ಮಾಡಲಾಗಿತ್ತು. ಆದರೆ ರಾಜ್ಯ ಸರ್ಕಾರಗಳು ಆ ಪಡಿತರವನ್ನು ಪೂರ್ಣ ಪ್ರಮಾಣದಲ್ಲಿ ವಿತರಣೆ ಮಾಡಿಲ್ಲ. ರಾಜ್ಯ ಸರ್ಕಾರಗಳು 2020ರ ಆಗಸ್ಟ್‌ 31ರ ವೇಳೆಗೆ 2.74 ಲಕ್ಷ ಟನ್‌ ಪಡಿತರವನ್ನಷ್ಟೇ ವಿತರಣೆ ಮಾಡಿದ್ದವು. ರಾಜ್ಯ ಸರ್ಕಾರಗಳು ಒಟ್ಟು 2.8 ಕೋಟಿ ಅಸಂಘಟಿತ ವಲಸೆ ಕಾರ್ಮಿಕರನ್ನು ಗುರುತಿಸಿದ್ದವು. ಅವರಲ್ಲಿ 2.74 ಕೋಟಿ ಜನರಿಗೆ ಪಡಿತರ ವಿತರಿಸಲಾಗಿದೆ’ ಎಂದು ಕೇಂದ್ರ ಸರ್ಕಾರವು ವಿವರಿಸಿದೆ. 2022ರ ಮಾರ್ಚ್‌ವರೆಗೆ ಹಂಚಿಕೆ: ‘ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿಯಲ್ಲಿ ಬರದೇ ಇರುವ, ಆದರೆ ರಾಜ್ಯ ಸರ್ಕಾರಗಳ ವಿವಿಧ ಯೋಜನೆ ಅಡಿ ಪಡಿತರ ಚೀಟಿ ಹೊಂದಿರುವವರಿಗೆ 2022ರ ಮಾರ್ಚ್‌ 31ರವರೆಗೆ ನೀಡಲು ಅಗತ್ಯವಾದ ಪಡಿತರವನ್ನು ಈಗಾಗಲೇ ಹಂಚಿಕೆ ಮಾಡಿದ್ದೇವೆ’ ಎಂದು ಕೇಂದ್ರ ಸರ್ಕಾರವು ತನ್ನ ಪ್ರಮಾಣ ಪತ್ರದಲ್ಲಿ ವಿವರಿಸಿದೆ. 

‘ಮುಕ್ತ ಮಾರುಕಟ್ಟೆ ನೀತಿ ಅಡಿಯಲ್ಲಿ ಪ್ರತಿ ಕೆಜಿ ಅಕ್ಕಿ ಮತ್ತು ಗೋಧಿಯನ್ನು ಕ್ರಮವಾಗಿ ₹ 21 ಮತ್ತು ₹ 22ರ ದರದಲ್ಲಿ ಎಲ್ಲಾ ರಾಜ್ಯಗಳಿಗೆ ಭಾರತೀಯ ಆಹಾರ ನಿಗಮ ವಿತರಿಸಲಿದೆ. ತಮಗೆ ಅಗತ್ಯವಿರುವ ಹೆಚ್ಚುವರಿ ಪಡಿತರವನ್ನು ಪಡೆದುಕೊಳ್ಳಲು, ಸಾಧ್ಯವಿರುವ ಎಲ್ಲಾ ವಿನಾಯಿತಿಗಳನ್ನು ರಾಜ್ಯ ಸರ್ಕಾರಗಳು ಬಳಸಿಕೊಳ್ಳಬೇಕು. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಮತ್ತು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಅಡಿ ಬಾರದೆ ಇರುವ ವಲಸೆ ಕಾರ್ಮಿಕರಿಗೆ ಪಡಿತರ ವಿತರಿಸಲು ತಮ್ಮಲ್ಲಿರುವ ವಿವಿಧ ಪಡಿತರ ಯೋಜನೆಗಳ ಅಡಿ, ಕೇಂದ್ರ ಸರ್ಕಾರದಿಂದ ಪಡಿತರ ಪಡೆದುಕೊಳ್ಳಿ ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದ್ದೇವೆ’ ಎಂದು ಸರ್ಕಾರವು ವಿವರಿಸಿದೆ.

ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ ಅಡಿ ನೀಡಲಾಗುತ್ತಿರುವ ಪಡಿತರದ ಜತೆಗೆ ಹೆಚ್ಚು ವರಿಯಾಗಿ ಪ್ರತಿ ವ್ಯಕ್ತಿಗೆ 5 ಕೆ.ಜಿ. ಪಡಿತರವನ್ನು ಉಚಿತವಾಗಿ ನೀಡಲಾಗುತ್ತಿದೆ. ಮೇ ಮತ್ತು ಜೂನ್‌ ತಿಂಗಳಲ್ಲಿ ವಿತರಿಸಲು ಅಗತ್ಯವಿರುವ ಪಡಿತರವನ್ನು ಈಗಾಗಲೇ ರಾಜ್ಯ ಸರ್ಕಾರಗಳಿಗೆ ವಿತರಿಸಿದ್ದೇವೆ ಎಂದು ಸರ್ಕಾರವು ಹೇಳಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು