ಮಂಗಳವಾರ, ಅಕ್ಟೋಬರ್ 20, 2020
27 °C
ಖಾಸಗಿ ನಿರ್ಣಯ ಮಂಡನೆಗೆ ಆಕ್ಷೇಪ

ಮೈಸೂರು ಲ್ಯಾಂಪ್ಸ್ ಸ್ವತ್ತು ಖಾಸಗಿಯವರಿಗೆ ಪರಭಾರೆ ಇಲ್ಲ: ಮಾಧುಸ್ವಾಮಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮೈಸೂರು ಲ್ಯಾಂಪ್ಸ್‌ ವರ್ಕ್ಸ್ ಸಂಸ್ಥೆಯ ಸ್ವತ್ತು ಹಾಗೂ ಆಸ್ತಿಯನ್ನು ಖಾಸಗಿಯವರಿಗೆ ಮಾರಾಟ ಮಾಡುವ ಯಾವುದೇ ಪ್ರಸ್ತಾವ ಸರ್ಕಾರ ಮುಂದೆ ಇಲ್ಲ’ ಎಂದು ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಸ್ಪಷ್ಟಪಡಿಸಿದರು.

‘ಈ ಬಗ್ಗೆ ಖಾಸಗಿ ನಿರ್ಣಯ ಮಂಡಿಸಿ ಸರ್ಕಾರವನ್ನು ಕಟ್ಟಿ ಹಾಕುವ ಕೆಲಸ ಮಾಡಬೇಡಿ. ನಮಗೆ ಅಂತಹ ಸ್ಥಿತಿ ಬಂದಿಲ್ಲ’ ಎಂದು ವಿರೋಧ ಪಕ್ಷದ ಸದಸ್ಯರನ್ನು ತರಾಟೆಗೆ ತೆಗೆದುಕೊಂಡರು.

‘ಸಂಸ್ಥೆಯ ಸ್ವತ್ತನ್ನು ಸರ್ಕಾರವೇ ಬಳಸಿಕೊಂಡು ಆಸ್ಪತ್ರೆ, ಉದ್ಯಾನ, ಆಟದ ಮೈದಾನ ಸೇರಿದಂತೆ ಇತರೆ ಸಾರ್ವಜನಿಕ ಅಗತ್ಯಗಳಿಗೆ ಬಳಸಿಕೊಳ್ಳಬೇಕು’ ಎಂದು ವಿಧಾನಪರಿಷತ್‌ನಲ್ಲಿ ಕಾಂಗ್ರೆಸ್‌ನ ಬಿ.ಕೆ. ಹರಿಪ್ರಸಾದ್‌ ಮಂಡಿಸಿದ ಖಾಸಗಿ ನಿರ್ಣಯಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಮಾಧುಸ್ವಾಮಿ, ‘ಈ ಬಗ್ಗೆ ಮುಖ್ಯಮಂತ್ರಿಯವರೇ ಸ್ಪಷ್ಟನೆ ನೀಡಿದ್ದಾರೆ. ಆದರೂ ಸರ್ಕಾರವನ್ನು ಮುಜುಗರಕ್ಕೆ ಸಿಲುಕಿಸುವುದು ಸರಿಯಾದ ಕ್ರಮ ಅಲ್ಲ’ ಎಂದರು.

‘ಸಂಸ್ಥೆ ಮುಚ್ಚಿದ್ದರಿಂದ ನೌಕರರ ವೇತನ, ಪಿಂಚಣಿ ಮತ್ತಿತರ ಸೌಲಭ್ಯಗಳ ಕುರಿತ ಪ್ರಕರಣ ಹೈಕೋರ್ಟ್‌ನಲ್ಲಿದೆ.
ಈ ಕಾರಣಕ್ಕೆ ಸರ್ಕಾರಿ ಸ್ವಾಮ್ಯದ ಎಂಎಂಎಲ್‌ಗೆ ವಹಿಸುವ ಬಗ್ಗೆ ಸಂಪುಟದಲ್ಲಿ ಚರ್ಚೆ ನಡೆಸಿತ್ತು ನಿಜ‌’ ಎಂದೂ ಹೇಳಿದರು.

‘ಇಲ್ಲಿನ 26 ಎಕರೆ ಪ್ರದೇಶ ಹಸಿರುಮಯವಾಗಿದೆ. ಅದನ್ನು ಅದೇ ರೀತಿ ಉಳಿಸಿಕೊಳ್ಳಬೇಕು. ಜಯದೇವ ಮಾದರಿಯ ಆಸ್ಪತ್ರೆ ಮಾಡಿಯಾದರೂ ಸಾರ್ವಜನಿಕ ಸ್ವತ್ತಾಗಿ ಉಳಿಸಬೇಕು. ಮೈಸೂರು ಮಹಾರಾಜರು ನೀಡಿದ ಸ್ಥಳ ಸರ್ಕಾರಿ ಸ್ವತ್ತಾಗಿ ಉಳಿಸಲೇಬೇಕು’ ಎಂದು ಹರಿಪ್ರಸಾದ್‌ ಹೇಳಿದರು.

‘ಪೀಣ್ಯ ಬಳಿಯ ಬಸವೇಶ್ವರ ಬಸ್ ನಿಲ್ದಾಣ ಇರುವ ಸ್ಥಳ ವ್ಯವಸ್ಥಿತವಾಗಿಲ್ಲ. ಅವಕಾಶ ಇದ್ದರೆ ಈ ಸ್ಥಳ ಬಳಸಿಕೊಳ್ಳಿ ಎಂಬ ಸಲಹೆ ಬಂದಿತ್ತು. ಯಾವ ನಿರ್ಧಾರವನ್ನೂ ಕೈಗೊಂಡಿಲ್ಲ’ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಅದಕ್ಕೆ ಜೆಡಿಎಸ್‌ನ ಬಸವರಾಜ ಹೊರಟ್ಟಿ, ‘ಸಂಪುಟದಲ್ಲಿ ಮತ್ತೊಮ್ಮೆ ಚರ್ಚಿಸಿ ಖಾಸಗಿಯವರಿಗೆ ನೀಡುವುದಿಲ್ಲವೆಂದು ಅಧಿಕೃತ ಘೋಷಿಸಿ’ ಎಂದು ಸಲಹೆ ಕೊಟ್ಟರು.

ಕಾಂಗ್ರೆಸ್‌ನ ಮೋಹನ್ ಕೊಂಡಜ್ಜಿ, ‘ಅಶೋಕ ಹೋಟೆಲ್ ಮಾರಾಟವಾದಾಗ ಯಾರಿಂದಲೂ ತಡೆಯಲಾಗಲಿಲ್ಲ. ಕೇಂದ್ರ ಸಚಿವ ಅನಂತ್ ಕುಮಾರ್, ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಉಳಿಸಿಕೊಳ್ಳಲಾಗಲಿಲ್ಲ. ಅಂತಹ ಸ್ಥಿತಿ ಬರಬಾರದು’ ಎಂದರು. ‘ನಿರ್ಣಯ ಮಂಡನೆ ಆಗಿದೆ ಅಷ್ಟೆ’ ಎಂದು ಸಭಾಪತಿ ಪ್ರತಾಪ್‌ ಚಂದ್ರ ಶೆಟ್ಟಿ ಚರ್ಚೆಗೆ ಅಂತ್ಯವಾಡಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು