ಶನಿವಾರ, ಜನವರಿ 16, 2021
24 °C
ಸುಪ್ರೀಂ ಕೋರ್ಟ್‌ಗೆ ಅರ್ಜಿ

ಪ್ರಮಾದವಶಾತ್‌ ಐಐಟಿ ಸೀಟು ಕಳೆದುಕೊಂಡ ವಿದ್ಯಾರ್ಥಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಪ್ರತಿಷ್ಠಿತ ಐಐಟಿ ಬಾಂಬೆಯಲ್ಲಿ ಎಲೆಕ್ಟ್ರಿಕಲ್‌ ಎಂಜಿನಿಯರಿಂಗ್‌ ಸೀಟು ಪಡೆಯುವ ಕನಸು ಹೊಂದಿದ್ದ ವಿದ್ಯಾರ್ಥಿಯೊಬ್ಬ, ಪ್ರವೇಶ ಪ್ರಕ್ರಿಯೆ ಸಂದರ್ಭದಲ್ಲಿ ಪ್ರಮಾದವಶಾತ್‌ ಸೀಟು ಕಳೆದುಕೊಂಡಿದ್ದಾರೆ. ಇದೀಗ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿರುವ ಇವರು, ಪ್ರವೇಶಕ್ಕೆ ಅನುಮತಿ ನೀಡುವಂತೆ ಸಂಸ್ಥೆಗೆ ಸೂಚಿಸಿ ನಿರ್ದೇಶನ ಹೊರಡಿಸುವಂತೆ ಮನವಿ ಸಲ್ಲಿಸಿದ್ದಾರೆ.

ಆಗ್ರಾ ಮೂಲದ ಸಿದ್ಧಾಂತ್‌ ಬತ್ರಾ, ಜೆಇಇ ಅಡ್ವಾನ್ಸ್ಡ್‌ ಭಾರತದಲ್ಲೇ 270ನೇ ರ್‍ಯಾಂಕ್‌ ಪಡೆದಿದ್ದರು. ಐಐಟಿ ಬಾಂಬೆಯಲ್ಲಿ ಸೀಟು ಮೀಸಲಿಡುವ ಸಂದರ್ಭದಲ್ಲಿ ತಪ್ಪಾದ ಲಿಂಕ್‌ ಒಂದನ್ನು ಒತ್ತಿದ್ದ ಕಾರಣ ಮೀಸಲಿಟ್ಟಿದ್ದ ಸೀಟನ್ನು ಹಿಂಪಡೆಯಲಾಗಿತ್ತು. ತಪ್ಪು ಅರಿವಿಗೆ ಬಂದ ಬಳಿಕ, ಬಾಂಬೆ ಹೈಕೋರ್ಟ್‌ನಲ್ಲಿ ಬತ್ರಾ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಪರಿಗಣಿಸುವಂತೆ ಹೈಕೋರ್ಟ್‌ ಐಐಟಿಗೆ ನಿರ್ದೇಶಿಸಿತ್ತು. ಸಂಸ್ಥೆಯು ಅರ್ಜಿಯನ್ನು ಪರಿಗಣಿಸಲಿದೆ ಎಂದು ತಿಳಿಸಿದ ಕಾರಣ, ನ.23ರಂದು ಮುಖ್ಯನ್ಯಾಯಮೂರ್ತಿ ದೀಪಾಂಕರ್‌ ದತ್ತಾ ಹಾಗೂ ನ್ಯಾಯಮೂರ್ತಿ ಜಿ.ಎಸ್‌.ಕುಲಕರ್ಣಿ ಅವರಿದ್ದ ವಿಭಾಗೀಯ ಪೀಠವು, ಅರ್ಜಿಯನ್ನು ಇತ್ಯರ್ಥಗೊಳಿಸಿ ಆದೇಶ ಹೊರಡಿಸಿತ್ತು.

ಆದರೆ ನಂತರದಲ್ಲಿ ‘ಈ ಹಂತದಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಕೋರ್ಸ್‌ನ ಎಲ್ಲ ಸೀಟುಗಳೂ ಭರ್ತಿಯಾಗಿದ್ದು. ಪ್ರವೇಶಾತಿ ನಿಯಮಗಳನ್ನು ಪಾಲಿಸಬೇಕಾಗಿದೆ. ಮುಂದಿನ ವರ್ಷ ಮತ್ತೆ ಜೆಇಇ(ಅಡ್ವಾನ್ಸ್ಡ್‌) ಬರೆದು ಕೋರ್ಸ್‌ಗೆ ಅರ್ಜಿ ಸಲ್ಲಿಸಬಹುದು’ ಎಂದು ಐಐಟಿ ತಿಳಿಸಿತ್ತು. ಹೀಗಾಗಿ ಪ್ರವೇಶಕ್ಕೆ ಅವಕಾಶ ನೀಡುವಂತೆ ಕೋರಿ ಐಐಟಿಗೆ ನಿರ್ದೇಶಿಸಬೇಕು ಎಂದು ಬತ್ರಾ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

‘ಮಾನವೀಯ ದೃಷ್ಟಿಯಿಂದ ನನ್ನ ಮನವಿಯನ್ನು ಐಐಟಿ ಪರಿಗಣಿಸಬೇಕು. ನನ್ನ ನಷ್ಟವನ್ನು ಭರ್ತಿ ಮಾಡಲು ಒಂದು ಹೆಚ್ಚುವರಿ ಸೀಟನ್ನು ತನಗಾಗಿ ಸೃಷ್ಟಿಸಬೇಕು. ನಾನು ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡೆ. ತಾಯಿಯೇ ನನ್ನನ್ನು ಸಾಕಿದ್ದರು. 2018ರಲ್ಲಿ ಅವರೂ ಮೃತಪಟ್ಟರು. ನಾನು ಇದೀಗ ಅಜ್ಜ–ಅಜ್ಜಿಯೊಂದಿಗೆ ವಾಸಿಸುತ್ತಿದ್ದೇನೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ವೇಳೆಯಲ್ಲಿ, ‘ಫ್ರೀಜ್‌’ ಎನ್ನುವ ಆಯ್ಕೆ ಬಂದಿತ್ತು. ಇದನ್ನು ನಾನು ಒತ್ತಿದ್ದೆ. ಇದು ಸೀಟು ಖಾತರಿ ಪಡಿಸುವ ಆಯ್ಕೆ ಹಾಗೂ ಪ್ರವೇಶಾತಿ ಪೂರ್ಣಗೊಳ್ಳುತ್ತದೆ ಎಂದುಕೊಂಡಿದ್ದೆ. ಅ.31ರಂದು ಐಐಟಿ ವೆಬ್‌ಸೈಟ್‌ ನೋಡುತ್ತಿರುವ ಸಂದರ್ಭದಲ್ಲಿ, ಸೀಟು ಹಿಂಪಡೆಯುವ ಕುರಿತ ಲಿಂಕ್‌ ಒಂದು ಬಂದಿತ್ತು. ಪ್ರಮಾದವಶಾತ್‌ ಅವರನ್ನು ನಾನು ಒತ್ತಿದ್ದೆ. ಸೀಟು ಹಿಂಪಡೆಯುವ ಉದ್ದೇಶವೇ ನನಗೆ ಇರಲಿಲ್ಲ’ ಎಂದು ಅರ್ಜಿಯಲ್ಲಿ ಬತ್ರಾ ಹೇಳಿದ್ದಾರೆ.

ನವೆಂಬರ್‌ನಲ್ಲಿ ವೆಬ್‌ಸೈಟ್‌ನಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಅಂತಿಮಪಟ್ಟಿಯನ್ನು ಹಾಕಲಾಗಿತ್ತು. ಇದರಲ್ಲಿ ಬತ್ರಾ ಅವರ ಹೆಸರು ಇರಲಿಲ್ಲ. ಸೀಟು ಹಿಂಪಡೆಯುವ ಆಯ್ಕೆ ಎರಡು ಹಂತವಿದೆ. ತಪ್ಪಿ ಇದನ್ನು ಆಯ್ಕೆ ಮಾಡಲು ಸಾಧ್ಯವಾಗದಂತೆ ಇದನ್ನು ರೂಪಿಸಲಾಗಿದೆ ಎಂದು ಆದೇಶದಲ್ಲಿ ಐಐಟಿ ಉಲ್ಲೇಖಿಸಿದೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು