ಸ್ವದೇಶಿ ಕಂಪನಿ ಲಸಿಕೆ ಅನುಮೋದನೆಗೆ ವಿಳಂಬ: ಟ್ವಿಟ್ಟರ್ನಲ್ಲಿ ಸ್ವಾಮಿ ಟೀಕೆ

ನವದೆಹಲಿ: ವಿದೇಶಿ ಕಂಪನಿಗಳ ಕೋವಿಡ್ ಲಸಿಕೆಗಳಿಗೆ ಅನುಮೋದನೆ ಸಿಕ್ಕಿದ್ದು ದೇಶೀಯ ಕಂಪನಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೋವಿಡ್ ಲಸಿಕೆಗೆ ಅನುಮೋದನೆ ವಿಳಂಬವಾಗುತ್ತಿರುವುದಕ್ಕೆ ಬಿಜೆಪಿ ನಾಯಕ, ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಟ್ವಿಟ್ಟರ್ನಲ್ಲಿ ವ್ಯಂಗ್ಯವಾಗಿ ಟೀಕೆ ಮಾಡಿದ್ದಾರೆ.
ಸ್ವದೇಶಿ ಕಂಪನಿ ಭಾರತ್ ಬಯೋಟೆಕ್ ಮೂರನೇ ಹಂತದಲ್ಲಿ 13,000 ಜನರ ಮೇಲೆ ತನ್ನ ಕೋವಿಡ್ ಲಸಿಕೆ ಪ್ರಯೋಗ ನಡೆಸಿದೆ ಎಂದು ಕೇಳಿ ನಿಜಕ್ಕೂ ಶಾಕ್ ಆಯಿತು. ಕೇವಲ 1,200 ಜನರ ಮೇಲೆ ಲಸಿಕೆ ಪ್ರಯೋಗ ನಡೆಸಿದ ವಿದೇಶಿ ಕಂಪನಿಯು ಅದಾಗಲೇ ಕಾಂಟ್ರ್ಯಾಕ್ಟ್ ಪಡೆದುಕೊಂಡಿದೆ. ಆದರೆ, ಸ್ವದೇಶಿ ಕಂಪನಿ ಲಸಿಕೆ ಅನುಮೋದನೆ ಪಡೆಯಲೂ ಸಹ ಹೆಣಗಾಡುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.
I am shocked to learn the Bharat Biotech a swadeshi company has already done trials on 13, 000 persons in phase III . The Angrez vaccine has been tested only on 1200 persons. Yet the Angrez has got the contract and swadeshi in the ditch.
— Subramanian Swamy (@Swamy39) January 2, 2021
ಆಕ್ಸ್ಫರ್ಡ್ ತಯಾರಿಸಿರುವ ಕೋವಿಶೀಲ್ಡ್ ಲಸಿಕೆ ತುರ್ತು ಬಳಕೆಗೆ ತಜ್ಞರ ಸಮಿತಿ ಶಿಫಾರಸಿನ ಮೇಲೆ ಈಗಾಗಲೇ ಅನುಮೋದನೆ ಸಿಕ್ಕಿದೆ. ಆದರೆ, ಹೈದರಾಬಾದ್ ಮೂಲದ ಸ್ವದೇಶಿ ಕಂಪನಿ ಭಾರತ್ ಬಯೋಟೆಕ್ ಅಭಿವೃದ್ಧಿಪಡಿಸಿರುವ ಕೊವ್ಯಾಕ್ಸಿನ್ ಲಸಿಕೆ ತುರ್ತು ಬಳಕೆ ಅನುಮೋದನೆಗೆ ಈಗಷ್ಟೇ ಶಿಫಾರಸು ಮಾಡಲಾಗಿದೆ.
ಬಿಜೆಪಿ ನಾಯಕನಾಗಿದ್ದರೂ ಸಹ ಸುಬ್ರಮಣಿಯನ್ ಸ್ವಾಮಿ ಸಮಯ ಬಂದಾಗಲೆಲ್ಲ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಲೇ ಇರುತ್ತಾರೆ. ಡಿಸೆಂಬರ್ನಲ್ಲಿ ಪೆಟ್ರೋಲ್ ದರ ₹90ರ ಗಡಿ ದಾಟಿದಾಗಲೂ ಇದು ಜನರ ಮೇಲೆ ಸರ್ಕಾರ ನಡೆಸುತ್ತಿರುವ ಐತಿಹಾಸಿಕ ಶೋಷಣೆ ಎಂದು ಟೀಕಿಸಿದ್ದರು.
ಪ್ರಜಾವಾಣಿ ಫೇಸ್ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.