ಮಂಗಳವಾರ, ಅಕ್ಟೋಬರ್ 19, 2021
24 °C

ನದಿ ತಿರುವು ಯೋಜನೆಗಳಿಂದ ಉತ್ತಮ ಭವಿಷ್ಯವಿಲ್ಲ: ಜಲತಜ್ಞ ರಾಜೇಂದ್ರ ಸಿಂಗ್‌

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಕೇಂದ್ರಪಾರ (ಒಡಿಶಾ): ಬೃಹತ್‌ ಕುಡಿಯುವ ನೀರಿನ ಯೋಜನೆಗಾಗಿ ನದಿಯನ್ನು ತಿರುಗಿಸಲು ಹೊರಟಿರುವ ಜಿಲ್ಲಾಡಳಿತದ ಕ್ರಮ ವಿರೋಧಿಸಿ ಇಲ್ಲಿನ ‘ಖರಸ್ರೋತಾ ಬಚಾವೊ ಸಂಗ್ರಾಮ್ ಸಮಿತಿ‘ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿರುವ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ ಜಲತಜ್ಞ ರಾಜೇಂದ್ರ ಸಿಂಗ್‌, ‘ಇಂಥ ಉಪಕ್ರಮಗಳು ಭವಿಷ್ಯದಲ್ಲಿ ವಿನಾಶಕಾರಿ ಬೆಳವಣಿಗೆಗೆ ಕಾರಣವಾಗಬಹುದು‘ ಎಂದು ಎಚ್ಚರಿಸಿದ್ದಾರೆ.

ಮಂಗಳವಾರ ಸಮಿತಿ ಸದಸ್ಯರೊಂದಿಗೆ ಕೇಂದ್ರಪಾರಾದ ರಾಜಕಾನಿಕಾ ಬ್ಲಾಕ್‌ನ ಖರಸ್ರೋತಾ ನದಿ ದಂಡೆಗೆ ಭೇಟಿ ನೀಡಿದ ರಾಜೇಂದ್ರ ಸಿಂಗ್‌ ಅವರು ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದರು.

‘ಜನರ ನೀರಿನ ಬೇಡಿಕೆ ಪೂರೈಸುವ ವಿಷಯದಲ್ಲಿ ಸರ್ಕಾರ ಕಣ್ಮುಚ್ಚಿ ಕುಳಿತಿದೆ‘ ಎಂದು ಆರೋಪಿಸಿದ ರಾಜೇಂದ್ರ ಸಿಂಗ್‌, ಸರ್ಕಾರ ಬೃಹತ್ ಕೈಗಾರಿಕೆಗಳಿಗೆ ಹೆಚ್ಚು ನೀರು ಪೂರೈಸಲು ಆಸಕ್ತಿ ತೋರುವ ಮೂಲಕ, ಮಾಲಿನ್ಯ ಸೃಷ್ಟಿಗೆ ಅನುಕೂಲ ಮಾಡಿಕೊಡುತ್ತಿದೆ‘ ಎಂದು ದೂರಿದರು.

‘ನೆರೆಯ ಜಿಲ್ಲೆಯ ಜನರಿಗೆ ನೀರಿನ ಅಗತ್ಯವಿದೆ ಎನ್ನುವುದು ನಿಜ. ಆದರೆ, ಅದಕ್ಕೆ ಖರಸ್ರೋತಾ ನದಿಯ ನೀರನ್ನು ತಿರುಗಿಸುವುದು ಪರಿಹಾರವಲ್ಲ. ನದಿ ನೀರು ಸ್ವಾಭಾವಿಕವಾಗಿ ಹರಿಯುವುದನ್ನು ರಕ್ಷಿಸಬೇಕಾಗಿದೆ‘ ಎಂದು ಸಿಂಗ್ ಹೇಳಿದರು.

‘ಈ ಬೃಹತ್ ಕುಡಿಯುವ ನೀರಿನ ಯೋಜನೆಗಾಗಿ ನದಿಯ ಸಿಹಿ ನೀರನ್ನು ಬಳಸುತ್ತಿರುವುದರಿಂದ, ನದಿಯ ತೀರದಲ್ಲಿರುವ ಗ್ರಾಮಸ್ಥರು ಸವಳು ನೀರಿನ ಸಮಸ್ಯೆ ಎದುರಿಸುವಂತಾಗಿದೆ‘ ಎಂದರು.

ಬ್ರಹ್ಮಣಿ ನದಿಯ ಉಪನದಿಯಾಗಿರುವ ಖರಸ್ರೋತಾ ನದಿಯಿಂದ ಭದ್ರಾಕ್‌ ನಗರಕ್ಕೆ ಪೈಪ್ ಮೂಲಕ ನೀರು ಹರಿಸುವ ₹ 892 ಕೋಟಿ ಯೋಜನೆಯನ್ನು ರದ್ದುಗೊಳಿಸಬೇಕೆಂಬ ಒತ್ತಾಯ ಆರಂಭವಾದಾಗಿನಿಂದ, ರಜಕನಿಕಾ ಪಟ್ಟಣ ಹಲವು ಪ್ರತಿಭಟನೆ, ಸಂಘರ್ಷಗಳಿಗೆ ಸಾಕ್ಷಿಯಾಗಿದೆ. 

ಈ ಯೋಜನೆಯಿಂದಾಗಿ ನದಿಯಲ್ಲಿ ನೀರಿನ ಮಟ್ಟ ಕಡಿಮೆಯಾಗಲಿದ್ದು, ಇದರಿಂದ ಈ ಭಾಗದ ಕೃಷಿ ಚಟುವಟಿಕಗಳಿಗೆ ನೀರಿನ ಕೊರತೆಯಾಗುತ್ತದೆ. ಕೃಷಿಯನ್ನೇ ನಂಬಿ ಬದುಕುತ್ತಿರುವ ಜನರಿಗೆ ಇದರಿಂದ ತೀವ್ರ ತೊಂದರೆಯಾಗಲಿದೆ ಎಂಬ ಕಾರಣಕ್ಕೆ ಜನರು ಈ ಯೋಜನೆಯ ಬಗ್ಗೆ ಆತಂಕದಿಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು