ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ ಮಂದಿರಕ್ಕೆ ಗುಲಾಬಿ ಮರಳುಗಲ್ಲು: ಅಭಯಾರಣ್ಯದಲ್ಲಿ ಗಣಿಗಾರಿಕೆ

ಅನುಮೋದನೆ ನೀಡಿದ ರಾಜಸ್ಥಾನದ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ
Last Updated 3 ಫೆಬ್ರುವರಿ 2021, 14:24 IST
ಅಕ್ಷರ ಗಾತ್ರ

ಜೈಪುರ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಅಗತ್ಯವಾಗಿರುವವಿಶೇಷ ಗುಲಾಬಿ ಮರಳುಗಲ್ಲುಗಳ ಗಣಿಗಾರಿಕೆಗೆ ಅವಕಾಶ ಕಲ್ಪಿಸುವ ಪ್ರಸ್ತಾವನೆಗೆ ರಾಜಸ್ಥಾನದ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಅನುಮೋದನೆ ನೀಡಿದೆ.

ಭರತಪುರ ಬಾಂಧ್‌ ಬರೆಥಾ ಅಭಯಾರಣ್ಯದ ಬಾನ್ಸಿ ಪಹರಪುರ ಪ್ರದೇಶವನ್ನು ಈ ವಿಶೇಷ ಕಲ್ಲುಗಳ ಗಣಿಗಾರಿಕೆ ನಡೆಸಲು ಅವಕಾಶ ಕಲ್ಪಿಸಲು ಉದ್ದೇಶಿಸಲಾಗಿದೆ. ಸ್ಥಾಯಿ ಸಮಿತಿ ಅನುಮೋದನೆ ನೀಡಿರುವುದರಿಂದ ಗಣಿಗಾರಿಕೆಗಾಗಿ ಅಭಯಾರಣ್ಯದಲ್ಲಿನಬಾನ್ಸಿ ಪಹರಪುರ ಪ್ರದೇಶವನ್ನು ಡಿನೋಟಿಫೈ ಮಾಡುವ ಪ್ರಸ್ತಾವವವನ್ನು ಮುಖ್ಯಮಂತ್ರಿ ಅಶೋಕ್‌ ಗೆಹ್ಲೋಟ್‌ ಅಧ್ಯಕ್ಷರಾಗಿರುವ ರಾಜಸ್ಥಾನ ವನ್ಯಜೀವಿ ಮಂಡಳಿ ಮಂದೆ ಮಂಡಿಸಲಾಗುವುದು ಎಂದು ಮುಖ್ಯ ವನ್ಯಜೀವಿ ವಾರ್ಡನ್‌ ಮೋಹನ್‌ ಮೀನಾ ತಿಳಿಸಿದ್ದಾರೆ.

ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿದ ಬಳಿಕ ಈ ಪ್ರಸ್ತಾವನೆಯನ್ನು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆಗೆ ಕಳುಹಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಮಂದಿರಕ್ಕಾಗಿ ಹಲವು ವರ್ಷಗಳಿಂದ ಭರತಪುರದ ಬಾನ್ಸಿ ಪಹರಪುರ ಪ್ರದೇಶದಿಂದ ಸಾವಿರಾರು ಟನ್‌ಗಳ ವಿಶೇಷ ಗುಲಾಬಿ ಕಲ್ಲುಗಳ ಗಣಿಗಾರಿಕೆ ನಡೆಸಲಾಗಿದೆ. ಆದರೆ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಕಲ್ಲುಗಳ ಅಗತ್ಯವಿದೆ.

ವಿಭಿನ್ನ ಮತ್ತು ವಿಶೇಷವಾಗಿರುವ ಗುಲಾಬಿ ಕಲ್ಲುಗಳ ಕೊರತೆಯಾಗಲಿದೆ ಎಂದು ಅಯೋಧ್ಯೆಯಲ್ಲಿನ ರಾಮ ಮಂದಿರ ನಿರ್ಮಾಣದ ಸಂಘಟಕರು ಮಾಹಿತಿ ನೀಡಿದ್ದಾರೆ. ಈಗಾಗಲೇ ಈ ವಿಶೇಷ ಗುಲಾಬಿ ಕಲ್ಲುಗಳನ್ನು ವಿವಿಧ ರೀತಿಯ ವಿನ್ಯಾಸಗಳೊಂದಿಗೆ ಕೆತ್ತಿ ಸಿದ್ಧಪಡಿಸಲಾಗಿದೆ. ಈ ವಿಶೇಷ ಕಲ್ಲುಗಳೊಂದಿಗೆ ಕಡಿಮೆ ದರ್ಜೆಯ ಬೇರೆ ಕಲ್ಲುಗಳನ್ನು ಜೋಡಿಸುವುದರಿಂದ ಸಮಸ್ಯೆಯಾಗುತ್ತದೆ. ಬಾನ್ಸಿ ಪಹರಪುರ ಪ್ರದೇಶದ ಕಲ್ಲುಗಳ ಜತೆ ಧೋಲಪುರದ ಕಲ್ಲುಗಳು ಹೊಂದುವುದಿಲ್ಲ ಎಂದು ಸಂಘಟಕರು ತಿಳಿಸಿದ್ದಾರೆ.

ಬಾನ್ಸಿ ಪಹರಪುರ ಪ್ರದೇಶವನ್ನು ಡಿನೋಟಿಫೈ ಮಾಡುವುದಕ್ಕೂ ರಾಮ ಮಂದಿರಕ್ಕೂ ಯಾವುದೇ ರೀತಿ ಸಂಬಂಧ ಇಲ್ಲ ಎಂದು ಅಧಿಕಾರಿಗಳು ಪ್ರತಿಪಾದಿಸಿದ್ದಾರೆ.

‘ದೇಶದಾದ್ಯಂತ ಈ ಕಲ್ಲುಗಳಿಗೆ ಬೇಡಿಕೆ ಇದೆ. ಕೇವಲ ರಾಮ ಮಂದಿರಕ್ಕೆ ಕಲ್ಲುಗಳ ಅಗತ್ಯವಿದೆ ಎಂದು ಡಿನೋಟಿಫೈ ಮಾಡುತ್ತಿಲ್ಲ. ಜತೆಗೆ, ಈ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ವ್ಯಾಪಕವಾಗಿ ನಡೆಯುತ್ತಿದೆ. ಅಲ್ಲಿ ಈಗ ಅರಣ್ಯವೇ ಉಳಿದುಕೊಂಡಿಲ್ಲ. ಅಭಯಾರಣ್ಯದಿಂದ ಈ ಪ್ರದೇಶವನ್ನು ಡಿನೋಟಿಫೈ ಮಾಡಿದರೆ ಸರ್ಕಾರಕ್ಕೂ ಆದಾಯ ಬರುತ್ತದೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT