ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ಆಯೋಗದ ಆದೇಶ ಪ್ರಶ್ನಿಸಿದ ಠಾಕ್ರೆ ಬಣ; ನಾಳೆ ಸುಪ್ರೀಂ ಕೋರ್ಟ್ ವಿಚಾರಣೆ

'ಶಿಂದೆ ಬಣವೇ ನಿಜವಾದ ಶಿವಸೇನಾ'
Last Updated 21 ಫೆಬ್ರುವರಿ 2023, 7:31 IST
ಅಕ್ಷರ ಗಾತ್ರ

ನವದೆಹಲಿ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ ಶಿಂದೆ ಬಣವೇ ನಿಜವಾದ ಶಿವಸೇನಾ ಎಂದು ಘೋಷಿಸಿರುವ ಹಾಗೂ ಆ ಬಣಕ್ಕೆ ಪಕ್ಷದ ಗುರುತನ್ನು ನೀಡಿರುವ ಚುನಾವಣಾ ಆಯೋಗದ ತೀರ್ಪು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಬಣ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಬುಧವಾರ (ಫೆಬ್ರುವರಿ 22) ನಡೆಸುವುದಾಗಿ ಸುಪ್ರೀಂ ಕೋರ್ಟ್‌ ಹೇಳಿದೆ.

ಠಾಕ್ರೆ ಬಣದ ಪರವಾಗಿ ನ್ಯಾಯಾಯದಲ್ಲಿ ಹಾಜರಿದ್ದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಕೃಷ್ಣ ಮುರಾರಿ ಹಾಗೂ ಪಿ.ಎಸ್‌. ನರಸಿಂಹ ಅವರನ್ನೊಳಗೊಂಡ ಪೀಠದೆದುರು ಈ ವಿಚಾರ ಪ್ರಸ್ತಾಪಿಸಿದರು. 'ಚುನಾವಣಾ ಆಯೋಗದ ಆದೇಶಕ್ಕೆ ತಡೆ ನೀಡದಿದ್ದರೆ, ಅವರು (ಶಿಂದೆ ಬಣ) ಪಕ್ಷದ ಚಿಹ್ನೆ ಮತ್ತು ಬ್ಯಾಂಕ್‌ ಖಾತೆಗಳನ್ನು ವಶಕ್ಕೆ ಪಡೆಯುತ್ತಾರೆ. ಹಾಗಾಗಿ ಇದನ್ನು ಸಾಂವಿಧಾನಿಕ ಪೀಠವು ಪರಿಗಣಿಸಬೇಕು' ಎಂದು ಕೋರಿದರು.

ಪ್ರಕರಣಕ್ಕೆ ಸಂಬಂಧಿಸಿದ ಕಡತಗಳನ್ನು ಪರಿಶೀಲಿಸಬೇಕಿದೆ ಎಂದಿರುವ ಪೀಠವು, ವಿಚಾರಣೆಯನ್ನು ಬುಧವಾರ 3.30ಕ್ಕೆ ಮುಂದೂಡಿದೆ.

ಏಕನಾಥ ಶಿಂದೆ ಬಣವೇ ನಿಜವಾದ ಶಿವಸೇನಾ ಎಂದಿರುವ ಚುನಾವಣಾ ಆಯೋಗ, ಪಕ್ಷ ಮೂಲ ಗುರುತಾದ ಬಿಲ್ಲು ಮತ್ತು ಬಾಣವನ್ನು ಆ ಬಣಕ್ಕೆ ಫೆಬ್ರುವರಿ 17ರಂದು (ಶುಕ್ರವಾರ) ನಿಗದಿ ಮಾಡಿದೆ. ಅಷ್ಟಲ್ಲದೆ, ಪಕ್ಷದ ಮೇಲಿನ ಹಿಡಿತದ ಸಲುವಾಗಿ ಉಭಯ ಬಣಗಳು ನಡೆಸಿದ ಹೋರಾಟದ ಕುರಿತು 78 ಪುಟಗಳ ವರದಿ ಮಾಡಿದ್ದು, ಠಾಕ್ರೆ ಬಣಕ್ಕೆ ಈಗಾಗಲೇ ನೀಡಿರುವ 'ಉರಿಯುವ ಜ್ವಾಲೆ' ಗುರುತನ್ನು ರಾಜ್ಯದಲ್ಲಿನ ಉಪ ಚುನಾವಣೆಗಳು ಮುಗಿಯುವವರೆಗೂ ಬಳಸಲು ಅನುಮತಿ ನೀಡಿದೆ.

2019ರ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಗೆದ್ದ 55 ವಿಜೇತ ಅಭ್ಯರ್ಥಿಗಳ ಪೈಕಿ ಶೇ 76 ಮಂದಿ ಏಕನಾಥ್ ಶಿಂಧೆ ಅವರನ್ನು ಬೆಂಬಲಿಸುತ್ತಿದ್ದಾರೆ. ಉದ್ಧವ್ ಠಾಕ್ರೆ ಪರವಾಗಿ ಶೇ. 23.5 ಮಂದಿ ಮಾತ್ರ ಇದ್ದಾರೆ ಎಂದೂ ಆಯೋಗ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT