ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌: ಅನಾಥ ಮಕ್ಕಳಿಗೆ ನೆರವು ನೀಡಲು ಕೇಂದ್ರಕ್ಕೆ ಸಮಯ ನೀಡಿದ ‘ಸುಪ್ರೀಂ‘

Last Updated 7 ಜೂನ್ 2021, 11:50 IST
ಅಕ್ಷರ ಗಾತ್ರ

ನವದೆಹಲಿ: ಕೋವಿಡ್‌ ಸೋಂಕಿನಿಂದಾಗಿ ತಂದೆ–ತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳಿಗೆ ಪಿ.ಎಂ–ಕೇರ್ಸ್‌ ನಿಧಿಯಡಿ ನೆರವು ಒದಗಿಸುವ ಯೋಜನೆ ಕುರಿತ ಕಾರ್ಯಸೂಚಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ಇನ್ನಷ್ಟು ಕಾಲಾವಕಾಶವನ್ನು ಸುಪ್ರೀಂ ಕೋರ್ಟ್‌ ಸೋಮವಾರ ನೀಡಿತು.

ಪಶ್ಚಿಮ ಬಂಗಾಳ ಮತ್ತು ದೆಹಲಿ ಈ ನಿಟ್ಟಿನಲ್ಲಿ ಅಗತ್ಯವಿರುವ ಸಹಕಾರವನ್ನು ನೀಡುತ್ತಿಲ್ಲ. ಅನಾಥ ಮಕ್ಕಳ ಕುರಿತ ಮಾಹಿತಿಯನ್ನು ಇನ್ನೂ ಒದಗಿಸಿಲ್ಲ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ರಕ್ಷಣೆ ಆಯೋಗ (ಎನ್‌ಸಿಪಿಸಿಆರ್‌) ಇದೇ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್‌ ಪೀಠಕ್ಕೆ ಮಾಹಿತಿ ನೀಡಿತು.

ನ್ಯಾಯಮೂರ್ತಿಗಳಾದ ಎಲ್‌.ಎನ್‌.ರಾವ್‌ ಮತ್ತು ಅನಿರುದ್ಧ ಬೋಸ್‌ ಅವರಿದ್ದ ಪೀಠದ ಎದುರು ಕೇಂದ್ರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್ ಐಶ್ವರ್ಯಾ ಭಾಟಿ ಅವರು, ಪಿಎಂ ಕೇರ್ಸ್‌ ನೆರವು ಯೋಜನೆಯ ರೂಪುರೇಷೆ ಅಂತಿಮಗೊಳಿಸಲು ರಾಜ್ಯ ಸರ್ಕಾರಗಳ ಜೊತೆಗೆ ಮಾತುಕತೆ ನಡೆದಿದೆ ಎಂದು ತಿಳಿಸಿದರು.

ಎನ್‌ಸಿಪಿಸಿಆರ್‌ ಅನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ.ಎಂ.ನಟರಾಜ್‌ ಅವರು, ಪಶ್ಚಿಮ ಬಂಗಾಳ ಮತ್ತು ದೆಹಲಿ ವಿಷಯದಲ್ಲಿ ಸಮಸ್ಯೆಗಳಿವೆ. ಬಾಲ ಸ್ವರಾಜ್‌ ಯೋಜನೆ ಸೇರಿದಂತೆ ಕೆಲವೊಂದು ಅಂಕಿ ಅಂಶಗಳನ್ನು ಈ ಸರ್ಕಾರಗಳು ಒದಗಿಸುತ್ತಿಲ್ಲ ಎಂದು ತಿಳಿಸಿದರು.

ದೆಹಲಿ ಸರ್ಕಾರವನ್ನು ಪ್ರತಿನಿಧಿಸಿದ್ದ ವಕೀಲ ಚಿರಾಗ್‌ ಶ್ರಾಫ್‌ ಅವರು, ದೆಹಲಿಯಲ್ಲಿ ಈ ಅಂಕಿ ಅಂಶವನ್ನು ಮಕ್ಕಳ ಕಲ್ಯಾಣ ಸಮಿತಿ (ಸಿಡಬ್ಲ್ಯೂಸಿ) ಒದಗಿಸಲಿದೆ. ಉಳಿದೆಡೆ ಸಂಬಂಧಿತ ಇಲಾಖೆಗಳು ಒದಗಿಸಲಿವೆ ಎಂದರು. ಅಂಕಿ ಅಂಶ ಒದಗಿಸಲು ಕೋರಿ ಪೊಲೀಸ್‌, ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಇದಕ್ಕೆ ಪೀಠವು, ದೆಹಲಿಯಲ್ಲಿ ಜಿಲ್ಲಾ ಮಟ್ಟದಲ್ಲಿ ಕಾರ್ಯಪಡೆ ಇದ್ದು, ಮಕ್ಕಳ ಅಗತ್ಯವನ್ನು ಆಧರಿಸಿ ಆದಷ್ಟುಶೀಘ್ರ ಮಾಹಿತಿಯನ್ನು ರವಾನಿಸಬೇಕು ಎಂದು ಅಭಿಪ್ರಾಯಪಟ್ಟಿತು.

ಸಂಬಂಧಿತ ಯೋಜನೆಗಳನ್ನು ಜಾರಿಗೊಳಿಸಲು ಕೋರ್ಟ್‌ ಆದೇಶಕ್ಕೆ ಕಾಯುತ್ತಾ ಕುಳಿತುಕೊಳ್ಳಬಾರದು. ಕೆಲ ಮಕ್ಕಳು 2020ರ ಮಾರ್ಚ್‌ನಲ್ಲಿಯೇ ಅನಾಥರಾಗಿದ್ದಾರೆ ಎಂದು ಪೀಠ ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT