ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿ ಮಸೀದಿ: ನಮಾಜ್‌ಗೆ ಅಡ್ಡಿ ಮಾಡಬಾರದು, ಶಿವಲಿಂಗ ರಕ್ಷಿಸಿ ಎಂದ ಸುಪ್ರೀಂ

Last Updated 17 ಮೇ 2022, 18:41 IST
ಅಕ್ಷರ ಗಾತ್ರ

ನವದೆಹಲಿ: ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಜಾಗಕ್ಕೆ ರಕ್ಷಣೆ ನೀಡಿ ಮತ್ತು ಮುಸ್ಲಿಮರು ಮಸೀದಿಯಲ್ಲಿ ನಮಾಜ್ ಮಾಡಲು ಅವಕಾಶ ಮಾಡಿಕೊಡಿ ಎಂದು ವಾರಾಣಸಿ ಜಿಲ್ಲಾಡಳಿತಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ ನೀಡಿದೆ.

ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು, ವಿಡಿಯೊ ಸಮೀಕ್ಷೆಯಲ್ಲಿ ಭಾಗಿಯಾಗಿದ್ದ ಕ್ಯಾಮೆರಾಮನ್‌ ಸೋಮವಾರ ಮಾಧ್ಯಮಗಳ ಎದುರು ಹೇಳಿದ್ದರು. ಅದರ ಬೆನ್ನಲ್ಲೇ ಶಿವಲಿಂಗ ಪತ್ತೆಯಾದ ಜಾಗಕ್ಕೆ ಪ್ರವೇಶ ನಿರ್ಬಂಧಿಸಿ ವಾರಾಣಸಿ ಜಿಲ್ಲಾ ಸಿವಿಲ್ ನ್ಯಾಯಾಲಯವು ಆದೇಶ ಹೊರಡಿಸಿತ್ತು.ಜ್ಞಾನವಾಪಿ ಮಸೀದಿ ನಿರ್ವಹಣಾ ಸಮಿತಿಯುವಿಡಿಯೊ ಸಮೀಕ್ಷೆಗೆ ತಡೆ ನೀಡುವಂತೆ ಸುಪ್ರಿಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಸಮೀಕ್ಷೆಗೆ ತಡೆ ನೀಡಲು ಸುಪ್ರಿಂ ಕೋರ್ಟ್‌ ನಿರಾಕರಿಸಿತ್ತು. ಆದರೆ ಅರ್ಜಿಯನ್ನು ವಿಚಾರಣೆಗೆ ಎತ್ತಿಕೊಂಡಿತ್ತು.

ಮಸೀದಿ ನಿರ್ವಹಣಾ ಸಮಿತಿಯು ಮಂಗಳವಾರದ ವಿಚಾರಣೆ ವೇಳೆ, ‘ವಿಡಿಯೊ ಸಮೀಕ್ಷೆಗಾಗಿ ನೇಮಕ ಮಾಡಿದ್ದ ಕಮಿಷನ್‌, ಮುಚ್ಚಿದ ಲಕೋಟೆಯಲ್ಲಿ ತನ್ನ ವರದಿ ಸಲ್ಲಿಸಬೇಕಿತ್ತು. ಕಮಿಷನ್‌ ಇನ್ನೂ ತನ್ನ ವರದಿಯನ್ನು ಸಲ್ಲಿಸಿಲ್ಲ. ಆದರೆ ಅದಕ್ಕೂ ಮುನ್ನವೇ ಅರ್ಜಿದಾರರು, ‘ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ. ಆ ಪ್ರದೇಶವನ್ನು ರಕ್ಷಿಸಿ, ಪೂಜೆಗೆ ಅವಕಾಶ ಸಲ್ಲಿಸಿ’ ಎಂದು ಮತ್ತೊಂದು ಅರ್ಜಿ ಸಲ್ಲಿಸಿದರು. ‘ನಮ್ಮ ವಾದವನ್ನು ಕೇಳದೆಯೇ, ಸಿವಿಲ್ ನ್ಯಾಯಾಲಯವು ಆದೇಶ ಹೊರಡಿಸಿದೆ. ಮಸೀದಿಯ ಒಂದು ಭಾಗಕ್ಕೆ ಪ್ರವೇಶವನ್ನು ನಿರ್ಬಂಧಿಸಿದೆ. ಇದು 1991ರ ಪೂಜಾಸ್ಥಳ (ವಿಶೇಷ ಅವಕಾಶಗಳು) ಕಾಯ್ದೆಯ ಉಲ್ಲಂಘನೆ. ಹೀಗಾಗಿ ಸಿವಿಲ್ ನ್ಯಾಯಾಲಯದಲ್ಲಿನ ಪ್ರಕ್ರಿಯೆಗೆ ತಡೆ ನೀಡಬೇಕು’ ಎಂದು ಮನವಿ ಮಾಡಿದರು.

ಉತ್ತರ ಪ್ರದೇಶ ಸರ್ಕಾರದ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ‘ಮುಸ್ಲಿಮರು ನಮಾಜ್‌ಗೆ ಮೊದಲು ಶುದ್ಧೀಕರಣ ನಡೆಸುವ ಸ್ಥಳದಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ ಯಾವುದೇ ಹಾನಿಯಾದರೆ ಅದರಿಂದ ಕಾನೂನು ಮತ್ತು ಸುವ್ಯವಸ್ಥೆಯ ಸಮಸ್ಯೆ ಉದ್ಭವಿಸುತ್ತದೆ. ಮುಸ್ಲಿಮರು ಶುದ್ಧೀಕರಣವನ್ನು ಬೇರೆ ಜಾಗದಲ್ಲಿ ನಡೆಸಬಹುದು. ಆದರೆ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಜಾಗವನ್ನು ರಕ್ಷಿಸಬೇಕು’ ಎಂದು ತಮ್ಮ ವಾದವನ್ನು ಮಂಡಿಸಿದರು.

ಎರಡೂ ಕಡೆಯ ವಾದಗಳನ್ನು ಕೇಳಿದ ಪೀಠವು, ‘ಹಿಂದೂಗಳ ಪರವಾಗಿ ಅರ್ಜಿ ಸಲ್ಲಿಸಿರುವವರ ಪರ ವಕೀಲರು ಇಲ್ಲಿಗೆ ಬರುವವರೆಗೂ ಈ ಮಧ್ಯಂತರ ಆದೇಶ ಜಾರಿಯಲ್ಲಿ ಇರಲಿದೆ. ಎರಡೂ ಕಡೆಯ ವಾದಿಗಳ ಹಕ್ಕುಗಳ ವಿಚಾರದಲ್ಲಿ ನಾವು ಸಮತೋಲನ ಸಾಧಿಸಬೇಕಿದೆ. ಹೀಗಾಗಿ ಶಿವಲಿಂಗ ಪತ್ತೆಯಾಗಿದೆ ಎಂದು ಹೇಳಲಾಗುತ್ತಿರುವ ಜಾಗವನ್ನು ರಕ್ಷಿಸಬೇಕು ಮತ್ತು ಮುಸ್ಲಿಮರ ಧಾರ್ಮಿಕ ಹಕ್ಕುಗಳಿಗೆ ಅಡ್ಡಿಯಾಗದಂತೆ, ನಮಾಜ್ ಮಾಡಲು ಹಾಗೂ ಧಾರ್ಮಿಕ ಆಚರಣೆಗಳಿಗೆ ಅವಕಾಶ ಮಾಡಿಕೊಡಲು ವಾರಾಣಸಿ ಜಿಲ್ಲಾಡಳಿತಕ್ಕೆ ಸೂಚಿಸುತ್ತೇವೆ’ ಎಂದು ಪೀಠವು ಆದೇಶಿಸಿತು.

ಅರ್ಜಿಯ ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಿದೆ.

ನೀವು ಯಾರು?: ಅರ್ಜಿದಾರರಿಗೆ ಪ್ರಶ್ನೆ

ಜ್ಞಾನವಾಪಿ ಮಸೀದಿಯ ವಿಡಿಯೊ ಸಮೀಕ್ಷೆಗೆ ತಡೆ ನಿಡಬೇಕು ಎಂದು ಮಸೀದಿ ನಿರ್ವಹಣಾ ಸಮಿತಿ ಸಲ್ಲಿಸಿರುವ ಅರ್ಜಿಗೆ ತಡೆ ನೀಡಬೇಕು ಎಂದು ಕೋರಿ ಅರ್ಜಿ ಸಲ್ಲಿಸಿದ್ದ ‘ಹಿಂದು ಸೇನಾ’ ಅಧ್ಯಕ್ಷ ವಿಷ್ಣು ಗುಪ್ತಾ ಅವರನ್ನು, ‘ಈ ವಿಚಾರದಲ್ಲಿ ಅರ್ಜಿ ಸಲ್ಲಿಸಲು ನೀವು ಯಾರು? ನಿಮಗೇನು ಅಧಿಕಾರವಿದೆ?’ ಎಂದು ಸುಪ್ರೀಂ ಕೋರ್ಟ್‌ ಪ್ರಶ್ನಿಸಿದೆ.

‘ನಾನೊಬ್ಬ ಭಕ್ತ’ ಎಂದು ವಿಷ್ಣುಗುಪ್ತಾ ಹೇಳಿದರು. ಅದನ್ನು ನಿರಾಕರಿಸಿದ ಸುಪ್ರೀಂ ಕೋರ್ಟ್‌ ಪೀಠವು, ‘ಇದು ಸಿವಿಲ್ ವ್ಯಾಜ್ಯ. ಇದರಲ್ಲಿ ಮಧ್ಯಸ್ಥಿಕೆಯ ಅವಶ್ಯಕತೆ ಇಲ್ಲ ಎಂಬುದನ್ನು ನೀವು ತಿಳಿದುಕೊಳ್ಳಿ’ ಎಂದು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT