ಪಶ್ಚಿಮ ಬಂಗಾಳ ಸರ್ಕಾರದ ಅರ್ಜಿ ವಜಾಗೊಳಿಸಿದ ‘ಸುಪ್ರೀಂ ಕೋರ್ಟ್’

ನವದೆಹಲಿ: ಯುಪಿಎಸ್‌ಸಿ ಜೊತೆ ಸಮಾಲೋಚನೆ ನಡೆಸದೇ ಡಿಜಿಪಿ ನೇಮಕ ಮಾಡಲು ಅನುಮತಿ ಕೋರಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ಶುಕ್ರವಾರ ವಜಾಗೊಳಿಸಿತು.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ನಾಗೇಶ್ವರ ರಾವ್, ಬಿ.ಆರ್.ಗವಾಯಿ ಹಾಗೂ ಬಿ.ವಿ.ನಾಗರತ್ನ ಅವರಿರುವ ನ್ಯಾಯಪೀಠ, ’ಇಂಥ ನಡೆ ಕಾಯ್ದೆಯ ನಿಂದನೆಯಾಗುತ್ತದೆ’ ಎಂದು ಅಭಿಪ್ರಾಯಪಟ್ಟಿತು.
ಆದರೆ, ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆಗೆ ಸಂಬಂಧಿಸಿದ ಅರ್ಜಿಯ ವಿಚಾರಣೆಯಲ್ಲಿ ತನ್ನನ್ನು ಸಹ ಕಕ್ಷಿಗಾರನಾಗಿ ಮಾಡುವಂತೆ ಕೋರಿ ಪಶ್ಚಿಮ ಬಂಗಾಳ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಪೀಠ ಅಂಗೀಕರಿಸಿತು.
‘ನಿಮ್ಮ ಅರ್ಜಿಯನ್ನು ಪರಿಶೀಲಿಸಿದ್ದೇವೆ. ಡಿಜಿಪಿ ನೇಮಕದಲ್ಲಿ ಯುಪಿಎಸ್‌ಸಿ ಪಾತ್ರ ಇರಬಾರದು ಎಂಬುದಾಗಿ ಈ ಹಿಂದೆಯೂ ನಿಮ್ಮ ವಾದವಾಗಿತ್ತು. ಇಂಥ ಕ್ರಮಕ್ಕೆ ಅನುಮತಿ ನೀಡಲು ಸಾಧ್ಯವಿಲ್ಲ. ಇದು ಕಾನೂನಾತ್ಮಕ ಪ್ರಕ್ರಿಯೆಯ ನಿಂದನೆಯಾಗುತ್ತದೆ. ಹೀಗಾಗಿ ನಿಮ್ಮ ಅರ್ಜಿಯನ್ನು ವಜಾಗೊಳಿಸುತ್ತೇವೆ’ ಎಂದು ಪಶ್ಚಿಮ ಬಂಗಾಳ ಪರ ವಕೀಲ ಸಿದ್ಧಾರ್ಥ ಲೂಥ್ರಾ ಅವರನ್ನು ಉದ್ದೇಶಿಸಿ ನ್ಯಾಯಪೀಠ ಹೇಳಿತು.
‘ಇತರ ರಾಜ್ಯಗಳು ಸಹ ಇಂಥ ವಿಷಯಗಳಿಗೆ ಸಂಬಂಧಿಸಿ ಅರ್ಜಿಗಳನ್ನು ಸಲ್ಲಿಸಿದರೆ, ಬೇರೆ ಅರ್ಜಿಗಳ ವಿಚಾರಣೆಗೆ ನಮಗೆ ಸಮಯವೇ ಸಿಗುವುದಿಲ್ಲ’ ಎಂದೂ ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿತು.
ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆಗೆ ಸಂಬಂಧಿಸಿ ಪ್ರಕಾಶ್ ಸಿಂಗ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಡಿಜಿಪಿಗಳ ನೇಮಕಕ್ಕೆ ಅನುಕೂಲವಾಗುವಂತೆ, ಈ ಅರ್ಜಿಗೆ ಸಂಬಂಧಿಸಿದ ತನ್ನ ಆದೇಶವನ್ನು ಮಾರ್ಪಡಿಸುವಂತೆ ಕೋರಿ ಪಶ್ಚಿಮ ಬಂಗಾಳ ಸರ್ಕಾರ ಅರ್ಜಿ ಸಲ್ಲಿಸಿತ್ತು.
ಅರ್ಜಿದಾರ ಪ್ರಕಾಶ್ ಸಿಂಗ್ ಪರ ವಾದ ಮಂಡಿಸಿದ ವಕೀಲ ಪ್ರಶಾಂತ್ ಭೂಷಣ್, ‘ಪೊಲೀಸ್ ವ್ಯವಸ್ಥೆಯಲ್ಲಿ ಸುಧಾರಣೆಗೆ ಸಂಬಂಧಿಸಿ ಸುಪ್ರೀಂಕೋರ್ಟ್ ನೀಡಿದ್ದ ನಿರ್ದೇಶನಗಳನ್ನು ಬಹುತೇಕ ರಾಜ್ಯಗಳು ಜಾರಿಗೊಳಿಸಿಲ್ಲ. ಹೀಗಾಗಿ ಅರ್ಜಿಯ ವಿಚಾರಣೆಯನ್ನು ತ್ವರಿತಗೊಳಿಬೇಕು ’ ಎಂದು ಮನವಿ ಮಾಡಿದರು.
ಇದಕ್ಕೆ ಸಮ್ಮತಿಸಿದ ನ್ಯಾಯಪೀಠ, ಅಕ್ಟೊಬರ್‌ನಲ್ಲಿ ವಿಚಾರಣೆ ನಡೆಸುವುದಾಗಿ ಹೇಳಿತು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.