ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜ್ಞಾನವಾಪಿ: ವಿಚಾರಣೆ ಪ್ರಕ್ರಿಯೆ ಸ್ಥಗಿತಕ್ಕೆ ವಾರಾಣಸಿ ಕೋರ್ಟ್‌ಗೆ ಸುಪ್ರೀಂ ಆದೇಶ

Last Updated 19 ಮೇ 2022, 20:08 IST
ಅಕ್ಷರ ಗಾತ್ರ

ನವದೆಹಲಿ: ಜ್ಞಾನವಾ‍ಪಿ ಮಸೀದಿ ಮೊಕದ್ದಮೆಗೆ ಸಂಬಂಧಿಸಿದ ಯಾವುದೇ ಪ್ರಕ್ರಿಯೆಯನ್ನು ಶುಕ್ರವಾರದವರೆಗೆ ನಡೆಸಬೇಡಿ ಎಂದು ಸುಪ್ರೀಂ ಕೋರ್ಟ್‌ ವಾರಾಣಸಿ ಜಿಲ್ಲಾ ನ್ಯಾಯಾಲಯಕ್ಕೆ ಸೂಚನೆ ನೀಡಿದೆ. ಜತೆಗೆ ಮಸೀದಿಯಲ್ಲಿ ವಿಡಿಯೊ ಸಮೀಕ್ಷೆ ನಡೆಸುವುದರ ವಿರುದ್ಧ ಸಲ್ಲಿಸಲಾಗಿರುವ ಅರ್ಜಿಯನ್ನು ಶುಕ್ರವಾರ ಮಧ್ಯಾಹ್ನ 3ಕ್ಕೆ ವಿಚಾರಣೆಗೆ ಎತ್ತಿಕೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್, ಸೂರ್ಯಕಾಂತ್ ಮತ್ತು ಪಿ.ಎಸ್‌.ನರಸಿಂಹ ಅವರಿದ್ದ ಪೀಠವು ಈ ಅರ್ಜಿಯ ವಿಚಾರಣೆಯನ್ನು ಗುರುವಾರ ಆರಂಭಿಸಿತು. ಆದರೆ, ಪ್ರತಿವಾದಿಗಳಾದ ಹಿಂದೂ ಮಹಿಳೆಯರ ಪರ ವಕೀಲ ಹರಿಶಂಕರ್ ಜೈನ್ ಅವರು ಅನಾರೋಗ್ಯದ ಕಾರಣ ಗುರುವಾರವೂ ವಿಚಾರಣೆಗೆ ಹಾಜರಾಗಲಿಲ್ಲ. ಹರಿಶಂಕರ್ ಜೈನ್ ಪರವಾಗಿ ಮಾತ ನಾಡಿದ ವಕೀಲ ವಿಷ್ಣು ಶಂಕರ್ ಜೈನ್ ಅವರು, ‘ಹರಿಶಂಕರ್ ಅವರು ಬುಧವಾರವಷ್ಟೇ ಆಸ್ಪತ್ರೆಯಿಂದ ಮನೆಗೆ ಹೋಗಿದ್ದಾರೆ. ಗುರುವಾರ ವಿಚಾರಣೆಗೆ ಬರಲು ಸಾಧ್ಯವಾಗಿಲ್ಲ. ಅವರು ಶುಕ್ರವಾರ ಬರಲಿದ್ದಾರೆ. ಹೀಗಾಗಿ ವಿಚಾರಣೆಯನ್ನು ಮುಂದೂಡಿ’ ಎಂದು ಕೋರಿದರು. ಇದನ್ನು ಪೀಠ ಮಾನ್ಯ ಮಾಡಿತು.

ಆಗ ಜ್ಞಾನವಾಪಿ ಮಸೀದಿ ನಿರ್ವಹಣಾ ಸಮಿತಿ ಪರ ವಕೀಲ ಹುಜೇಫಾ ಅಹ್ಮದಿ ಅವರು, ‘ವಿಚಾರಣೆ ಮುಂದೂಡಲು ನಮ್ಮಿಂದ ಯಾವುದೇ ಆಕ್ಷೇಪವಿಲ್ಲ. ಆದರೆ, ಇದೇ ಮೊಕದ್ದಮೆಗೆ ಸಂಬಂಧಿಸಿದಂತೆ ವಾರಾಣಸಿ ಜಿಲ್ಲಾ ಸಿವಿಲ್ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಜತೆಗೆ ಮಸೀದಿಯ ಗೋಡೆಯನ್ನು ಕೆಡವಲು ಅನುಮತಿ ಕೋರಿ ಹೊಸ ಅರ್ಜಿ ಸಲ್ಲಿಸಲಾಗಿದೆ. ಗೋಡೆ ಕೆಡವಿದರೆ, ಇಡೀ ಮಸೀದಿ ನೆಲಸಮವಾಗುತ್ತದೆ. ಈ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುವವರೆಗೂ, ವಾರಾಣಸಿ ಜಿಲ್ಲಾ ಸಿವಿಲ್ ನ್ಯಾಯಾಲಯದಲ್ಲಿ ಯಾವುದೇ ಪ್ರಕ್ರಿಯೆ ನಡೆಸದಂತೆ ನಿರ್ದೇಶನ ನೀಡಿ’ ಎಂದು ಕೋರಿದರು.

ಅಹ್ಮದಿ ಅವರ ಮನವಿಯನ್ನೂ ಮಾನ್ಯ ಮಾಡಿದ ಪೀಠವು, ‘ಈ ಅರ್ಜಿಯ ವಿಚಾರಣೆಯನ್ನು ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ನಡೆಸುತ್ತೇವೆ. ಅಲ್ಲಿಯವರೆಗೂ ಯಾವುದೇ ಪ್ರಕ್ರಿಯೆ ನಡೆಸಬೇಡಿ ಮತ್ತು ಆದೇಶ ನೀಡಬೇಡಿ’ ಎಂದು ವಾರಾಣಸಿ ಜಿಲ್ಲಾ ಸಿವಿಲ್ ನ್ಯಾಯಾಲಯಕ್ಕೆ ಸೂಚನೆ ನೀಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT